ಕಲಬುರಗಿ: ಸಮಾಜದಲ್ಲಿ ಹೆಮ್ಮಾರಿಯಂತೆ ಹರಡಿರುವ ಜಾತಿ ತಾರತಮ್ಯ ಮತ್ತು ಅಸ್ಪೃಶ್ಯತೆಯ ಕಳಂಕ ಹೀಗೆಯೇ ಮುಂದುವರಿದರೆ ಹಿಂದೂ ಧರ್ಮವು ಅಳಿವಿನ ಹಾದಿ ಹಿಡಿಯುವುದು ಖಚಿತ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅತ್ಯಂತ ಗಂಭೀರ ಎಚ್ಚರಿಕೆ ನೀಡಿದ್ದಾರೆ. ಕಲಬುರಗಿಯ ಬುದ್ಧ ವಿಹಾರದಲ್ಲಿ ಆಯೋಜಿಸಲಾಗಿದ್ದ 70ನೇ ಧಮ್ಮಚಕ್ರ ಪ್ರವರ್ತನ ದಿನದ ಅಂಗವಾಗಿ ಮಾತನಾಡಿದ ಅವರು, ಧರ್ಮದ ಹೆಸರಿನಲ್ಲಿ ನಡೆಯುತ್ತಿರುವ ಮಾನಸಿಕ ಕಿರುಕುಳ ಮತ್ತು ಅಸಮಾನತೆಯ ವಿರುದ್ಧ ಕೆಂಡಾಮಂಡಲರಾದರು.
ನನ್ನ ವ್ಯಕ್ತಿತ್ವಕ್ಕಿಂತ ನನ್ನ ಜಾತಿಯೇ ದೊಡ್ಡದಾಯಿತೇ?
ತಮ್ಮ ಸುದೀರ್ಘ ರಾಜಕೀಯ ಜೀವನದಲ್ಲಿ ಎದುರಿಸಿದ ಅವಮಾನವೊಂದನ್ನು ಅತ್ಯಂತ ಭಾವುಕರಾಗಿ ಹಂಚಿಕೊಂಡ ಖರ್ಗೆ, ದೇಶದಲ್ಲಿ ಇಂದಿಗೂ ಜಾತೀಯತೆ ಜೀವಂತವಾಗಿದೆ ಎಂಬುದಕ್ಕೆ ಸಾಕ್ಷಿ ನುಡಿದರು. ಉತ್ತರಾಖಂಡದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ನಾನು ಭಾಷಣ ಮಾಡಿ ಬಂದ ಎರಡು ದಿನಗಳ ನಂತರ, ನಾನು ನಿಂತಿದ್ದ ಸ್ಥಳವನ್ನೇ ನೀರಿನಿಂದ ತೊಳೆದು ಶುದ್ಧೀಕರಣ ಮಾಡಲಾಯಿತು. ಭಾಷಣ ಮುಗಿದ ತಕ್ಷಣ ಆ ಜಾಗವನ್ನು ಸ್ವಚ್ಛಗೊಳಿಸಿದ್ದರೆ ಅದು ಕೊಳಕು ಎಂದು ಭಾವಿಸಬಹುದಿತ್ತು. ಆದರೆ ಎರಡು ದಿನಗಳ ನಂತರ ಜಾಗ ತೊಳೆಯುವುದು ಎಂದರೆ ಅದು ನನ್ನ ಜಾತಿಯ ವಿರುದ್ಧದ ಅಸಹ್ಯ ಮತ್ತು ಮೂಢನಂಬಿಕೆಯಲ್ಲವೇ? ಇದು ಮನುಷ್ಯನಿಗೆ ನೀಡುವ ಅತಿದೊಡ್ಡ ಮಾನಸಿಕ ಕಿರುಕುಳ ಎಂದು ಅವರು ಆಕ್ರೋಶ ಹೊರಹಾಕಿದರು.
ನಾವೇನು ಮನುಷ್ಯರಲ್ಲವೇ? ಖರ್ಗೆ ನೇರ ಪ್ರಶ್ನೆ
ಸಮಾಜದ ಮೇಲ್ವರ್ಗದ ಮನಸ್ಥಿತಿಯನ್ನು ಪ್ರಶ್ನಿಸಿದ ಖರ್ಗೆ, ನೀವು ಮಾರ್ಟಿನ್ ಅಥವಾ ಮೊಹಮ್ಮದ್ ನಂತಹ ವಿದೇಶಿಯರನ್ನು ಮನೆಗೆ ಕರೆಯುತ್ತೀರಿ, ಆದರೆ ನಿಮ್ಮದೇ ದೇಶದ ಮಲ್ಲಿಕಾರ್ಜುನನನ್ನು ಏಕೇ ದೂರವಿಡುತ್ತೀರಿ? ನಮಗೆ ಕುಡಿಯಲು ನೀರು ನೀಡುವುದಿಲ್ಲ, ಕಲಿಯಲು ಶಿಕ್ಷಣ ಕೊಡಲಿಲ್ಲ, ಅಸ್ಪೃಶ್ಯತೆಯ ಹೆಸರಿನಲ್ಲಿ ನಮ್ಮನ್ನು ಗುಲಾಮಗಿರಿಗೆ ತಳ್ಳಲಾಯಿತು. ಇಂತಹ ಅಮಾನವೀಯ ವರ್ತನೆಯಿಂದಲೇ ಹಿಂದೂ ಧರ್ಮದಲ್ಲಿ ಒಡಕು ಮೂಡಲು ಕಾರಣವಾಯಿತು. ನಾವೇನು ಮನುಷ್ಯರಲ್ಲವೇ? ಎಂಬ ಪ್ರಶ್ನೆ ಇಂದಿಗೂ ದಲಿತ ಮತ್ತು ಶೋಷಿತ ಸಮುದಾಯಗಳನ್ನು ಕಾಡುತ್ತಿದೆ ಎಂದು ಅವರು ನುಡಿದರು.
ಅಂಬೇಡ್ಕರ್ ಅವರ ಬೌದ್ಧ ಧರ್ಮದ ಆಯ್ಕೆ ಮತ್ತು ದೂರದೃಷ್ಟಿ
ಹಿಂದೂ ಧರ್ಮದಲ್ಲಿನ ಅನ್ಯಾಯವನ್ನು ಸಹಿಸಲಾಗದೆ ಡಾ. ಬಿ.ಆರ್. ಅಂಬೇಡ್ಕರ್ ಅವರು 1935ರಲ್ಲೇ ನಾನು ಹಿಂದೂವಾಗಿ ಸಾಯುವುದಿಲ್ಲ ಎಂದು ಘರ್ಜಿಸಿದ್ದರು. ಧರ್ಮದ ಹೆಸರಿನಲ್ಲಿ ಜನರನ್ನು ಶೋಷಿಸುತ್ತಿದ್ದ ವ್ಯವಸ್ಥೆಯಿಂದ ಮುಕ್ತಿ ಪಡೆಯಲು ಅಂಬೇಡ್ಕರ್ ಅವರು ಬೌದ್ಧ ಧರ್ಮವನ್ನು ಆರಿಸಿಕೊಂಡರು. ಯಾವುದೇ ವಿದೇಶಿ ಮೂಲದ ಧರ್ಮವನ್ನು ಸ್ವೀಕರಿಸಿದರೆ ಭಾರತದ ಏಕತೆಗೆ ಧಕ್ಕೆಯಾಗಬಹುದು ಎಂಬ ಮಹಾನ್ ದೇಶಭಕ್ತಿಯ ಕಾರಣದಿಂದಲೇ ಅವರು ಈ ಮಣ್ಣಿನ ಸನಾತನ ಧರ್ಮವಾದ ಬೌದ್ಧ ಧರ್ಮವನ್ನು ಅಪ್ಪಿಕೊಂಡರು. ಅಂಬೇಡ್ಕರ್ ಅವರು ನಮಗೆ ತೋರಿಸಿಕೊಟ್ಟಿರುವ ಈ ಮುಕ್ತಿಯ ಹಾದಿಯೇ ಶೋಷಿತರ ಬದುಕಿಗೆ ಬೆಳಕು ಎಂದು ಮಲ್ಲಿಕಾರ್ಜುನ ಖರ್ಗೆ ಪ್ರತಿಪಾದಿಸಿದರು.








