ಟಿ-ಟ್ವೆಂಟಿ ವಿಶ್ವಕಪ್ ಮುಂದೂಡಿದ ಐಸಿಸಿ… ಐಪಿಎಲ್‍ಗೆ ಮುಹೂರ್ತ ಫಿಕ್ಸ್ ಮಾಡುತ್ತಾ ಬಿಸಿಸಿಐ..?
2020ರ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ರದ್ದುಗೊಳಿಸಲಾಗಿದೆ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿ ಅಧಿಕೃತವಾಗಿ ಘೋಷಣೆ ಮಾಡಿದೆ. ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯು ಆಸ್ಟ್ರೇಲಿಯಾದಲ್ಲಿ ಈ ಹಿಂದೆಯೇ ನಿಗದಿಯಾಗಿತ್ತು. ಆದ್ರೆ ಕೊರೋನಾ ವೈರಸ್ ಸೋಂಕು ಪ್ರತಿಷ್ಠಿತ ಟೂರ್ನಿಗೆ ಅಡ್ಡಿಯನ್ನುಂಟು ಮಾಡಿದೆ. ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಆಯೋಜಿಸಲು ಐಸಿಸಿ ಸಾಕಷ್ಟು ಸಮಯವಕಾಶಕ್ಕಾಗಿ ಕಾಯುತ್ತಿತ್ತು. ಆದ್ರೆ ಅಂತಿಮವಾಗಿ ಐಸಿಸಿ ಈ ಬಾರಿಯ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿಯನ್ನು ಮುಂದೂಡುವ ತೀರ್ಮಾನ ತೆಗೆದುಕೊಂಡಿತ್ತು.
ಐಸಿಸಿಯ ಈ ನಿರ್ಧಾರ ಬಿಸಿಸಿಐಗೆ ಲಾಭವಾಗಿದೆ. ಈಗಾಗಲೇ ತಾತ್ಕಾಲಿಕವಾಗಿ ಐಪಿಎಲ್ ಟೂರ್ನಿಯ ವೇಳಾಪಟ್ಟಿಯಂತೆ 2020ರ ಐಪಿಎಲ್
ಟೂರ್ನಿಯನ್ನು ಆಯೋಜಿಸುವ ಹಾದಿ ಸುಗಮವಾಗಿದೆ. ಸದ್ಯದ ವೇಳಾಪಟ್ಟಿಯಂತೆ ಸೆಪ್ಟಂಬರ್ 26ರಿಂದ ನವೆಂಬರ್ 8ರ ವರೆಗೆ ಯುಎಇನಲ್ಲಿ ನಡೆಯಲಿದೆ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು ಟೂರ್ನಿಗೆ ಪೂರ್ವ ತಯಾರಿಯನ್ನು ಮಾಡಿಕೊಳ್ಳುತ್ತಿವೆ.
ಎಲ್ಲವೂ ಅಂದುಕೊಂಡಂತೆ ನಡೆದ್ರೆ ಆಗಸ್ಟ್ ಕೊನೆಯ ವಾರದಲ್ಲಿ ಫ್ರಾಂಚೈಸಿಗಳು ಯುಎಇಗೆ ಪ್ರಯಾಣ ಬೆಳೆಸಬೇಕಾಗುತ್ತೆ. ಕೋವಿಡ್-19 ಮಾರ್ಗಸೂಚಿಗಳನ್ನು ಆಟಗಾರರು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಆ ನಂತರ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರವಾಸ ಕೈಗೊಳ್ಳಲಿದ್ದಾರೆ.
ಇನ್ನು ಮುಂದಿನ ಮೂರು ವರ್ಷ ಸತತವಾಗಿ ಟಿ-ಟ್ವೆಂಟಿ ವಿಶ್ವಕಪ್ ಟೂರ್ನಿ ನಡೆಯಲಿದೆ. 2021 ಅಕ್ಟೋಬರ್ ನಿಂದ ನವೆಂಬರ್ 14ರವರೆಗೆ ನಡೆದ್ರೆ, 2022ರ ಅಕ್ಟೋಬರ್‍ನಿಂದ ನವೆಂಬರ್ 13ರವರೆಗೆ ನಡೆಯಲಿದೆ. ಇನ್ನು 2023ರ ಅಕ್ಟೋಬರ್ ನಿಂದ ನವೆಂಬರ್ 26ರವರೆಗೆ ಭಾರತದಲ್ಲಿ ವಿಶ್ವಕಪ್ ಟೂರ್ನಿ ನಡೆಯಲಿದೆ.
ಇನ್ನೊಂದೆಡೆ ಐಸಿಸಿಯ ಈ ನಿರ್ಧಾರದಿಂದ ಇದೀಗ ಎಲ್ಲಾ ತಂಡಗಳು ದ್ವಿಪಕ್ಷೀಯ ಸರಣಿಗಳನ್ನು ನಡೆಸಲು ಯೋಜನೆಗಳನ್ನು ಹಾಕಿಕೊಳ್ಳುತ್ತಿವೆ.
ಇದೀಗ ಐಸಿಸಿಯು ಬಿಸಿಸಿಐನ ಐಪಿಎಲ್ ಹಾದಿಯನ್ನು ಸುಗಮಗೊಳಿಸಿದ್ರೂ ಕೇಂದ್ರ ಸರ್ಕಾರದ ಅನುಮತಿಯನ್ನು ಪಡೆಯಬೇಕಾಗುತ್ತದೆ. ಒಟ್ಟಿನಲ್ಲಿ ಸೆಪ್ಟಂಬರ್ ಅಕ್ಟೋಬರ್ -ನವೆಂಬರ್ ನಲ್ಲಿ ವಿಶ್ವದಲ್ಲಿ ಐಪಿಎಲ್ ಹವಾ ಶುರುವಾಗಲಿದೆ.








