ರಾಜ್ಯದ ಜನಸಾಮಾನ್ಯರಿಗೆ ಬೆಲೆ ಏರಿಕೆಯ ಮತ್ತೊಂದು ಬಿಸಿ ತಟ್ಟಲಿದೆ. ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನಂದಿನಿ ಹಾಲಿನ ದರವನ್ನು ಪ್ರತಿ ಲೀಟರ್ಗೆ ₹8 ಹೆಚ್ಚಿಸಿರುವ ಬೆನ್ನಲ್ಲೇ ಮೊಸರಿನ ದರವನ್ನೂ ಭಾರಿ ಪ್ರಮಾಣದಲ್ಲಿ ಪರಿಷ್ಕರಿಸಿದೆ. ಹೊಸ ದರಗಳು ನವೆಂಬರ್ 1ರಿಂದ ರಾಜ್ಯಾದ್ಯಂತ ಜಾರಿಗೆ ಬರಲಿವೆ.
ಒಂದು ಲೀಟರ್ ನಂದಿನಿ ಮೊಸರಿನ ಪ್ಯಾಕೆಟ್ ಬೆಲೆ ₹54ರಿಂದ ₹68ಕ್ಕೆ ಏರಿಕೆಯಾಗಿದ್ದು, ಬರೋಬ್ಬರಿ ₹14 ಹೆಚ್ಚಳವಾಗಿದೆ. ಅದೇ ರೀತಿ 500 ಗ್ರಾಂ ಮೊಸರಿನ ಪ್ಯಾಕೆಟ್ ಬೆಲೆ ₹28ರಿಂದ ₹34ಕ್ಕೆ ಏರಿಕೆಯಾಗಿದೆ.
ಅರ್ಧ ಲೀಟರ್ ಮೊಸರಿಗೆ ₹6 ಹಾಗೂ ಒಂದು ಲೀಟರ್ ಮೊಸರಿಗೆ ₹14 ಹೆಚ್ಚುವರಿ ಹಣ ಪಾವತಿಸಬೇಕಾಗುತ್ತದೆ.
ಹಾಲಿನ ದರ ಏರಿಕೆಗೆ ಕಾರಣವೇನು?
ಹೈನುಗಾರಿಕೆ ನಿರ್ವಹಣಾ ವೆಚ್ಚ ಹೆಚ್ಚಳ, ಪಶು ಆಹಾರ ಮತ್ತು ಮೇವಿನ ಬೆಲೆ ಏರಿಕೆ ಹಾಗೂ ಬರ ಪರಿಸ್ಥಿತಿಯಿಂದ ರೈತರು ಎದುರಿಸುತ್ತಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಂಡು ಹಾಲಿನ ದರ ಪರಿಷ್ಕರಣೆ ಮಾಡಲಾಗಿದೆ ಎಂದು ಸರ್ಕಾರ ತಿಳಿಸಿದೆ.
ಪ್ರತಿ ಲೀಟರ್ ಹಾಲಿನ ದರದಲ್ಲಿ ಹೆಚ್ಚಳವಾದ ₹8ರಲ್ಲಿ ₹7 ಅನ್ನು ಹಾಲು ಉತ್ಪಾದಕ ರೈತರಿಗೆ ನೀಡಲಾಗುತ್ತದೆ. ಉಳಿದ ₹1 ಅನ್ನು ಹಾಲು ಒಕ್ಕೂಟಗಳ ನಿರ್ವಹಣೆ ಮತ್ತು ಇತರ ವೆಚ್ಚಗಳಿಗೆ ಮೀಸಲಿಡಲಾಗುತ್ತದೆ ಎಂದು ಸರ್ಕಾರ ತಿಳಿಸಿದೆ.
ಗ್ರಾಹಕರ ಜೇಬಿಗೆ ಹೆಚ್ಚುವರಿ ಹೊರೆ
ಹಾಲು ಮತ್ತು ಮೊಸರು ಪ್ರತಿದಿನ ಬಳಕೆಯಾಗುವ ಅಗತ್ಯ ಆಹಾರ ಪದಾರ್ಥಗಳಾಗಿವೆ. ಇದೀಗ ಎರಡೂ ಉತ್ಪನ್ನಗಳ ದರ ಏರಿಕೆಯಾಗಿರುವುದರಿಂದ ಕುಟುಂಬಗಳ ಮಾಸಿಕ ಖರ್ಚು ಹೆಚ್ಚಲಿದೆ. ವಿಶೇಷವಾಗಿ ಹಾಲು ಮತ್ತು ಮೊಸರನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸುವ ಕುಟುಂಬಗಳು, ಹೋಟೆಲ್ಗಳು, ಬೇಕರಿಗಳು ಹಾಗೂ ಸಣ್ಣ ಆಹಾರ ಉದ್ಯಮಗಳ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆಯಿದೆ.
ನವೆಂಬರ್ 1ರಿಂದ ಹೊಸ ದರಗಳು ಜಾರಿಗೆ ಬರಲಿದ್ದು, ಗ್ರಾಹಕರು ನಂದಿನಿ ಹಾಲು ಮತ್ತು ಮೊಸರನ್ನು ಪರಿಷ್ಕೃತ ಬೆಲೆಯಲ್ಲೇ ಖರೀದಿಸಬೇಕಾಗುತ್ತದೆ.








