ಮಂಗಳೂರು : ಮಂಗಳೂರು ಮಹಾನಗರ ಪಾಲಿಕೆಯ ನೂತನ ಮೇಯರ್ ಆಗಿ ಕಂಟೋನ್ಮೆಂಟ್ ವಾರ್ಡ್ ನ ದಿವಾಕರ ಪಾಂಡೇಶ್ವರ ಹಾಗೂ ಉಪಮೇಯರ್ ಆಗಿ ಕುಳಾಯಿ ವಾರ್ಡ್ನ ವೇದಾವತಿಯವರು ಆಯ್ಕೆಯಾಗಿದ್ದಾರೆ. ಮಂಗಳೂರು ಮಹಾನಗರ ಪಾಲಿಕೆಯ ಮೇಯರ್, ಉಪಮೇಯರ್ ಹಾಗೂ ಸ್ಥಾಯೀ ಸಮಿತಿ ಸ್ಥಾನಕ್ಕೆ ಇಂದು ಚುನಾವಣೆ ನಡೆಯಿತು. ಚುನಾವಣೆಯಲ್ಲಿ ಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಕೇಶವ ಅವರು ಸ್ಫರ್ಧಿಸಿದ್ದು ಅವರಿಗೆ 15 ಮತಗಳು ಹಾಗೂ ಬಿಜೆಪಿಯ ದಿವಾಕರ್ ಅವರಿಗೆ 46 ಮತಗಳು ಲಭಿಸಿದೆ.
ಉಪಮೇಯರ್ ಸ್ಥಾನಕ್ಕೆ ಕಾಂಗ್ರೆಸ್ನಿಂದ ಝೀನತ್ ಶಂಶುದ್ದೀನ್ ಸ್ಫರ್ಧಿಸಿದ್ದು ಅವರಿಗೆ 17 ಮತಗಳು ಹಾಗೂ ಬಿಜೆಪಿಯ ವೇದಾವತಿಯವರಿಗೆ 46 ಮತಗಳು ಲಭಿಸಿದೆ.
60 ಕಾರ್ಪೋರೇಟರ್ಗಳು ಹಾಗೂ ಶಾಸಕ ವೇದವ್ಯಾಸ ಕಾಮತ್, ಶಾಸಕ ಭರತ್ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜರನ್ನು ಸೇರಿಸಿ ಒಟ್ಟು 63 ಮತಗಳಿದ್ದು ಸಂಸದ ನಳಿನ್ ಕುಮಾರ್ ಕಟೀಲ್ ಅವರು ಗೈರು ಹಾಜರಾಗಿದ್ದರು. ಮೈಸೂರು ವಿಭಾಗ ಪ್ರಾದೇಶಿಕ ಆಯುಕ್ತರು ವಿ.ಯಶವಂತ್ ಅವರು ಚುನಾವಣಾಧಿಕಾರಿಯಾಗಿದ್ದು ಅಪರ ಪ್ರಾದೇಶಿಕ ಆಯುಕ್ತರು ಗಾಯತ್ರಿ, ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್, ಅಪರ ಜಿಲ್ಲಾಧಿಕಾರಿ ರೂಪಾ, ಮಹಾನಗರಪಾಲಿಕೆ ಆಯುಕ್ತ ಶಾನಾಡಿ ಅಜಿತ್ ಕುಮಾರ್ ಉಪಸ್ಥಿತರಿದ್ದರು.
ನವೆಂಬರ್ 12 ರಂದು ನಡೆದ ಮಂಗಳೂರು ಮಹಾನಗರ ಪಾಲಿಕೆಯ ಚುನಾವಣೆಯಲ್ಲಿ 60 ಕ್ಷೇತ್ರಗಳ ಪೈಕಿ ಬಿಜೆಪಿ 44 ಕ್ಷೇತ್ರಗಳಲ್ಲಿ, ಕಾಂಗ್ರೆಸ್ 14 ಕ್ಷೇತ್ರಗಳಲ್ಲಿ, ಎಸ್ಡಿಪಿಐ 2 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.








