ಕರ್ನಾಟಕದಲ್ಲಿ ಜಪಾನ್‌ನ ಹೂಡಿಕೆಯನ್ನು ಮತ್ತಷ್ಟು ಬಲಪಡಿಸುವುದು ಹಾಗೂ ಜಪಾನ್‌ನ ನಗರಾಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡುವ ಉದ್ದೇಶದಿಂದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ರಾಜ್ಯ ಸರ್ಕಾರದ ಉನ್ನತ ಮಟ್ಟದ ನಿಯೋಗ ನವೆಂಬರ್ 23ರಿಂದ 25ರವರೆಗೆ ಜಪಾನ್ ಪ್ರವಾಸ ಕೈಗೊಳ್ಳಲಿದೆ.
ನಿಯೋಗವು ನವೆಂಬರ್ 23ರಂದು ನಗೋಯಾ, ನವೆಂಬರ್ 24ರಂದು ಒಸಾಕಾ ಹಾಗೂ ನವೆಂಬರ್ 25ರಂದು ಟೋಕಿಯೊಗೆ ಭೇಟಿ ನೀಡಲಿದೆ. ಈ ಪ್ರವಾಸದಲ್ಲಿ ಮುಖ್ಯಮಂತ್ರಿ ವಿವಿಧ ಕಾರ್ಯಕ್ರಮಗಳು, ಉದ್ಯಮಿಗಳೊಂದಿಗಿನ ಸಭೆಗಳು ಹಾಗೂ ನಗರಾಭಿವೃದ್ಧಿ ಯೋಜನೆಗಳ ಅಧ್ಯಯನದಲ್ಲಿ ಭಾಗವಹಿಸಲಿದ್ದಾರೆ. ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ್ ಅವರು ಮುಖ್ಯಮಂತ್ರಿಗಳಿಗೆ ಸಾಥ್ ನೀಡಲಿದ್ದಾರೆ.
ಜಪಾನ್ ಹೂಡಿಕೆ ಆಕರ್ಷಣೆಗೆ ಉದ್ಯಮಿಗಳೊಂದಿಗೆ ಸಭೆ
ಕರ್ನಾಟಕದಲ್ಲಿ ಜಪಾನ್ ಕಂಪನಿಗಳ ಹೂಡಿಕೆಯನ್ನು ಹೆಚ್ಚಿಸುವುದು ಪ್ರವಾಸದ ಪ್ರಮುಖ ಉದ್ದೇಶವಾಗಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಸಹಯೋಗದಲ್ಲಿ ಜಪಾನ್‌ನ ಪ್ರಮುಖ ಉದ್ಯಮ ಸಂಸ್ಥೆಗಳ ಪ್ರತಿನಿಧಿಗಳೊಂದಿಗೆ ಸಭೆ ನಡೆಸಿ, ರಾಜ್ಯದಲ್ಲಿರುವ ಹೂಡಿಕೆ ಅವಕಾಶಗಳು, ಕೈಗಾರಿಕಾ ಮೂಲಸೌಕರ್ಯ ಹಾಗೂ ಸರ್ಕಾರದ ಪ್ರೋತ್ಸಾಹಕ ನೀತಿಗಳ ಕುರಿತು ಮಾಹಿತಿ ನೀಡಲಾಗುತ್ತದೆ.
ಟೊಯೋಟಾ, ಪ್ಯಾನಾಸೋನಿಕ್ ಆಟೋಮೋಟಿವ್ ಸಿಸ್ಟಮ್ಸ್, ಮಿತ್ಸುಬಿಷಿ ಕೆಮಿಕಲ್ ಗ್ರೂಪ್, ಟಕೆಡಾ ಫಾರ್ಮಾಸ್ಯುಟಿಕಲ್ಸ್, ಯೊಕೊಗಾವಾ ಎಲೆಕ್ಟ್ರಿಕ್ ಹಾಗೂ ಸುಮಿಟೊಮೊ ಕಾರ್ಪೊರೇಷನ್ ಸೇರಿದಂತೆ ಪ್ರಮುಖ ಜಪಾನ್ ಕಂಪನಿಗಳೊಂದಿಗೆ ವಿವಿಧ ವಲಯಗಳ ಹೂಡಿಕೆ ಕುರಿತು ಚರ್ಚೆ ನಡೆಸುವ ಕಾರ್ಯಕ್ರಮವಿದೆ.
ಆಟೋಮೊಬೈಲ್ ಮತ್ತು ಎಲೆಕ್ಟ್ರಿಕ್ ವಾಹನಗಳ ಬಿಡಿಭಾಗಗಳು, ವಿಶೇಷ ರಾಸಾಯನಿಕಗಳು, ಔಷಧ ಉತ್ಪಾದನೆ, ಕೈಗಾರಿಕಾ ಆಟೊಮೇಷನ್ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ಹೂಡಿಕೆ ಅವಕಾಶಗಳ ಕುರಿತು ಚರ್ಚಿಸಲಾಗುತ್ತದೆ.
ಜಪಾನ್‌ನ ನಗರಾಭಿವೃದ್ಧಿ ಮಾದರಿಗಳ ಅಧ್ಯಯನ
ಹೂಡಿಕೆ ಆಕರ್ಷಣೆಯ ಜೊತೆಗೆ ಜಪಾನ್‌ನ ನಗರ ಯೋಜನೆ, ಸಾರಿಗೆ ವ್ಯವಸ್ಥೆ, ತ್ಯಾಜ್ಯ ನಿರ್ವಹಣೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಮಾದರಿಗಳನ್ನು ಅಧ್ಯಯನ ಮಾಡುವುದು ಪ್ರವಾಸದ ಮತ್ತೊಂದು ಪ್ರಮುಖ ಉದ್ದೇಶವಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ (GBA) ಅಧಿಕಾರಿಗಳ ತಂಡದೊಂದಿಗೆ ಜಪಾನ್‌ನ ನಗರಾಭಿವೃದ್ಧಿ ಯೋಜನೆಗಳಿಗೆ ಭೇಟಿ ನೀಡಲಾಗುತ್ತದೆ. ತ್ಯಾಜ್ಯ ನಿರ್ವಹಣೆ, ತ್ಯಾಜ್ಯದಿಂದ ಇಂಧನ ಉತ್ಪಾದನೆ, ಸಮಗ್ರ ಸಾರಿಗೆ ವ್ಯವಸ್ಥೆ, ಸಂಚಾರ ನಿರ್ವಹಣೆ, ನಗರ ಪುನರಾಭಿವೃದ್ಧಿ ಹಾಗೂ ಆಧುನಿಕ ನಗರ ವಿನ್ಯಾಸದ ಕುರಿತು ಅಧ್ಯಯನ ನಡೆಸಲಾಗುತ್ತದೆ.
ಟೋಕಿಯೊದ ಟೋಕಿಯೊ ಮಿಡ್‌ಟೌನ್ ರೊಪ್ಪೊಂಗಿ ಸೇರಿದಂತೆ ಪ್ರಮುಖ ನಗರಾಭಿವೃದ್ಧಿ ಯೋಜನೆಗಳನ್ನು ಪರಿಶೀಲಿಸುವ ಕಾರ್ಯಕ್ರಮವೂ ಪ್ರವಾಸದಲ್ಲಿದೆ. ಜಪಾನ್‌ನ ನಗರಗಳಲ್ಲಿ ಅನುಸರಿಸಲಾಗುತ್ತಿರುವ ಯೋಜಿತ ಅಭಿವೃದ್ಧಿ ಮಾದರಿಗಳನ್ನು ಬೆಂಗಳೂರಿನಂತಹ ವೇಗವಾಗಿ ಬೆಳೆಯುತ್ತಿರುವ ನಗರಗಳಲ್ಲಿ ಅಳವಡಿಸಿಕೊಳ್ಳುವ ಸಾಧ್ಯತೆಗಳ ಬಗ್ಗೆ ಅಧ್ಯಯನ ನಡೆಸಲಾಗುತ್ತದೆ.
2027ರ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ ಆಹ್ವಾನ
ಜಪಾನ್‌ನ ಉದ್ಯಮಿಗಳೊಂದಿಗಿನ ಸಭೆಗಳ ಸಂದರ್ಭದಲ್ಲಿ, ಬೆಂಗಳೂರಿನಲ್ಲಿ 2027ರ ಏಪ್ರಿಲ್ 20ರಿಂದ 22ರವರೆಗೆ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶಕ್ಕೆ (Global Investors Meet 2027) ಕಂಪನಿಗಳಿಗೆ ಆಹ್ವಾನ ನೀಡುವ ಯೋಜನೆಯೂ ಇದೆ.
ಕರ್ನಾಟಕದಲ್ಲಿ ಕೈಗಾರಿಕಾ ಹೂಡಿಕೆಗಳನ್ನು ಹೆಚ್ಚಿಸುವುದು, ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸುವುದು ಹಾಗೂ ರಾಜ್ಯದ ಕೈಗಾರಿಕಾ ಬೆಳವಣಿಗೆಗೆ ಜಾಗತಿಕ ಕಂಪನಿಗಳನ್ನು ಆಕರ್ಷಿಸುವ ನಿಟ್ಟಿನಲ್ಲಿ ಈ ಪ್ರವಾಸ ಮಹತ್ವ ಪಡೆದುಕೊಂಡಿದೆ.








