ಬೆಂಗಳೂರು: ಮುಖ್ಯಮಂತ್ರಿಗಳಿಗೆ ರಾಜ್ಯದಲ್ಲಿ ತಾಂಡವವಾಡುತ್ತಿರುವ ಭ್ರಷ್ಟಾಚಾರದ ಬಗ್ಗೆ ಗಮನಹರಿಸಲು ಸಮಯವೇ ಇಲ್ಲ,ಆದರೆ ಎಲ್ಲೆಲ್ಲಿ ಖಾಲಿ ಜಾಗವಿದೆ, ಎಲ್ಲಿ ಸರ್ಕಾರಿ ಭೂಮಿಯಿದೆ ಎಂದು ಹುಡುಕಿ ನೋಡುವುದಕ್ಕಷ್ಟೇ ಅವರಿಗೆ ಸಮಯವಿದೆ. ಇತ್ತೀಚೆಗೆ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ರಾತ್ರಿ ವೇಳೆ ಜಾಗ ನೋಡಲು ಹೋದಾಗ, ಯಾರೋ ಕಳ್ಳರು ಬಂದಿದ್ದಾರೆ ಎಂದು ಭಾವಿಸಿ ಹಳ್ಳಿಯ ಜನರು ಖುದ್ದು ಮುಖ್ಯಮಂತ್ರಿಗಳನ್ನೇ ಓಡಿಸಿಕೊಂಡು ಬಂದಿದ್ದರು ಎಂಬ ಸ್ಫೋಟಕ ಸಂಗತಿಯನ್ನು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಬಹಿರಂಗಪಡಿಸಿದ್ದಾರೆ. ಅವರ ಈ ಹೇಳಿಕೆಯು ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನಕ್ಕೆ ಕಾರಣವಾಗಿದೆ.
ಬೇಲಿಯೇ ಎದ್ದು ಹೊಲ ಮೇಯುತ್ತಿದೆ: ಸೋಂಪುರ ಬಳಿ ರಾತ್ರಿ ನಡೆದಿದ್ದೇನು?
ಬೆಂಗಳೂರಿನ ಜಯನಗರದ ಕ್ಲೌಡ್ನೈನ್ ಆಸ್ಪತ್ರೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ರಾಜ್ಯದಲ್ಲಿ ಯಾವುದೇ ಭ್ರಷ್ಟಾಚಾರ ನಡೆಯುತ್ತಿಲ್ಲ ಎಂದು ಮುಖ್ಯಮಂತ್ರಿಗಳು ಹೇಳುತ್ತಿದ್ದಾರೆ, ಆದರೆ ವಾಸ್ತವದಲ್ಲಿ ಇಲ್ಲಿ ಬೇಲಿಯೇ ಎದ್ದು ಹೊಲ ಮೇಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಮುಖ್ಯಮಂತ್ರಿಗಳು ಇತ್ತೀಚೆಗೆ ಸೋಂಪುರ ಹತ್ತಿರ ಅಥವಾ ಅದರ ಸುತ್ತಮುತ್ತಲಿನ ಯಾವುದೋ ಒಂದು ಪ್ರದೇಶದಲ್ಲಿ ಬರೋಬ್ಬರಿ 150 ಎಕರೆ ಜಮೀನನ್ನು ವೀಕ್ಷಿಸುವುದಕ್ಕಾಗಿ ರಾತ್ರಿ ಹೊತ್ತಿನಲ್ಲಿ ಖಾಸಗಿ ಕಾರಿನಲ್ಲಿ ತೆರಳಿದ್ದರು. ಆ ವೇಳೆ ಇಷ್ಟೊಂದು ತಡರಾತ್ರಿಯಲ್ಲಿ ಯಾರೋ ಕಳ್ಳರು ಬಂದಿದ್ದಾರೆ ಎಂದುಕೊಂಡು ಅಲ್ಲಿನ ಹಳ್ಳಿಯ ಜನರು ಅವರನ್ನು ಓಡಿಸಿಕೊಂಡು ಬಂದಿದ್ದಾರೆ. ಈ ಘಟನೆ ಸುಳ್ಳೋ ಅಥವಾ ನಿಜವೋ ಎಂಬುದನ್ನು ನೀವು ಖುದ್ದು ಮುಖ್ಯಮಂತ್ರಿಗಳನ್ನೇ ಕೇಳಿ ಎಂದು ಕುಮಾರಸ್ವಾಮಿ ಸವಾಲು ಹಾಕಿದರು.
50,000 ರೂ. ಲಂಚ ಪಡೆದಿದ್ದು ಗೌರವಧನವೇ? ನನ್ನ ಬಳಿ ಟನ್ಗಟ್ಟಲೆ ದಾಖಲೆಗಳಿವೆ!
ಆಡಳಿತದಲ್ಲಿನ ಭ್ರಷ್ಟಾಚಾರಕ್ಕೆ ಕನ್ನಡಿ ಹಿಡಿದ ಕುಮಾರಸ್ವಾಮಿ, ಇತ್ತೀಚೆಗೆ ಕೇವಲ 20 ಗುಂಟೆ ಜಮೀನಿನ ಕೆಲಸ ಮಾಡಿಕೊಡಲು ರೆವಿನ್ಯೂ ಇನ್ಸ್ಪೆಕ್ಟರ್ ಒಬ್ಬರು 50,000 ರೂಪಾಯಿ ಲಂಚ ತೆಗೆದುಕೊಂಡು ಅಮಾನತುಗೊಂಡಿದ್ದಾರೆ, ಹಾಗಾದರೆ ಇದು ಭ್ರಷ್ಟಾಚಾರ ಅಲ್ಲವೇ? ಅಥವಾ ಅವರ ಸರ್ಕಾರದ ಸಚಿವರೊಬ್ಬರು ಹೇಳಿದಂತೆ ಅದೇನಾದರೂ ಗೌರವಧನವೇ? ಗೌರವದಿಂದ ಕೊಡಬೇಕು ಎಂದು ಸಚಿವರು ಹೇಳಿದ್ದರಲ್ಲಾ, ಹಾಗಾದರೆ ಇದು ಭ್ರಷ್ಟಾಚಾರವೋ ಅಲ್ಲವೋ ಎಂದು ಖಾರವಾಗಿ ಪ್ರಶ್ನಿಸಿದರು. ರಾಜ್ಯದ ಎಷ್ಟೋ ಕಡೆಗಳಲ್ಲಿ ಸಾರ್ವಜನಿಕರ ಕೆಲಸ ಮಾಡಿಕೊಡಲು ಅಧಿಕಾರಿಗಳು ದುಡ್ಡು ತೆಗೆದುಕೊಂಡು ರೆಡ್ ಹ್ಯಾಂಡ್ ಆಗಿ ಸಿಕ್ಕಿಬೀಳುತ್ತಿದ್ದಾರೆ. ಸರ್ಕಾರದ ಈ ಭ್ರಷ್ಟಾಚಾರದ ಕುರಿತು ನನ್ನ ಬಳಿ ಟನ್ಗಟ್ಟಲೆ ದಾಖಲೆಗಳಿವೆ ಎಂದು ಎಚ್.ಡಿ. ಕುಮಾರಸ್ವಾಮಿ ಗುಡುಗಿದರು.








