ಬೆಂಗಳೂರು: ಹೋಂ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಓಡಾಡಿ ನಾಪತ್ತೆಯಾಗಿದ್ದ ಡ್ರೋನ್ ಪ್ರತಾಪ್ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ.
ಡ್ರೋನ್ ಪ್ರತಾಪ್ ಮನೆಯಿಂದ ಹೊರಗೆ ಬರದಂತೆ ಕೈಗೆ ವಿಕ್ಟೋರಿಯಾ ಆಸ್ಪತ್ರೆ ವೈದ್ಯರು ಹೋಂ ಕ್ವಾರಂಟೈನ್ ಸೀಲ್ ಹಾಕಿದ್ದರು. ಸೀಲ್ ಹಾಕಿದ ಮರು ದಿನವೇ ಕ್ವಾರಂಟೈನ್ ನಿಯಮ ಉಲ್ಲಂಘಿಸಿ ಖಾಸಗಿ ನ್ಯೂಸ್ ಚಾನೆಲೊಂದಕ್ಕೆ ಸಂದರ್ಶನದಲ್ಲಿ ಡ್ರೋನ್ ಪ್ರತಾಪ್ ಪಾಲ್ಗೊಂಡಿದ್ದ. ಅಲ್ಲದೆ, ಮನೆಯಿಂದ ಹಲವು ಬಾರಿ ಓಡಾಡಿದ್ದ. ಈ ಹಿನ್ನೆಲೆಯಲ್ಲಿ ವಿಕ್ಟೋರಿಯಾ ಆಸ್ಪತ್ರೆ ವೈದ್ಯರಾದ ಡಾ.ಪ್ರಯಾಗ್ ಪ್ರತಾಪ್ ವಿರುದ್ಧ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಡ್ರೋನ್ ಪ್ರತಾಪ್ ವಿರುದ್ಧ ಎಫ್‍ಐಆರ್ ದಾಖಲಾಗಿತ್ತು.
ಎಫ್‍ಐಆರ್ ಏಕೆ ಗೊತ್ತಾ..!
ಡ್ರೋನ್ ಪ್ರತಾಪ್ ಜುಲೈ 15ರಂದು ಹೈದರಾಬಾದ್‍ನಿಂದ ಬೆಂಗಳೂರಿಗೆ ಬಂದಿದ್ದ. ಬೆಂಗಳೂರಿಗೆ ಬಂದ ನಂತರ ತಲಘಟ್ಟಪುರದ ಅಪಾರ್ಟ್‍ಮೆಂಟ್‍ನಲ್ಲಿ ನೆಲೆಸಿದ್ದ. ಹೀಗಾಗಿ ಹೊರ ರಾಜ್ಯದಿಂದ ಬಂದ ಕಾರಣ ಪ್ರತಾಪ್‍ಗೆ ಹೋಂಕ್ವಾರಂಟೈನ್ ಮಾಡಿ ಕೈಗೆ ಸೀಲು ಹಾಕಲಾಗಿತ್ತು. ಹೋಂ ಕ್ವಾರಂಟೈನ್ ನಿಯಮದ ಪ್ರಕಾರ ಹೊರ ರಾಜ್ಯದಿಂದ ಬಂದವರು 14 ದಿನಗಳ ಕ್ವಾರಂಟೈನ್ ಆಗಬೇಕಿತ್ತು. ಆದರೆ, ಹೋಂ ಕ್ವಾರಂಟೈನ್ ಆದ ಮರು ದಿನವೇ ಖಾಸಗಿ ಚಾನೆಲ್‍ನಲ್ಲಿ ಸಂದರ್ಶನದಲ್ಲಿ ಪಾಲ್ಗೊಂಡಿದ್ದ.
ಈ ಹಿನ್ನೆಲೆಯಲ್ಲಿ ತಲಘಟ್ಟಪುರ ಪೊಲೀಸ್ ಠಾಣೆಗೆ ಬಿಬಿಎಂಪಿ ಅಧಿಕಾರಿಗಳು ಹಾಗೂ ವೈದ್ಯರು ದೂರು ನೀಡಿದ್ದರು. ದೂರಿನ ಆಧಾರದ ಮೇಲೆ ಎಫ್‍ಐಆರ್ ದಾಖಲಿಸಿಕೊಂಡಿದ್ದರು. ಎಫ್‍ಐಆರ್ ದಾಖಲಾಗುತ್ತಿದ್ದ ಡ್ರೋನ್ ಪ್ರತಾಪ್ ತಲೆಮರೆಸಿಕೊಂಡಿದ್ದ. ಹೀಗಾಗಿ ಪೊಲೀಸರು ಪ್ರತಾಪ್ ಶೋಧಕ್ಕೆ ವಿಶೇಷ ತಂಡ ರಚಿಸಿದ್ದರು.
ಡ್ರೋನ್ ಪ್ರತಾಪ್ ಫೋನ್ ಸ್ವಿಚ್ ಆಫ್ ಆದ ಕಾರಣ ಆತ ಮಂಡ್ಯ ಅಥವಾ ಚಿಕ್ಕಮಗಳೂರಿನಲ್ಲಿ ತಲೆ ಮರೆಸಿಕೊಂಡಿದ್ದಾನೆ ಎನ್ನಲಾಗಿತ್ತು. ಇದೀಗ ಆತ ಮೈಸೂರಿನಲ್ಲಿ ಪತ್ತೆಯಾಗಿದ್ದಾನೆ.
ಮೈಸೂರಿಗೆ ಪ್ರತಾಪ್ ತೆರಳಿರುವುದು ಕೂಡ ಹೋಂ ಕ್ವಾರಂಟೈನ್ ನಿಯಮದ ಉಲ್ಲಂಘನೆಯಾಗಿದೆ.








