ಹಾಗೇ ಬ್ಯಾಟಿಂಗ್ ಗೆ ಬಂದ.. ಎದುರಿಸಿದ್ದ ಎರಡನೇ ಎಸೆತವನ್ನೇ ಸಿಕ್ಸರ್ ಗಟ್ಟಿದ್ದ.. ಪಂತ್ ಗೆ ಬೆಂಬಲ ನೀಡಿದ ಗ್ರೇಮ್ ಸ್ವಾನ್
ರಿಷಬ್ ಪಂತ್.. ಟೀಮ್ ಇಂಡಿಯಾದ ಯುವ ವಿಕೆಟ್ ಕೀಪರ್. ಭಾರೀ ನಿರೀಕ್ಷೆಗಳೊಂದಿಗೆ ಟೀಮ್ ಇಂಡಿಯಾಗೆ ಎಂಟ್ರಿ ಪಡೆದಿದ್ದ ರಿಷಬ್ ಪಂತ್ ಈಗ ತಂಡದಲ್ಲಿ ಸ್ಥಾನ ಪಡೆಯಲು ಒದ್ದಾಡುತ್ತಿದ್ದಾರೆ. ಹಾಗೇ ನೋಡಿದ್ರೆ ರಿಷಬ್ ಪಂತ್ ಟೀಮ್ ಇಂಡಿಯಾ ಪರ ಆಡಲು ಶುರು ಮಾಡಿದಾಗ ಧೋನಿಯ ಉತ್ತರಾಧಿಕಾರಿ ಎಂದೇ ಬಿಂಬಿತರಾಗಿದ್ದರು. ಯಾಕಂದ್ರೆ ರಿಷಬ್ ಪಂತ್ ಅವರ ಬ್ಯಾಟಿಂಗ್ ವೈಖರಿ ಆ ಮಟ್ಟದಲ್ಲಿತ್ತು.
ಆದ್ರೆ ಆ ನಂತರ ರಿಷಬ್ ಪಂತ್ ಪೇಪರ್ ಮೇಲಿನ ಹೀರೋ ಆದ್ರು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ. ಬ್ಯಾಟಿಂಗ್ ಮತ್ತು ವಿಕೆಟ್ ಕೀಪಿಂಗ್ ನಲ್ಲೂ ವೈಫಲ್ಯ ಅನುಭವಿಸಿದ್ರು. ಹೀಗಾಗಿ ರಿಷಬ್ ಪಂತ್ ಟೀಮ್ ಇಂಡಿಯಾದಿಂದ ದೂರ ಉಳಿದ್ರು. ಆದ್ರೂ ರಿಷಬ್ ಪಂತ್ ಅನ್ನೋ ಪ್ರತಿಭಾವಂತ ಆಟಗಾರನ ಬಗ್ಗೆ ಚರ್ಚೆಯಂತೂ ನಡೆಯುತ್ತಿದೆ. ಬಿಸಿಸಿಐ ಅಧ್ಯಕ್ಷ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಮೆಂಟರ್ ಸೌರವ್ ಗಂಗೂಲಿ, ಡೆಲ್ಲಿ ಕ್ಯಾಪಿಟಲ್ಸ್ ತಂಡದ ಸಹಾಯಕ ಕೋಚ್ ಮಹಮ್ಮದ್ ಕೈಫ್, ಹಾಗೇ ಇರ್ಫಾನ್ ಪಠಾಣ್ ಸೇರಿದಂತೆ ಅನೇಕ ಮಾಜಿ ಕ್ರಿಕೆಟಿಗರು ರಿಷಬ್ ಪಂತ್ ಪ್ರತಿಭೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಇದೀಗ ಹೊಸ ಸೇರ್ಪಡೆ ಇಂಗ್ಲೆಂಡ್ ಕ್ರಿಕೆಟ್ ತಂಡದ ಮಾಜಿ ಸ್ಪಿನ್ನರ್ ಗ್ರೇಮ್ ಸ್ವಾನ್. ರಿಷಬ್ ಪಂತ್ ಅವರ ಆಟವನ್ನು ನೋಡಿದಾಗ ತನಗೆ ಏನು ಅನ್ನಿಸಿತ್ತು ಎಂಬುದನ್ನು ಗ್ರೇಮ್ ಸ್ವಾನ್ ಹೇಳಿಕೊಂಡಿದ್ದಾರೆ. ರಿಷಬ್ ಪಂತ್ ಆಟವನ್ನು ನಾನು ಆನಂದಿಸುತ್ತೇನೆ. ಆದ್ರೆ ಆತನಿಗೆ ಬೆಂಬಲ ನೀಡಬೇಕು. ಆತನನ್ನು ನೈಜ ಆಟವನ್ನಾಡಲು ಬಿಡಬೇಕು. ವಿಶ್ವ ಕ್ರಿಕೆಟ್ ನಲ್ಲಿ ಸ್ಟಾರ್ ಆಟಗಾರನಾಗುವ ಎಲ್ಲಾ ಸಾಧ್ಯತೆಗಳಿವೆ. ಆತನಲ್ಲಿ ಅಂತಹುದ್ದೊಂದು ಪ್ರತಿಭೆ ಇದೆ ಎಂದು ಸ್ವಾನ್ ಹೇಳಿದ್ದಾರೆ.
ಇದೇ ವೇಳೆ ಗ್ರೇಮ್ ಸ್ವಾನ್ ಅವರು ರಿಷಬ್ ಪಂತ್ ಅವರ ಪಂದ್ಯವನ್ನು ನೆನಪಿಸಿಕೊಂಡಿದ್ದಾರೆ. ಅದು 2018ರ ಇಂಗ್ಲೆಂಡ್‍ನ ಟ್ರೆಂಟ್ ಬಿಡ್ಜ್ ಟೆಸ್ಟ್ ಪಂದ್ಯ. ರಿಷಬ್ ಪಂತ್ ಏಳನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಗೆ ಬಂದಿದ್ದ. ಬಹುಶಃ ತಾನು ಎದುರಿಸಿದ್ದ ಎರಡನೇ ಎಸೆತವಿರಬೇಕು. ಮೋಯಿನ್ ಖಾನ್ ಎಸೆತವನ್ನು ಸೀದಾ ಪೆವಿಲಿಯನ್‍ಗೆ ಅಟ್ಟಿ ಸಿಕ್ಸರ್ ಬಾರಿಸಿದ್ದ. ಆಗ ನನಗೆ ಅನ್ನಿಸಿದ್ದು ಈತ ಒಬ್ಬ ವಿಶೇಷ ಆಟಗಾರ ಅಂತ. ಆತನಿಗೆ ತಂಡ ಬೆಂಬಲ ನೀಡಬೇಕು ಎಂದು ಗ್ರೇಮ್ ಸ್ವಾನ್ ಅವರು ಅಭಿಪ್ರಾಯಪಟ್ಟಿದ್ದಾರೆ.
2018ರಲ್ಲಿ ರಿಷಬ್ ಪಂತ್ ಟೆಸ್ಟ್ ಕ್ರಿಕೆಟ್ ನಲ್ಲಿ ಸದ್ದು ಮಾಡಿದ್ದರು. ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾ ವಿರುದ್ಧ ಟೆಸ್ಟ್ ಶತಕವನ್ನೂ ದಾಖಲಿಸಿದ್ದರು. ಆದ್ರೆ 2019ರಲ್ಲಿ ಪಂತ್ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲಿಲ್ಲ. ಆಡಿರುವ 13 ಟೆಸ್ಟ್ ಪಂದ್ಯಗಳಲ್ಲಿ ಪಂತ್ ಎರಡು ಶತಕ ಹಾಗೂ ಎರಡು ಅರ್ಧಶತಕ ಸೇರಿದಂತೆ ಒಟ್ಟು 814 ರನ್ ದಾಖಲಿಸಿದ್ದಾರೆ. ಆದ್ರೆ ಏಕದಿನ ಕ್ರಿಕೆಟ್ ನಲ್ಲಿ ಪಂತ್ 16 ಪಂದ್ಯಗಳಲ್ಲಿ ಗಳಿಸಿದ್ದು ಬರೀ 374 ರನ್. ಇದ್ರಲ್ಲಿ ಒಂದು ಅರ್ಧಶತವಿದೆ. ಇನ್ನು 28 ಟಿ-ಟ್ವೆಂಟಿ ಪಂದ್ಯಗಳಲ್ಲಿ ಎರಡು ಅರ್ಧಶತಕ ಸೇರಿದಂತೆ ಒಟ್ಟು 410 ರನ್ ಗಳಿಸಿದ್ದಾರೆ. ಇನ್ನೊಂದೆಡೆ ಐಪಿಎಲ್‍ನಲ್ಲಿ 54 ಪಂದ್ಯಗಳನ್ನು ಆಡಿರುವ ಪಂತ್, 11 ಅರ್ಧಶತಕ, ಒಂದು ಶತಕದೊಂದಿಗೆ ಒಟ್ಟು 1736 ರನ್ ದಾಖಲಿಸಿದ್ದಾರೆ.