ಬೆಂಗಳೂರು: ಹೆಮ್ಮಾರಿ ಕೊರೊನಾ ವಿರುದ್ಧ ಯೋಧರಂತೆ ದುಡಿಯುತ್ತಿರುವ ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಾಗೂ ನರ್ಸ್‍ಗಳಿಗೆ ರಾಜ್ಯ ಸರ್ಕಾರ ಗುಡ್‍ನ್ಯೂಸ್ ಕೊಟ್ಟಿದೆ. ಕನಾಟಕದ ಆಯುಷ್ ಹಾಗೂ ಯುನಾನಿ ವೈದ್ಯರು ಹಾಗೂ ನರ್ಸ್‍ಗಳ ವೇತನವನ್ನು ಹೆಚ್ಚಿಸಲು ಇಂದು ನಡೆದ ಕೋವಿಡ್ ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಯುನಾನಿ ವೈದ್ಯರ ವೇತನವನ್ನು 25 ಸಾವಿರದಿಂದ 48 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಅದೇ ರೀತಿ ಎಂಬಿಬಿಎಸ್ ವೈದ್ಯರ ಸಂಬಳವನ್ನು 80 ಸಾವಿರಕ್ಕೆ ಹೆಚ್ಚಳ ಮಾಡಲಾಗಿದೆ. ಹಾಗೆಯೇ ಸರ್ಕಾರಿ ಆಸ್ಪತ್ರೆಗಳಲ್ಲಿ ಜೀವದ ಹಂಗು ತೊರೆದು ಸೇವೆ ಸಲ್ಲಿಸುತ್ತಿರುವ ನರ್ಸ್‍ಗಳ ವೇತನವನ್ನು 15 ಸಾವಿರದಿಂದ 30ಸಾವಿರಕ್ಕೆ ಏರಿಕೆ ಮಾಡಲಾಗಿದೆ.
ಕೊರೊನಾ ಚಿಕಿತ್ಸೆಗೆ ನೇಮಕ ಮಾಡಿಕೊಳ್ಳುವ ಹಂಗಾಮಿ ವೈದ್ಯರಿಗೆ 80 ಸಾವಿರ ವೇತನ ನೀಡಲಾಗುವುದು. 6 ತಿಂಗಳವರೆಗೆ ಬಿಬಿಎಂಪಿ, ಆಯುಷ್, ಆರೋಗ್ಯ ಇಲಾಖೆಯ ನರ್ಸ್‍ಗಳಿಗೆ 30 ಸಾವಿರ ವೇತನ ನೀಡಲಾಗುವುದು ಎಂದು ಟಾಸ್ಕ್ ಫೋರ್ಸ್ ಸಭೆ ಬಳಿಕ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ ಸುಧಾಕರ್ ತಿಳಿಸಿದ್ದಾರೆ.
ಕೊರೊನಾ ಚಿಕಿತ್ಸಾ ದರ ಇಳಿಕೆ
ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್‍ಗೆ ವಿಧಿಸಲಾಗುತ್ತಿದ್ದ ದರವನ್ನು ಕಡಿತ ಮಾಡಲಾಗಿದೆ. ಖಾಸಗಿ ಆಸ್ಪತ್ರೆಗಳಲ್ಲಿ ಈ ಹಿಂದೆ ನಿಗಧಿ ಮಾಡಲಾಗಿದ್ದ ಕೊರೊನಾ ಟೆಸ್ಟ್ ದರವನ್ನು 4500ರೂನಿಂದ 3000ಕ್ಕೆ ಇಳಿಸಲಾಗಿದೆ. 3 ಸಾವಿರ ರೂ.ಗಳಲ್ಲೇ ಎಲ್ಲಾ ಪರೀಕ್ಷೆಗಳು ಮುಗಿಯಬೇಕು. ಪಿಪಿಇ ಕಿಟ್ ನೆಪ ಹೇಳಿ ಹೆಚ್ಚುವರಿ ಶುಲ್ಕ ದರ ವಿಧಿಸಬಾರದು. ಸರ್ಕಾರಿ ಆಸ್ಪತ್ರೆಗಳಲ್ಲಿ ಕೊರೊನಾ ಟೆಸ್ಟ್ ದರ 2 ಸಾವಿರ ರೂ. ನಿಗಧಿ ಮಾಡಲಾಗಿದೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಕೆ.ಸುಧಾಕರ್ ತಿಳಿಸಿದ್ದಾರೆ.
ಖಾಸಗಿ ಆಸ್ಪತ್ರೆಗಳು ಶೇ.50ರಷ್ಟು ಬೆಡ್‍ಗಳನ್ನು ಸರ್ಕಾರಕ್ಕೆ ಕೊಡಬೇಕು. ಉಳಿದ ಬೆಡ್‍ಗಳನ್ನು ಬೇರೆ ವಿಭಾಗಗಳಿಗೆ ನೀಡಬೇಕು. ಸರ್ಕಾರಿ ಆಸ್ಪತ್ರೆಗಳನ್ನು ಸಂಪೂರ್ಣವಾಗಿ ಕೊರೊನಾ ಆಸ್ಪತ್ರೆಯಾಗಿ ಪರಿವರ್ತಿಸಲು ಟಾಸ್ಕ್ ಫೋರ್ಸ್ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ ಎಂದು ಹೇಳಿದ್ದಾರೆ.