ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲಿನಿಂದಲೇ ವಿಡಿಯೋ ಕಾನ್ಫರೆನ್ಸ್ ಮೂಲಕ ನ್ಯಾಯಾಲಯದ ವಿಚಾರಣೆಗೆ ಹಾಜರಾಗಿದ್ದ ವೇಳೆ ನಟ ದರ್ಶನ್ ಹಾಗೂ ಪವಿತ್ರಾಗೌಡ ಮಾಡಿಕೊಂಡಿರುವ ಎಡವಟ್ಟೊಂದು ಈಗ ಅವರಿಬ್ಬರಿಗೂ ದೊಡ್ಡ ಕಂಟಕವಾಗಿ ಪರಿಣಮಿಸುವ ಸಾಧ್ಯತೆ ದಟ್ಟವಾಗಿದೆ. ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿದೆ ಎಂದು ಭಾವಿಸಿ ಇಬ್ಬರೂ ನಡೆಸಿರುವ ಎರಡು ನಿಮಿಷಗಳ ಸಂಭಾಷಣೆಯ ಆಡಿಯೋ ಈಗ ಪ್ರಾಸಿಕ್ಯೂಷನ್ ಪಾಲಿಗೆ ಪ್ರಬಲ ಅಸ್ತ್ರವಾಗಿ ಸಿಕ್ಕಿದೆ. ವಿಶೇಷ ಸರ್ಕಾರಿ ಅಭಿಯೋಜಕರು (ಎಸ್ಪಿಪಿ) ಈ ಸಂಭಾಷಣೆಯ ರೆಕಾರ್ಡ್ ಕ್ಲಿಪ್ ಅನ್ನು ಸೋಮವಾರ ನೇರವಾಗಿ ನ್ಯಾಯಾಧೀಶರ ಗಮನಕ್ಕೆ ತಂದು ಸಲ್ಲಿಸಲು ಮುಂದಾಗಿದ್ದಾರೆ ಎನ್ನಲಾಗಿದೆ.
ಕೋರ್ಟ್ ಹಾಲ್ನಲ್ಲಿ ತಾಂತ್ರಿಕ ದೋಷ, ಆದರೆ ಆನ್ಲೈನ್ನಲ್ಲಿ ಕೇಳಿಸುತ್ತಿತ್ತು ಮಾತು!
ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಸಭಾಂಗಣದಲ್ಲಿ ದಿಢೀರ್ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದ್ದರಿಂದ ಅಲ್ಲಿನ ಪರದೆಯ ಮೇಲೆ ವಿಡಿಯೋ ಕಾನ್ಫರೆನ್ಸ್ ಸಂಪರ್ಕ ಕಡಿತಗೊಂಡಿತ್ತು. ಹೀಗಾಗಿ ಕೋರ್ಟ್ ಹಾಲ್ನಲ್ಲಿದ್ದವರಿಗೆ ಏನೂ ಕೇಳಿಸಿರಲಿಲ್ಲ. ಆದರೆ ಆನ್ಲೈನ್ ಮೂಲಕ ವಿಡಿಯೋ ಕಾನ್ಫರೆನ್ಸ್ಗೆ ಲಾಗಿನ್ ಆಗಿದ್ದವರಿಗೆ ಸಂಪರ್ಕ ಚಾಲನೆಯಲ್ಲಿಯೇ ಇತ್ತು. ಕೋರ್ಟ್ ವಿಡಿಯೋ ಕಾನ್ಫರೆನ್ಸ್ ಲಾಗ್ ಔಟ್ ಆಗಿದೆ ಎಂದು ತಪ್ಪಾಗಿ ಭಾವಿಸಿದ ನಟ ದರ್ಶನ್ ಹಾಗೂ ಪವಿತ್ರಾಗೌಡ ಪರಸ್ಪರ ಮಾತುಕತೆ ನಡೆಸಿದ್ದಾರೆ. ಆನ್ಲೈನ್ನಲ್ಲಿ ಲಾಗಿನ್ ಆಗಿದ್ದವರಿಗೆ ಇಬ್ಬರ ಈ ಸಂಭಾಷಣೆ ಸ್ಪಷ್ಟವಾಗಿ ಕೇಳಿಸಿದೆ.
ತಾಂತ್ರಿಕ ಸಮಸ್ಯೆ ಸರಿಯಾಗಿ ವಿಡಿಯೋ ಕಾನ್ಫರೆನ್ಸ್ ಮರು ಆರಂಭಗೊಂಡಾಗ ಪರದೆಯ ಮೇಲೆ ಎಸ್ಪಿಪಿ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಬ್ಬರೂ ತಕ್ಷಣವೇ ಮಾತು ನಿಲ್ಲಿಸಿದ್ದಾರೆ. ಆ ಕ್ಷಣಕ್ಕೆ ತಾವು ನಡೆಸಿದ ಚರ್ಚೆಯಿಂದ ಎದುರಾಗಬಹುದಾದ ಗಂಭೀರ ಸಮಸ್ಯೆಯ ಅರಿವು ಅವರಿಗೆ ಇರಲಿಲ್ಲ. ಆದರೆ ನ್ಯಾಯಾಲಯದ ವಿಚಾರಣೆ ಮುಂದೂಡಿಕೆಯಾದ ಬಳಿಕ, ಜೈಲು ಸಿಬ್ಬಂದಿ ಹಾಗೂ ಅವರ ವಕೀಲರ ಮೂಲಕ ತಮ್ಮ ಮಾತುಕತೆ ವೈರಲ್ ಆಗಿರುವ ವಿಚಾರ ದರ್ಶನ್ ಹಾಗೂ ಪವಿತ್ರಾಗೌಡ ಅವರ ಗಮನಕ್ಕೆ ಬಂದಿದೆ.
ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ: ಆ 2 ನಿಮಿಷದ ಸಂಭಾಷಣೆಯಲ್ಲಿ ಏನಿತ್ತು?
ವಿಡಿಯೋ ಕಾನ್ಫರೆನ್ಸ್ ನಡುವೆ ನಡೆದ ಆ ಎರಡು ನಿಮಿಷಗಳ ಸಂಭಾಷಣೆಯಲ್ಲಿ ಪವಿತ್ರಾಗೌಡ ಮೊದಲಿಗೆ ದರ್ಶನ್ ಅವರನ್ನು ಕುರಿತು ಊಟ ಆಯ್ತಾ ಎಂದು ಕೇಳಿದ್ದು, ಅದಕ್ಕೆ ದರ್ಶನ್ ಆಯ್ತು ಎಂದು ಉತ್ತರಿಸಿದ್ದಾರೆ. ಬಳಿಕ ದರ್ಶನ್ ಅವರ ಬೆನ್ನುನೋವಿನ ಸಮಸ್ಯೆಯ ಕುರಿತು ಪವಿತ್ರಾಗೌಡ ವಿಚಾರಿಸಿದ್ದು, ಈಗಾಗಲೇ ಒಂದು ಸೆಷನ್ ಫಿಜಿಯೋಥೆರಪಿ ಚಿಕಿತ್ಸೆ ಆಗಿದೆ ಎಂದು ದರ್ಶನ್ ತಿಳಿಸಿದ್ದಾರೆ.
ಇದಾದ ಬಳಿಕ ಜಾಮೀನು ಅರ್ಜಿ ಸಲ್ಲಿಸುವ ವಿಚಾರವಾಗಿ ಇಬ್ಬರ ನಡುವೆ ಮಹತ್ವದ ಚರ್ಚೆ ನಡೆದಿದೆ. ಜೈಲಿನಲ್ಲಿ ಇಷ್ಟು ದಿನಗಳೇ ಕಳೆದುಹೋಗಿವೆ, ಇನ್ನು ಸ್ವಲ್ಪ ದಿನ ವೆಯ್ಟ್ ಮಾಡು ಎಂದು ದರ್ಶನ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಇನ್ನು ನಾಲ್ಕು ತಿಂಗಳಲ್ಲಿ ಜಡ್ಜ್ ಚೇಂಜ್ ಆಗ್ತಾರೆ, ಆಮೇಲೆ ಬೇಲ್ಗೆ ಅರ್ಜಿ ಹಾಕೋಣ ಎಂದು ದರ್ಶನ್ ಹೇಳಿರುವ ಮಾತುಗಳು ಈ ಸಂಭಾಷಣೆಯಲ್ಲಿದೆ. ಜೊತೆಗೆ, ಹೃದಯ ಮತ್ತು ಮನಸ್ಸು ಗಟ್ಟಿ ಮಾಡಿಕೋ ಎಂದು ಕೈ ಸನ್ನೆಯ ಮೂಲಕವೇ ಪವಿತ್ರಾಗೌಡಗೆ ಧೈರ್ಯ ಹೇಳಿದ ದರ್ಶನ್, ತನಗೂ ಇಲ್ಲಿ ತುಂಬಾ ಸಮಸ್ಯೆ ಆಗಿದೆ ಎಂದು ಹೇಳಿಕೊಂಡಿದ್ದಾರೆ. ಅಷ್ಟರಲ್ಲಿ ವಿಸಿ ಕನೆಕ್ಷನ್ ರೀಸ್ಟಾರ್ಟ್ ಆಗುತ್ತಿದ್ದಂತೆಯೇ ಇಬ್ಬರೂ ಮಾತುಕತೆಯನ್ನು ನಿಲ್ಲಿಸಿದ್ದಾರೆ.
ಸೋಮವಾರ ನ್ಯಾಯಾಧೀಶರ ಮುಂದೆ ಆಡಿಯೋ ಅಸ್ತ್ರ: ದರ್ಶನ್-ಪವಿತ್ರಾಗೆ ಹೊಸ ಟೆನ್ಶನ್!
ನ್ಯಾಯಾಧೀಶರ ಬದಲಾವಣೆಯ ಕುರಿತು ಹಾಗೂ ಜಾಮೀನು ಅರ್ಜಿಯ ತಂತ್ರಗಾರಿಕೆಯ ಕುರಿತು ದರ್ಶನ್ ಆಡಿರುವ ಮಾತುಗಳೇ ಈಗ ಪ್ರಾಸಿಕ್ಯೂಷನ್ಗೆ ದೊಡ್ಡ ಅಸ್ತ್ರವಾಗಿ ಪರಿಣಮಿಸಿದೆ. ಎಸ್ಪಿಪಿ ಅವರು ಸೋಮವಾರ ಈ ರೆಕಾರ್ಡ್ ಕ್ಲಿಪ್ ಅನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸುವ ಸಾಧ್ಯತೆ ಇದೆ. ಈ ಅನಿರೀಕ್ಷಿತ ಬೆಳವಣಿಗೆಯಿಂದಾಗಿ ನಟ ದರ್ಶನ್ ಹಾಗೂ ಪವಿತ್ರಾಗೌಡ ಅವರಿಗೆ ಮತ್ತೆ ಹೊಸ ಟೆನ್ಶನ್ ಶುರುವಾಗಿದ್ದು, ತಮ್ಮ ಈ ಎರಡು ನಿಮಿಷಗಳ ಮಾತುಕತೆ ಪ್ರಕರಣದ ಮೇಲೆ ಹಾಗೂ ತಮ್ಮ ಭವಿಷ್ಯದ ಮೇಲೆ ಯಾವ ರೀತಿಯ ವ್ಯತಿರಿಕ್ತ ಪರಿಣಾಮಗಳನ್ನು ಬೀರಲಿದೆ ಎಂಬ ತೀವ್ರ ಆತಂಕದಲ್ಲಿ ಮುಳುಗಿದ್ದಾರೆ.








