ಬೆಂಗಳೂರು: ರಾಜ್ಯ ರಾಜಕಾರಣದ ಅಂಗಳದಲ್ಲಿ ಈಗ ಸಾಮಾಜಿಕ ಜಾಲತಾಣಗಳ ಸಮರ ತಾರಕಕ್ಕೇರಿದೆ. ಸದಾ ಸಂವಿಧಾನ, ಸಿದ್ಧಾಂತ ಮತ್ತು ಸಾಮಾಜಿಕ ನ್ಯಾಯದ ಬಗ್ಗೆ ಪಾಠ ಮಾಡುವ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಜೆಡಿಎಸ್ ನೇರವಾಗಿಯೇ ಸವಾಲು ಹಾಕಿದೆ. ಎಕ್ಸ್ ಸಾಮಾಜಿಕ ಜಾಲತಾಣದಲ್ಲಿ ಸರಣಿ ಟ್ವೀಟ್ ಮಾಡಿರುವ ಜೆಡಿಎಸ್, ಖರ್ಗೆ ಕುಟುಂಬದ ರಾಜಕೀಯ ಮತ್ತು ಇಲಾಖೆಯಲ್ಲಿನ ನೇಮಕಾತಿ ಅಕ್ರಮಗಳನ್ನು ಉಲ್ಲೇಖಿಸಿ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ವಾಗ್ದಾಳಿ ನಡೆಸಿದೆ.
ಖರ್ಗೆ ಪ್ರೈವೇಟ್ ಲಿಮಿಟೆಡ್ ಅಬ್ಬರ
ಜೆಡಿಎಸ್ ತನ್ನ ವಾಗ್ದಾಳಿಯಲ್ಲಿ ಮುಖ್ಯವಾಗಿ ಖರ್ಗೆ ಕುಟುಂಬದ ರಾಜಕೀಯ ಏಳಿಗೆಯನ್ನು ಪ್ರಶ್ನಿಸಿದೆ. ಗುರುಮಠಕಲ್ ಕ್ಷೇತ್ರವು ಸಾಮಾನ್ಯ ಕ್ಷೇತ್ರವಾಗಿ ಬದಲಾದ ತಕ್ಷಣ ಅಲ್ಲಿ ಸ್ಪರ್ಧಿಸುವ ಧೈರ್ಯ ತೋರದೆ, ಚಿತ್ತಾಪುರ ಮೀಸಲು ಕ್ಷೇತ್ರಕ್ಕೆ ಬಂದು ಮತ್ತೊಬ್ಬ ದಲಿತ ನಾಯಕನ ರಾಜಕೀಯ ಅವಕಾಶವನ್ನು ಕಸಿದುಕೊಂಡಿದ್ದೇಕೆ ಎಂದು ಜೆಡಿಎಸ್ ಕಿಡಿಕಾರಿದೆ. ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಅವರು ನೀಡಿದ ಮೀಸಲಾತಿ ವ್ಯವಸ್ಥೆಯು ಕೇವಲ ಖರ್ಗೆ ಕುಟುಂಬದ ಉದ್ಧಾರಕ್ಕಾಗಿ ಮಾತ್ರ ಬಳಕೆಯಾಗುತ್ತಿದೆಯೇ ಎಂಬ ಗಂಭೀರ ಪ್ರಶ್ನೆಯನ್ನು ಎತ್ತಿದೆ. ನಿಮ್ಮನ್ನು ನೀವು ಉದ್ಧಾರ ಮಾಡಿಕೊಳ್ಳುವುದೇ ದಲಿತರ ಉದ್ಧಾರ ಎಂದು ಭಾವಿಸಿದ್ದೀರಾ ಎಂದು ಲೇವಡಿ ಮಾಡಿದೆ.
ನೇಮಕಾತಿ ಅಕ್ರಮ
ಕೇವಲ ರಾಜಕೀಯ ಪ್ರಾತಿನಿಧ್ಯ ಮಾತ್ರವಲ್ಲದೆ, ಪ್ರಿಯಾಂಕ್ ಖರ್ಗೆ ಅವರ ಇಲಾಖೆಯಾದ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಕೆಪಿಎಸ್ಸಿ ನೇಮಕಾತಿ ಅಕ್ರಮದ ಬಗ್ಗೆಯೂ ಜೆಡಿಎಸ್ ಬೆರಳು ಮಾಡಿದೆ. ಎಇಇ ನೇಮಕಾತಿಯಲ್ಲಿ ಅರ್ಹ ದಲಿತ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ಬೆನ್ನಿಗೆ ಚೂರಿ ಹಾಕಲಾಗಿದೆ. ಓಎಂಆರ್ ಶೀಟ್ ತಿದ್ದಿ ಅಕ್ರಮ ಎಸಗಿದವರಿಗೆ ಷರತ್ತುಬದ್ಧ ನೇಮಕಾತಿ ನೀಡಿರುವುದು ಯಾವ ಸೀಮೆಯ ಸಮಾಜವಾದ ಎಂದು ಪ್ರಶ್ನಿಸಿದೆ. ಹಗಲು ರಾತ್ರಿ ಕಷ್ಟಪಟ್ಟು ಓದಿದ ಬಡ ಪ್ರತಿಭಾವಂತ ಯುವಕರ ಭವಿಷ್ಯವನ್ನು ನಿಮ್ಮ ಇಲಾಖೆ ಬಲಿ ತೆಗೆದುಕೊಳ್ಳುತ್ತಿದೆ ಎಂದು ಆರೋಪಿಸಿದೆ.
ಪಲಾಯನ ಮಾಡುತ್ತಿದ್ದಾರೆಯೇ ಸಚಿವರು?
ಈ ಹಗರಣಕ್ಕೆ ಸಂಬಂಧಿಸಿದಂತೆ ಜೆಡಿಎಸ್ ಕೇಳಿರುವ 10 ನೇರ ಪ್ರಶ್ನೆಗಳಿಗೆ ಉತ್ತರ ನೀಡಲಾಗದೆ ಸಚಿವರು ಪಲಾಯನ ಮಾಡುತ್ತಿದ್ದಾರೆ ಎಂದು ಟೀಕಿಸಲಾಗಿದೆ. ಭ್ರಷ್ಟಾಚಾರಕ್ಕೆ ಕ್ಲೀನ್ ಚಿಟ್ ನೀಡುವುದು ಮತ್ತು ಕುಟುಂಬಕ್ಕೊಂದು ಮೀಸಲು ಸೀಟು ಪಡೆಯುವುದೇ ನಿಮ್ಮ ಬೂಟಾಟಿಕೆಯ ಸಮಾಜವಾದವೇ ಎಂಬುದು ಜೆಡಿಎಸ್ ಸಂಘಟಿತ ದಾಳಿಯ ಸಾರಾಂಶವಾಗಿದೆ. ಕಳೆದ 50 ವರ್ಷಗಳಿಂದ ಶೋಷಿತ ಸಮುದಾಯಗಳ ಹೆಸರಿನಲ್ಲಿ ಅಧಿಕಾರ ಅನುಭವಿಸಿ ಈಗ ಮೊಸಳೆ ಕಣ್ಣೀರು ಸುರಿಸಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ. ಈ ವಾಗ್ದಾಳಿ ಈಗ ಕಾಂಗ್ರೆಸ್ ಮತ್ತು ಜೆಡಿಎಸ್ ನಡುವಿನ ಶೀತಲ ಸಮರವನ್ನು ಬೀದಿ ರಂಪಾಟಕ್ಕೆ ತಂದು ನಿಲ್ಲಿಸಿದೆ.








