* ವನ್ಯಜೀವಿ ಸಂರಕ್ಷಣಾ ಯೋಜನೆಗಳನ್ನು ಒಂದಾಗಿಸಲು, ಮಾಹಿತಿ ಹಂಚಿಕೊಳ್ಳಲು ಮತ್ತು ಪ್ರಾಣಿಗಳ ಆರೈಕೆಯ ಭವಿಷ್ಯಕ್ಕೆ ಹೊಸ ಆಯಾಮ ನೀಡಲು 30 ದೇಶಗಳ 98 ಸಂಸ್ಥೆಗಳು ಹಾಗೂ ಭಾರತದ 29 ಸಂಸ್ಥೆಗಳ ಸಂಗಮ
* ಬೆಂಗಳೂರಿನ ಖ್ಯಾತ ಪರಿಸರ ಪ್ರೇಮಿ ರಿಕಿ ಕೇಜ್ ಸಂಗೀತ ಕಾರ್ಯಕ್ರಮ
* ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊ. ರಾಮನ್ ಸುಕುಮಾರ್ ಭಾಗಿ
ಜಾಮ್‌ನಗರ (ಗುಜರಾತ್), 26ರಿಂದ 29 ಅಕ್ಟೋಬರ್ 2026: ಯುರೇಷಿಯನ್ ರೀಜನಲ್ ಅಸೋಸಿಯೇಷನ್ ಆಫ್ ಝೂಸ್ ಅಂಡ್ ಅಕ್ವೇರಿಯಮ್ಸ್ (EARAZA – ಇಎಆರ್‌ಎಝಡ್‌ಎ) ನ ವಾರ್ಷಿಕ ಸಮ್ಮೇಳನ 2026 ಅನ್ನು ‘ವಂತಾರಾ’ ಅತ್ಯಂತ ವೈಭವದಿಂದ ಆಯೋಜಿಸಿದೆ. “ವನ್ಯಜೀವಿ ಸಂರಕ್ಷಣೆಗಾಗಿ ಜಾಗತಿಕ ಸಹಭಾಗಿತ್ವದ ಸಬಲೀಕರಣ” ಎಂಬ ಆಶಯದೊಂದಿಗೆ ನಡೆಯುತ್ತಿರುವ ಈ ಸಮಾವೇಶದಲ್ಲಿ 30 ದೇಶಗಳ 98 ಪ್ರಮುಖ ಸಂಸ್ಥೆಗಳ ನಾಯಕರು, ಪಶುವೈದ್ಯರು, ವಿಜ್ಞಾನಿಗಳು ಮತ್ತು ಸಂರಕ್ಷಣಾಪಡೆಗಳು ಭಾಗವಹಿಸಿದ್ದರೆ, ಭಾರತದ 29 ಮೃಗಾಲಯ ಸಂಸ್ಥೆಗಳು ಸಾಥ್ ನೀಡಿವೆ.
ವಿಶೇಷವೆಂದರೆ ಮೂರು ಬಾರಿ ಗ್ರಾಮಿ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಹಾಗೂ ಬೆಂಗಳೂರಿನ ಖ್ಯಾತ ಪರಿಸರ ಪ್ರೇಮಿ ರಿಕಿ ಕೇಜ್ ಅವರ ಸಂಗೀತ ಕಾರ್ಯಕ್ರಮದೊಂದಿಗೆ ಉದ್ಘಾಟನಾ ಕಾರ್ಯಕ್ರಮ ಆರಂಭವಾಯಿತು. ಬಳಿಕ ಇಎಆರ್‌ಎಝಡ್‌ಎ ಅಧ್ಯಕ್ಷೆ ಶ್ರೀಮತಿ ಸ್ವೆಟ್ಲಾನಾ ಅಕುಲೋವಾ, ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್ಸಿ) ಪ್ರೊ. ರಾಮನ್ ಸುಕುಮಾರ್ ಮತ್ತು ಕೇಂದ್ರ ಮೃಗಾಲಯ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಡಾ. ವಿ. ಕ್ಲೆಮೆಂಟ್ ಬೆನ್ ಅವರು ಸಾಂಪ್ರದಾಯಿಕ ದೀಪ ಬೆಳಗಿಸಿ ಉದ್ಘಾಟಿಸಿದರು.
ಅತಿಥಿಗಳನ್ನು ಸ್ವಾಗತಿಸಿ ಮಾತನಾಡಿದ ವಂತಾರಾದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ವಿವಾನ್ ಕರಾನಿ, ಮೃಗಾಲಯ ನಿರ್ವಹಣೆಯ ಅತ್ಯಾಧುನಿಕ ‘ ಎಎನ್‌ಟಿಝಡ್ ಸಾಫ್ಟ್‌ವೇರ್ ಪ್ಲಾಟ್‌ಫಾರ್ಮ್’ ಅನ್ನು ಇಎಆರ್‌ಎ ಝಡ್‌ಎದ ಎಲ್ಲಾ ಸದಸ್ಯರಿಗೆ ಒಂದು ವರ್ಷದ ಅವಧಿಗೆ ಉಚಿತವಾಗಿ ನೀಡುವುದಾಗಿ ಘೋಷಿಸಿದರು.
“ವಂತಾರಾ ಎಂದರೆ ‘ಕಾಡಿನ ನಕ್ಷತ್ರ’ ಎಂದರ್ಥ. ಆದರೆ, ಒಂದೇ ಒಂದು ನಕ್ಷತ್ರ ಇಡೀ ಆಕಾಶವನ್ನು ಬೆಳಗಿಸಲು ಸಾಧ್ಯವಿಲ್ಲ. ಅದಕ್ಕೆ ನಕ್ಷತ್ರಗಳ ಸಮೂಹವೇ ಬೇಕು. ನಾವು ನಿರ್ಮಿಸಿದ್ದನ್ನು ಪ್ರದರ್ಶಿಸಲು ಮಾತ್ರ ಇಲ್ಲಿಗೆ ಬಂದಿಲ್ಲ; ನಿಮ್ಮಿಂದ ಕಲಿಯಲು, ನಿಮ್ಮೊಂದಿಗೆ ಕೈಜೋಡಿಸಲು ಬಂದಿದ್ದೇವೆʼʼ ಎಂದವರು ಹೇಳಿದರು.
“ಇಂದಿನ ಪರಿಸರ ಸಂರಕ್ಷಣೆ ಕೇವಲ ದೇಶದ ಗಡಿಗಳಿಗೆ ಸೀಮಿತವಾಗಿಲ್ಲ. ಸಂಸ್ಥೆಗಳು ತಮ್ಮ ಡೇಟಾ ಮತ್ತು ಪರಿಂತಿಯನ್ನು ಹಂಚಿಕೊಂಡಾಗ ಪ್ರತಿಯೊಂದು ಯೋಜನೆಯೂ ಶಕ್ತಿಶಾಲಿಯಾಗುತ್ತದೆ.” ಎಂದು ಇಎಆರ್ ಎಝಡ್‌ಎಯ ಅಧ್ಯಕ್ಷರಾದ ಸ್ವೆಟ್ಲಾನಾ ಅಕುಲೋವಾ ಹೇಳಿದರು.
“ಆನೆಗಳು ನಮಗೆ ಕಲಿಸಿದ ದೊಡ್ಡ ಪಾಠವೆಂದರೆ, ಸಂರಕ್ಷಣೆ ಎಂಬುದು ತಾಳ್ಮೆಯ ವಿಜ್ಞಾನ. ಭಾರತದಲ್ಲಿ ಇಡೀ ಜಗತ್ತಿನ ಪ್ರಮುಖ ಏಷ್ಯನ್ ಆನೆಗಳಿದ್ದು, ಜಾಗತಿಕ ಸಮುದಾಯ ಹೀಗೆ ಒಂದಾಗುತ್ತಿರುವುದು ಸಂತಸದ ವಿಷಯ.” ಎಂದು ಏಷ್ಯನ್ ಆನೆಗಳ ಪರಿಸರ ಕುರಿತ ವಿಜ್ಞಾನಿ ಪ್ರೊ. ರಾಮನ್ ಸುಕುಮಾರ್ ಹೇಳಿದರು.
ಸಮ್ಮೇಳನದಲ್ಲಿ ಅಳಿವಿನಂಚಿನಲ್ಲಿರುವ ತಳಿಗಳ ರಕ್ಷಣೆ ಬಗ್ಗೆ ಚರ್ಚಿಸಲಾಯಿತು. ರಷ್ಯಾದ ದೂರದ ಪೂರ್ವದ ಕಾಡುಗಳಿಂದ ಹಿಡಿದು ಆರ್ಕ್ಟಿಕ್ ಮಂಜಿನವರೆಗೆ—ಅಮುರ್ ಹುಲಿ, ಪೌರಸ್ತ್ಯ ಕೊಕ್ಕರೆ , ಬ್ಲಾಕಿಸ್ಟನ್ ಈಗಲ್-ಆಲ್ ಮತ್ತು ಗ್ರೇಟ್ ಬಸ್ಟರ್ಡ್ ಹಕ್ಕಿಗಳ ರಕ್ಷಣೆಗೆ ಗಡಿರಹಿತ ಯೋಜನೆಗಳ ಚರ್ಚೆ ನಡೆಯಿತು.
‘ಏಷ್ಯಾದ ಆನೆಗಳ ವೈದ್ಯ’ ಎಂದೇ ಪ್ರಸಿದ್ಧರಾದ ಪದ್ಮಶ್ರೀ ಡಾ. ಕೆ. ಕೆ. ಶರ್ಮಾ ಅವರು ಮಾನವ-ವನ್ಯಜೀವಿ ಸಂಘರ್ಷದ ಅನುಭವಗಳನ್ನು ಹಂಚಿಕೊಂಡರೆ, ಮಾಸ್ಕೋ ಮೃಗಾಲಯದ ಮುಖ್ಯ ಪಶುವೈದ್ಯರು ಹಿಮಕರಡಿಗಳ ರಕ್ಷಣಾ ಕಾರ್ಯಾಚರಣೆಯನ್ನು ವಿವರಿಸಿದರು. ಖ್ಯಾತ ವನ್ಯಜೀವಿ ವಿಜ್ಞಾನಿ ಫೊರೆಸ್ಟ್ ಗ್ಯಾಲಂಟೆ ಮಾಧ್ಯಮಗಳ ಮೂಲಕ ಸಂರಕ್ಷಣೆಯ ಅರಿವು ಮೂಡಿಸುವ ಬಗ್ಗೆ ಮಾತನಾಡಿದರು.
ಪ್ರಾಣಿಸಂಗ್ರಹಾಲಯಗಳ ಭವಿಷ್ಯ ಮತ್ತು ಪಾರದರ್ಶಕತೆಯ ಕುರಿತು ವೃತ್ತಿಪರರು ಮುಕ್ತವಾಗಿ ತಮ್ಮ ಅಭಿಪ್ರಾಯ ದಾಖಲಿಸಲು ವಿಶೇಷ ವೀಡಿಯೋ ಬೂತ್ ‘ದಿ ಎಲಿಫೆಂಟ್ ಇನ್ ದಿ ರೂಮ್’ ನಿರ್ಮಿಸಲಾಗಿತ್ತು.
ಸೊಲ್ಯೂಷನ್ ಸ್ಟೇಷನ್ ನಲ್ಲಿ ರಕ್ಷಣೆ, ತಳಿಶಾಸ್ತ್ರ ಮತ್ತು ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ನೈಜ ಸವಾಲುಗಳಿಗೆ ತಜ್ಞರಿಂದ ಪರಿಹಾರ ಪಡೆಯಲಾಯಿತು. ವಸ್ತು ಪ್ರದರ್ಶನದಲ್ಲಿ 7 ದೇಶಗಳ 13 ಅತ್ಯಾಧುನಿಕ ವೈದ್ಯಕೀಯ ಮತ್ತು ತಾಂತ್ರಿಕ ಸಂಸ್ಥೆಗಳು ಭಾಗವಹಿಸಿದ್ದವು.
ಇದೇ ಸಂದರ್ಭದಲ್ಲಿ ‘ಇಂಡಿಯನ್ ಝೂ ಇಯರ್ ಬುಕ್ (ಸಂಪುಟ 11, 2026)’ ಬಿಡುಗಡೆ ಮಾಡಲಾಯಿತು. ಸಮಾರೋಪ ಸಮಾರಂಭದಲ್ಲಿ ವಂತಾರಾ ಸಂಸ್ಥೆಯು ವನ್ಯಜೀವಿ ಸೇವೆಯನ್ನು ಗೌರವಿಸಿ ಆರು ಜನ ಸಾಧಕರಿಗೆ ‘ಜೀವಮಾನ ಶ್ರೇಷ್ಠ ಸಾಧನೆ ಪ್ರಶಸ್ತಿ’ ನೀಡಿ ಗೌರವಿಸಲಾಯಿತು.
ಸ್ವೆಟ್ಲಾನಾ ಅಕುಲೋವಾ (ಅಧ್ಯಕ್ಷರು, ಇಎಆರ್‌ಎಝಡ್ ಎ ಮತ್ತು ಡೈರೆಕ್ಟರ್ ಜನರಲ್, ಮಾಸ್ಕೋ ಝೂ), ರೆನೆ ಫ್ರಾನೆಕ್ (ಸಂಸ್ಥಾಪಕರು, ಛ್ಲೇಬಿ ಝೂ, ಝೆಕ್ ರಿಪಬ್ಲಿಕ್), ಆಜರ್ ಹುಸೇನೋವ್ (ಉಪಾಧ್ಯಕ್ಷರು, ಇಎಆರ್‌ಎಝಡ್ ಎ ಮತ್ತು ಡೈರೆಕ್ಟರ್, ಬಾಕು ಝೂಲಾಜಿಕಲ್ ಪಾರ್ಕ್), ಎಸ್. ಸಿ. ಶರ್ಮಾ (ಸಂಸ್ಥಾಪಕ ಸದಸ್ಯ ಕಾರ್ಯದರ್ಶಿ, ಸಿಝಡ್ ಎ, ಭಾರತ)
ಡಾ. ಡಿ. ಎನ್. ಸಿಂಗ್ (ಪೂರ್ವ ಸದಸ್ಯ ಕಾರ್ಯದರ್ಶಿ, ಸಿಝಡ್ ಎ, ಭಾರತ), ಬಿ. ಎಸ್. ಬೋನಲ್ (ಪೂರ್ವ ಸದಸ್ಯ ಕಾರ್ಯದರ್ಶಿ, ಸಿಝಡ್ ಎ, ಭಾರತ) ಅವರನ್ನು ಗೌರವಿಸಲಾಯಿತು.
ಮುಂದಿನ 2027ರ ಸಮಾವೇಶದ ಆತಿಥೇಯರಿಗೆ ಇಎಆರ್‌ಝಡ್ ಎ ಧ್ವಜವನ್ನು ಹಸ್ತಾಂತರಿಸುವ ಮೂಲಕ ಜಾಮ್‌ನಗರದಲ್ಲಿ ನಡೆದ ಈ ಐತಿಹಾಸಿಕ ಜಾಗತಿಕ ವನ್ಯಜೀವಿ ಸಮ್ಮೇಳನವು ಯಶಸ್ವಿಯಾಗಿ ಮುಕ್ತಾಯಗೊಂಡಿತು.








