ದಾವಣಗೆರೆ: ರೋರಿಂಗ್ ಸ್ಟಾರ್ ಶ್ರೀಮುರಳಿ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಪರಾಕ್’ ಬಿಡುಗಡೆಗೂ ಮುನ್ನವೇ ಸ್ಯಾಂಡಲ್‌ವುಡ್‌ನಲ್ಲಿ ಭರ್ಜರಿ ಸದ್ದು ಮಾಡುತ್ತಿದೆ. ಇದೀಗ ಮಕ್ಕಳ ದಿನಾಚರಣೆಯ ವಿಶೇಷ ಸಂದರ್ಭದಲ್ಲಿ ದಾವಣಗೆರೆಯ ಶ್ರೀ ಸಿದ್ದಗಂಗಾ ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ವಿನೂತನ ರೀತಿಯಲ್ಲಿ ಚಿತ್ರತಂಡಕ್ಕೆ ಶುಭ ಹಾರೈಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ. ಚಿತ್ರದ ನಿರ್ದೇಶಕ ಹಾಲೇಶ್ ಕೋಗುಂಡಿ ಅವರು ತಾವು ವ್ಯಾಸಂಗ ಮಾಡಿದ್ದ ಈ ಶಾಲೆಗೆ ಭೇಟಿ ನೀಡಿದ ವೇಳೆ, ಸಾವಿರಾರು ವಿದ್ಯಾರ್ಥಿಗಳು ಶ್ರೀಮುರಳಿ ಅವರ ‘ಪರಾಕ್’ ಚಿತ್ರದ ವಿವಿಧ ಪೋಸ್ಟರ್ ವಿನ್ಯಾಸಗಳನ್ನು ಚಿತ್ರಕಲೆಯ ಮೂಲಕ ರಚಿಸಿ ತಮ್ಮ ನೆಚ್ಚಿನ ಹಳೆಯ ವಿದ್ಯಾರ್ಥಿ ಹಾಗೂ ನಿರ್ದೇಶಕರಿಗೆ ವಿಶೇಷ ಅಭಿನಂದನೆ ಸಲ್ಲಿಸಿದ್ದಾರೆ.
ಈ ವಿಶೇಷ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯೆಂದರೆ, ಕೆಲವು ವಿದ್ಯಾರ್ಥಿಗಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಅತ್ಯಂತ ನಿಖರವಾಗಿ ಮತ್ತು ಸುಂದರವಾಗಿ ಶ್ರೀಮುರಳಿ ಅವರ ‘ಪರಾಕ್’ ಚಿತ್ರದ ಪೋಸ್ಟರ್‌ಗಳನ್ನು ಬಿಡಿಸಿ ನೋಡುಗರನ್ನು ನಿಬ್ಬೆರಗಾಗಿಸಿದರು. ಮಕ್ಕಳ ಈ ಅಪರೂಪದ ಪ್ರತಿಭೆ ಹಾಗೂ ಸಿನಿಮಾದ ಮೇಲಿನ ಪ್ರೀತಿಯನ್ನು ಕಂಡು ನಿರ್ದೇಶಕ ಹಾಲೇಶ್ ಕೋಗುಂಡಿ ಭಾವುಕರಾದರು. ತಾವು ಕಲಿತ ಶಾಲೆಯ ಮಕ್ಕಳೇ ತಮ್ಮ ಚೊಚ್ಚಲ ನಿರ್ದೇಶನದ ಸಿನಿಮಾಗೆ ಈ ರೀತಿಯ ಕಲಾತ್ಮಕ ಗೌರವ ನೀಡಿರುವುದು ಚಿತ್ರತಂಡದ ಉತ್ಸಾಹವನ್ನು ಇಮ್ಮಡಿಗೊಳಿಸಿದೆ.
‘ಉಗ್ರಂ’, ‘ಮಫ್ತಿ’, ‘ಭರಾಟೆ’ ಹಾಗೂ ಇತ್ತೀಚಿನ ‘ಬಘೀರ’ ಚಿತ್ರದ ಭರ್ಜರಿ ಯಶಸ್ಸಿನ ಬಳಿಕ ರೋರಿಂಗ್ ಸ್ಟಾರ್ ಶ್ರೀಮುರಳಿ ಗ್ರೀನ್ ಸಿಗ್ನಲ್ ನೀಡಿದ್ದ ಸಿನಿಮಾ ‘ಪರಾಕ್’. ಕಳೆದ ವರ್ಷವೇ ಚಿತ್ರೀಕರಣ ಆರಂಭಿಸಿದ್ದ ಈ ಚಿತ್ರವು ಈಗಾಗಲೇ ಬಿಡುಗಡೆಯಾಗಿರುವ ಟೀಸರ್ ಮೂಲಕ ಸಿನಿಪ್ರಿಯರಲ್ಲಿ ಭಾರೀ ಕುತೂಹಲ ಮೂಡಿಸಿದೆ.
ಯುವ ಪ್ರತಿಭೆ ಹಾಲೇಶ್ ಕೋಗುಂಡಿ ನಿರ್ದೇಶನದ ಚೊಚ್ಚಲ ಚಿತ್ರ ಇದಾಗಿದ್ದು, ‘ಬ್ರ್ಯಾಂಡ್ ಸ್ಟುಡಿಯೋಸ್’ ಬ್ಯಾನರ್ ಅಡಿಯಲ್ಲಿ ಅದ್ಧೂರಿಯಾಗಿ ನಿರ್ಮಾಣವಾಗುತ್ತಿದೆ. ಚಿತ್ರಕ್ಕೆ ಬಲಿಷ್ಠ ತಾಂತ್ರಿಕ ಬಳಗದ ಬಲವಿದ್ದು, ಚರಣ್ ರಾಜ್ ಎಂ.ಆರ್. ಸಂಗೀತ ನಿರ್ದೇಶನ, ಸಂದೀಪ್ ವಲ್ಲೂರಿ ಛಾಯಾಗ್ರಹಣ, ರಕ್ಷಿತ್ ಕಾಪ್ ಸಂಕಲನ ಹಾಗೂ ಡಾ. ಕೆ. ರವಿವರ್ಮ ಅವರ ಸಾಹಸ ನಿರ್ದೇಶನ ಚಿತ್ರಕ್ಕಿದೆ. ಮಂಜುನಾಥ್ ಟಿ., ಮೋಹನ್ ಕೆ.ಓ. ಹಾಗೂ ನಿರ್ದೇಶಕ ಹಾಲೇಶ್ ಕೋಗುಂಡಿ ಸೇರಿ ಚಿತ್ರಕ್ಕೆ ಸಂಭಾಷಣೆ ಹೆಣೆದಿದ್ದಾರೆ. ಸದ್ಯ ಮಕ್ಕಳ ದಿನಾಚರಣೆಯ ಈ ವಿಶೇಷ ಅಭಿಯಾನದ ಮೂಲಕ ಸಿನಿಮಾ ಮತ್ತಷ್ಟು ಪ್ರಚಾರ ಪಡೆದುಕೊಂಡಿದ್ದು, ಬೆಳ್ಳಿತೆರೆಯ ಮೇಲೆ ‘ಪರಾಕ್’ ಯಾವ ಮಟ್ಟಿಗೆ ಅಬ್ಬರಿಸಲಿದೆ ಎಂಬುದನ್ನು ಕಾದು ನೋಡಬೇಕಿದೆ.








