ಮಂಗಳೂರು: ರಾಜ್ಯ ರಾಜಕಾರಣದ ಇಬ್ಬರು ಪ್ರಮುಖ ನಾಯಕರುಗಳಾದ ಸಚಿವ ಪ್ರಿಯಾಂಕ್ ಖರ್ಗೆ ಮತ್ತು ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ನಡುವಿನ ಸ್ಟಿಂಗ್ ಆಪರೇಷನ್ ಸಮರ ಈಗ ಸಮುದ್ರ ತೀರಕ್ಕೆ ಬಂದು ತಲುಪಿದೆ. ಇಷ್ಟು ದಿನ ಹಳೆ ಮೈಸೂರು ಭಾಗಕ್ಕೆ ಸೀಮಿತವಾಗಿದ್ದ ಕುಮಾರಣ್ಣನ ಕ್ರೇಜ್ ಈಗ ಕರಾವಳಿಯ ಉದ್ದಗಲಕ್ಕೂ ವ್ಯಾಪಿಸಿದ್ದು, ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಕರಾವಳಿಯ ಜನತೆ ಬಹಿರಂಗ ಸವಾಲು ಹಾಕುವ ಮೂಲಕ ಹೊಸ ರಾಜಕೀಯ ಕಂಪನ ಸೃಷ್ಟಿಸಿದ್ದಾರೆ. ಕರಾವಳಿ ಭಾಗದ ಪ್ರಮುಖ ರಸ್ತೆಗಳಲ್ಲಿ ಮತ್ತು ವೃತ್ತಗಳಲ್ಲಿ ರಾರಾಜಿಸುತ್ತಿರುವ ಬ್ಯಾನರ್ ಗಳು ಈಗ ಕಾಂಗ್ರೆಸ್ ಪಾಳೆಯದಲ್ಲಿ ತಲ್ಲಣ ಮೂಡಿಸಿವೆ.
ದಶಕಗಳ ಭಾವನಾತ್ಮಕ ರಾಜಕಾರಣಕ್ಕೆ ಇತಿಶ್ರೀ
ಕರಾವಳಿ ಭಾಗವನ್ನು ದಶಕಗಳಿಂದ ಕೇವಲ ಭಾವನಾತ್ಮಕ ವಿಷಯಗಳಿಗೆ ಮತ್ತು ಕೋಮು ಧ್ರುವೀಕರಣಕ್ಕೆ ಮಾತ್ರ ಬಳಸಿಕೊಳ್ಳಲಾಗುತ್ತಿದೆ ಎಂಬ ಅಸಮಾಧಾನ ಜನರ ಬ್ಯಾನರ್ ಗಳಲ್ಲಿ ಎದ್ದು ಕಾಣುತ್ತಿದೆ. ಮೀನುಗಾರರ ನಿರಂತರ ಸಂಕಷ್ಟಗಳು, ಅಡಿಕೆ ಬೆಳೆಗಾರರ ಕಣ್ಣೀರು ಮತ್ತು ಯುವಜನತೆಯನ್ನು ಕಾಡುತ್ತಿರುವ ಭೀಕರ ನಿರುದ್ಯೋಗ ಸಮಸ್ಯೆಗಳನ್ನು ಮರೆತು ಕೇವಲ ದ್ವೇಷದ ರಾಜಕಾರಣ ಮಾಡಲಾಗುತ್ತಿದೆ ಎಂದು ಜನರು ಆಕ್ರೋಶ ಹೊರಹಾಕಿದ್ದಾರೆ. ನಮಗೆ ಈಗ ಬೇಕಿರುವುದು ಧರ್ಮದ ಹೆಸರಿನ ಜಗಳವಲ್ಲ, ಬದಲಾಗಿ ಕುಮಾರಸ್ವಾಮಿ ಅವರಂತಹ ದೂರದೃಷ್ಟಿಯುಳ್ಳ ನಾಯಕತ್ವ ಮತ್ತು ಅಭಿವೃದ್ಧಿಪರ ಚಿಂತನೆ ಎಂದು ಕರಾವಳಿ ಮಂದಿ ಸಾರಿದ್ದಾರೆ. ಕುಮಾರಸ್ವಾಮಿ ಅವರ ಜನಪರ ಆಡಳಿತ ಶೈಲಿಯೇ ನಮಗೆ ಸ್ಫೂರ್ತಿ ಎಂದು ಬ್ಯಾನರ್ ಗಳಲ್ಲಿ ಬರೆಯುವ ಮೂಲಕ ಎಚ್ ಡಿ ಕೆ ಅವರ ನಾಯಕತ್ವಕ್ಕೆ ಜೈಕಾರ ಹಾಕಿದ್ದಾರೆ.
ಪ್ರಿಯಾಂಕ್ ಖರ್ಗೆಗೆ ಕರಾವಳಿ ಅಖಾಡದ ಸವಾಲು
ಸಚಿವ ಪ್ರಿಯಾಂಕ್ ಖರ್ಗೆ ಅವರು ಸದಾ ಸಾಮಾಜಿಕ ಜಾಲತಾಣಗಳಲ್ಲಿ ಕುಮಾರಸ್ವಾಮಿ ಅವರ ವಿರುದ್ಧ ವಾಗ್ದಾಳಿ ನಡೆಸುತ್ತಿರುವುದನ್ನು ಗಮನಿಸಿರುವ ಕರಾವಳಿಯ ಜನತೆ, ಈಗ ಅವರಿಗೆ ನೇರ ಸವಾಲು ಹಾಕಿದ್ದಾರೆ. ನಿಮ್ಮಲ್ಲಿ ನಿಜವಾಗಿಯೂ ಧೈರ್ಯವಿದ್ದರೆ ಕರಾವಳಿಯ ಯಾವುದಾದರೂ ಒಂದು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧಿಸಿ ನೋಡಿ. ಆಗ ಕರಾವಳಿಯ ಜನರು ಯಾರ ಪರವಾಗಿದ್ದಾರೆ ಎಂಬುದು ನಿಮಗೆ ತಿಳಿಯಲಿದೆ. ನೀವು ಇಲ್ಲಿಗೆ ಬಂದರೆ ನಿಮ್ಮನ್ನು ಅತ್ಯಧಿಕ ಮತಗಳಿಂದ ಗೆಲ್ಲಿಸಿ ವಿಧಾನಸಭೆಗೆ ಕಳುಹಿಸುವ ಜವಾಬ್ದಾರಿ ನಮ್ಮದು ಎಂದು ಸವಾಲು ಹಾಕುವ ಮೂಲಕ, ಖರ್ಗೆ ಅವರಿಗೆ ತಮ್ಮ ಸುರಕ್ಷಿತ ಕೋಟೆಯನ್ನು ಬಿಟ್ಟು ಹೊರಬರುವಂತೆ ಉದ್ರೇಕಿಸಿದ್ದಾರೆ.
ಕುಮಾರಣ್ಣ ಈಗ ಅಖಂಡ ಕರ್ನಾಟಕದ ನಾಯಕ
ಕುಮಾರಸ್ವಾಮಿ ಅವರು ಕೇವಲ ಒಂದು ಜಿಲ್ಲೆ ಅಥವಾ ಒಂದು ಸಮುದಾಯಕ್ಕೆ ಸೀಮಿತವಾದ ನಾಯಕರಲ್ಲ ಎಂಬ ಸಂದೇಶ ಈಗ ಕರಾವಳಿಯಿಂದ ರವಾನೆಯಾಗಿದೆ. ಕರಾವಳಿಯ ಮನೆಮನೆಯಲ್ಲೂ ಕುಮಾರಣ್ಣನ ಆಡಳಿತದ ಬಗ್ಗೆ ಚರ್ಚೆಗಳು ನಡೆಯುತ್ತಿದ್ದು, ಇದು ಮುಂಬರುವ ಚುನಾವಣಾ ಸಮೀಕರಣಗಳನ್ನು ಬದಲಿಸುವ ಮುನ್ಸೂಚನೆ ನೀಡಿದೆ. ಸಚಿವ ಪ್ರಿಯಾಂಕ್ ಖರ್ಗೆ ಅವರ ವಿರುದ್ಧ ಕರಾವಳಿ ಭಾಗದ ಜನರೇ ತಿರುಗಿ ಬಿದ್ದಿರುವುದು ಕಾಂಗ್ರೆಸ್ ಸರ್ಕಾರಕ್ಕೆ ನುಂಗಲಾರದ ತುತ್ತಾಗಿ ಪರಿಣಮಿಸಿದೆ. ಸಮುದ್ರದ ಅಲೆಗಳಷ್ಟೇ ವೇಗವಾಗಿ ಹರಡುತ್ತಿರುವ ಈ ರಾಜಕೀಯ ಬದಲಾವಣೆಯ ಗಾಳಿ, ಮುಂದಿನ ದಿನಗಳಲ್ಲಿ ಯಾವ ರೀತಿಯ ಸ್ಫೋಟಕ್ಕೆ ಕಾರಣವಾಗಲಿದೆ ಎಂಬುದು ಕುತೂಹಲಕ್ಕೆ ಕಾರಣವಾಗಿದೆ.







