ಬೆಂಗಳೂರು: ಪ್ಯಾನ್-ಇಂಡಿಯಾ ಮಟ್ಟದಲ್ಲಿ ಎಲ್ಲಾ ಭಾಷೆಗಳಲ್ಲಿ ಮೂಡಿಬರುತ್ತಿರುವ ಟ್ರಾವೆಲ್ ಮತ್ತು ರೊಮ್ಯಾಂಟಿಕ್ ಕಾಮಿಡಿ ಸಿನಿಮಾ ‘ಮೋಟಾರ್ಸೈಕಲ್ ಡೈರೀಸ್’ ಈಗಾಗಲೇ ತನ್ನ ತಾಂತ್ರಿಕ ಶ್ರೀಮಂತಿಕೆಯಿಂದಾಗಿ ಭಾರಿ ನಿರೀಕ್ಷೆ ಹುಟ್ಟುಹಾಕಿದೆ.
ಖ್ಯಾತ ನಟ-ನಿರ್ದೇಶಕ ರಿಷಬ್ ಶೆಟ್ಟಿ ಅವರ ಪ್ರಸ್ತುತಿಯಲ್ಲಿ ಈ ಚಿತ್ರ ತಯಾರಾಗುತ್ತಿದ್ದು, ‘ಕಾಂತಾರ’ ಖ್ಯಾತಿಯ ಪ್ರಗತಿ ರಿಷಬ್ ಶೆಟ್ಟಿ ನಿರ್ಮಾಪಕಿ ಹಾಗೂ ವಸ್ತ್ರವಿನ್ಯಾಸಕಿಯಾಗಿ ಜವಾಬ್ದಾರಿ ಹೊತ್ತಿದ್ದಾರೆ. ಇವರೊಂದಿಗೆ ಸಿತಾರಾ ಎಂಟರ್ಟೈನ್ಮೆಂಟ್ಸ್ನ ಸೂರ್ಯದೇವರ ನಾಗ ವಂಶಿ ಕೈಜೋಡಿಸಿ ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.
‘ಕಾಂತಾರ’ ಮತ್ತು ‘ಕಾಂತಾರ: ಚಾಪ್ಟರ್ 1’ ಚಿತ್ರಗಳ ಮುಖ್ಯ ಸಹ ನಿರ್ದೇಶಕರಾಗಿ ಕೆಲಸ ಮಾಡಿದ ಅನುಭವ ಹೊಂದಿರುವ ಶಿವ ಚಿರಂತನ ಈ ಚಿತ್ರಕ್ಕೆ ಆಕ್ಷನ್-ಕಟ್ ಹೇಳುತ್ತಿದ್ದಾರೆ. ಚಿತ್ರದ ಕಥೆಗೆ ರಘು ನಿಡುವಳ್ಳಿ ಅವರ ಮನಮುಟ್ಟುವ ಹಾಗೂ ಭಾವನಾತ್ಮಕ ಸಂಭಾಷಣೆಗಳು ಜೀವ ತುಂಬಲಿವೆ. ಇನ್ನು ಸಂಗೀತವನ್ನು ರಾಷ್ಟ್ರಪ್ರಶಸ್ತಿ ವಿಜೇತ ಜಿ. ವಿ. ಪ್ರಕಾಶ್ ಕುಮಾರ್ ಅವರು ನೀಡುತ್ತಿದ್ದಾರೆ.
ತಾಂತ್ರಿಕ ವರ್ಗದಲ್ಲೂ ಭಾರತೀಯ ಚಿತ್ರರಂಗದ ಅತ್ಯುತ್ತಮ ಪ್ರತಿಭೆಗಳು ಈ ಚಿತ್ರಕ್ಕಾಗಿ ಒಂದಾಗಿದ್ದಾರೆ. ‘ಪುಷ್ಪ 2’ ಮತ್ತು ‘ಜರ್ಸಿ’ ಖ್ಯಾತಿಯ ರಾಷ್ಟ್ರಪ್ರಶಸ್ತಿ ವಿಜೇತ ನವೀನ್ ನೂಲಿ ಅವರ ಸಂಕಲನ ಚಿತ್ರಕ್ಕೆ ವೇಗ ನೀಡಲಿದ್ದು, ‘ಕಾಂತಾರ: ಚಾಪ್ಟರ್ 1’ ಸೆಟ್ನಲ್ಲಿ ಅನುಭವ ಪಡೆದಿರುವ ಭುವನ್ ರೆಡ್ಡಿ ತಮ್ಮ ಛಾಯಾಗ್ರಹಣದ ಮೂಲಕ ಪ್ರವಾಸದ ಸುಂದರ ದೃಶ್ಯಗಳನ್ನು ಸೆರೆಹಿಡಿಯಲಿದ್ದಾರೆ. ಅಲ್ಲದೆ, ‘ಕಾಂತಾರ’ ಮತ್ತು ‘777 ಚಾರ್ಲಿ’ ಖ್ಯಾತಿಯ ಪ್ರಶಸ್ತಿ ವಿಜೇತ ಕಲಾ ನಿರ್ದೇಶಕ ಧರಣಿ ಗಂಗೆಪುತ್ರ ಕಥೆಗೆ ಪೂರಕವಾದ ನೈಜ ಲೋಕವನ್ನು ಸೃಷ್ಟಿಸಲಿದ್ದಾರೆ.
ಒಟ್ಟಾರೆಯಾಗಿ, ಈ ದಿಗ್ಗಜ ತಂತ್ರಜ್ಞರ ಸಮಾಗಮವು ‘ಮೋಟಾರ್ಸೈಕಲ್ ಡೈರೀಸ್’ ಚಿತ್ರವನ್ನು ದೊಡ್ಡ ಪರದೆಯ ಮೇಲೆ ಒಂದು ಮರೆಯಲಾಗದ ದೃಶ್ಯ ಹಾಗೂ ಸಂಗೀತಮಯ ಅನುಭವವನ್ನಾಗಿ ರೂಪಿಸುವ ಭರವಸೆ ಮೂಡಿಸಿದೆ.







