ಕೋಲಾರ: ನಾನು ಡಿ.ಕೆ. ಶಿವಕುಮಾರ್ ಅವರ ಶಿಷ್ಯ. ಅವರು ರಾಜ್ಯದ ಮುಖ್ಯಮಂತ್ರಿಯಾಗಲಿ ಎಂದು ನಾನು ಮನಸಾರೆ ಆಸೆ ಪಟ್ಟಿದ್ದೆ. ಆದರೆ ಈಗ ನೂರೈವತ್ತು ದಿನಗಳು ಕಳೆದರೂ ಜನರಿಗೆ ಕುಡಿಯುವ ನೀರಿಲ್ಲ. ನಾನು ಈ ಹಿಂದೆ ನೋಡಿದ್ದ ಡಿ.ಕೆ. ಶಿವಕುಮಾರ್ ಅವರ ಘರ್ಜನೆಯೇ ಬೇರೆಯಾಗಿತ್ತು, ಆದರೆ ಈಗಿನವರೇ ಬೇರೆ ಎಂದು ಮುಳಬಾಗಿಲು ವಿಧಾನಸಭಾ ಕ್ಷೇತ್ರದ ಜೆಡಿಎಸ್ ಶಾಸಕ ಸಮೃದ್ಧಿ ಮಂಜುನಾಥ್ ಅವರು ತೀವ್ರ ಬೇಸರ ಹಾಗೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಹಾಗೂ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ಆಡಳಿತ ವೈಖರಿಯ ಕುರಿತು ಮಾತನಾಡಿದ ಅವರು, ಕ್ಷೇತ್ರಗಳ ಅಭಿವೃದ್ಧಿಗೆ ಅನುದಾನದ ಕೊರತೆ ಹಾಗೂ ಹಳೆ ಮೈಸೂರು ಭಾಗದಲ್ಲಿ ನಡೆಯುತ್ತಿರುವ ರಾಜಕೀಯ ಬೆಳವಣಿಗೆಗಳ ಕುರಿತು ಸ್ಫೋಟಕ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ.
150 ದಿನ ಕಳೆದರೂ ಕುಡಿಯುವ ನೀರಿಲ್ಲ; ಡಿಕೆಶಿಗೆ ಕೆಲಸ ಮಾಡಲು ಬಿಡುತ್ತಿಲ್ಲವೇ?
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರೊಂದಿಗಿನ ತಮ್ಮ ಹಳೆಯ ಒಡನಾಟವನ್ನು ಸ್ಮರಿಸಿದ ಶಾಸಕ ಸಮೃದ್ಧಿ ಮಂಜುನಾಥ್, ಡಿ.ಕೆ. ಶಿವಕುಮಾರ್ ಅವರು ಮುಖ್ಯಮಂತ್ರಿ ಹುದ್ದೆಗೇರಿದರೆ ರಾಜ್ಯದಲ್ಲಿ ಅಭಿವೃದ್ಧಿಯ ಪರ್ವವೇ ನಡೆಯಲಿದೆ ಎಂಬ ನಿರೀಕ್ಷೆಯಿತ್ತು. ಆದರೆ, ಇಂದು 150 ದಿನಗಳು ಉರುಳಿದರೂ ಸಹ ಕ್ಷೇತ್ರದಲ್ಲಿ ಜನರಿಗೆ ಸಮರ್ಪಕ ಕುಡಿಯುವ ನೀರು ಸಿಗುತ್ತಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.
ಕ್ಷೇತ್ರದ ಅಭಿವೃದ್ಧಿ ಕಾರ್ಯಗಳಿಗಾಗಿ ಅನುದಾನ ನೀಡುವುದಾಗಿ ಭರವಸೆ ನೀಡಿದ್ದರೂ ಸಹ, ಕಾಂಗ್ರೆಸ್ ಸರ್ಕಾರ ಇಲ್ಲಿಯವರೆಗೆ ನಯಾಪೈಸೆ ಅನುದಾನವನ್ನೂ ಬಿಡುಗಡೆ ಮಾಡಿಲ್ಲ ಎಂದು ಅವರು ದೂರಿದರು. ಹಿಂದೆ ಅಬ್ಬರಿಸುತ್ತಿದ್ದ ಡಿ.ಕೆ. ಶಿವಕುಮಾರ್ ಅವರು ಈಗ ಮುಖ್ಯಮಂತ್ರಿಯಾದ ಬಳಿಕ ಏಕೆ ಹೀಗಾಗಿದ್ದಾರೆ? ಅವರಿಗೆ ಕೆಲಸ ಮಾಡಲು ಸಾಧ್ಯವಾಗುತ್ತಿಲ್ಲವೇ? ಸರ್ಕಾರದ ಬಳಿ ಅನುದಾನವೇ ಇಲ್ಲವೇ? ಅಥವಾ ಅವರಿಗೆ ಸ್ವತಂತ್ರವಾಗಿ ಕೆಲಸ ಮಾಡಲು ಇತರರು ಬಿಡುತ್ತಿಲ್ಲವೇ ಎಂಬುದೇ ತಮಗೆ ಅರ್ಥವಾಗುತ್ತಿಲ್ಲ ಎಂದು ಸಮೃದ್ಧಿ ಮಂಜುನಾಥ್ ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.
ಹಳೆ ಮೈಸೂರಿನಲ್ಲಿ ಹೆಚ್ಡಿಕೆ ದುರ್ಬಲಗೊಳಿಸಲು ಆಪರೇಷನ್; ಜಿಟಿಡಿ-ಕೃಷ್ಣಪ್ಪ ಮುನಿಸು ಸತ್ಯ!
ಇದೇ ವೇಳೆ ಜೆಡಿಎಸ್ ಶಾಸಕರನ್ನು ಸೆಳೆಯಲು ನಡೆಯುತ್ತಿರುವ ಪ್ರಯತ್ನಗಳ ಕುರಿತು ಪ್ರತಿಕ್ರಿಯಿಸಿದ ಅವರು, ಹಳೆ ಮೈಸೂರು ಪ್ರಾಂತ್ಯದಲ್ಲಿ ಜೆಡಿಎಸ್ ವರಿಷ್ಠ ಹಾಗೂ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ರಾಜಕೀಯ ಪ್ರಾಬಲ್ಯವನ್ನು ದುರ್ಬಲಗೊಳಿಸುವ ಏಕೈಕ ಉದ್ದೇಶದಿಂದ ಆಪರೇಷನ್ ನಡೆಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದರು.
ತಮಗೂ ಸಹ ಪಕ್ಷ ತೊರೆಯುವಂತೆ ಆಫರ್ಗಳು ಬಂದಿದ್ದವು ಎಂಬುದನ್ನು ಬಹಿರಂಗಪಡಿಸಿದ ಸಮೃದ್ಧಿ ಮಂಜುನಾಥ್, ಯಾವುದೇ ಕಾರಣಕ್ಕೂ ನಮ್ಮ ಶಾಸಕರು ಯಾರೂ ಜೆಡಿಎಸ್ ಪಕ್ಷವನ್ನು ಬಿಟ್ಟು ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಇನ್ನು ಪಕ್ಷದ ಹಿರಿಯ ನಾಯಕರಾದ ಜಿ.ಟಿ. ದೇವೇಗೌಡರು ಹಾಗೂ ಕೃಷ್ಣಪ್ಪ ಅವರ ವಿಚಾರದಲ್ಲಿ ಪಕ್ಷದೊಳಗೆ ಮುನಿಸಿರುವುದು ಸತ್ಯ ಎಂದು ಒಪ್ಪಿಕೊಂಡ ಅವರು, ಈ ಸಣ್ಣಪುಟ್ಟ ಅಸಮಾಧಾನಗಳ ನಡುವೆಯೂ ಪಕ್ಷ ಒಗ್ಗಟ್ಟಾಗಿದೆ ಎಂದು ತಿಳಿಸಿದರು.








