- ‘ವಿಜ್ಞಾನದ ತಿಳುವಳಿಕೆಯಿರುವ ಮನುಷ್ಯ ನಿಸರ್ಗದ ಸೌಂದರ್ಯವನ್ನು ತನ್ನ ತಿಳುವಳಿಕೆಯ ಕಣ್ಣುಗಳಿಂದ ನೋಡುತ್ತಾನೆ ಮಾತ್ರವಲ್ಲ ಆ ಸೌಂದರ್ಯ ಮುದುಡಿಹೋಗದಂತೆ ಕೂಡಾ ಜಾಗರೂಕನಾಗಿರುತ್ತಾನೆ. ಜ್ಞಾನವೆಂಬುದು ನಾವು ಜಗತ್ತನ್ನು ನೋಡುವ ರೀತಿಗೆ ಹೊಸ ದೃಷ್ಟಿ ಕೊಡುವುದರ ಜೊತೆಗೆ ಸೌಂದರ್ಯವನ್ನು ಆರಾಧಿಸುವ ಮನೋಭಾವವನ್ನೂ ಸೃಜಿಸುತ್ತದೆ’.
ಈ ಮಾತು ಭಾರತದ ಹೆಮ್ಮೆಯ ವಿಜ್ಞಾನಿ ಸರ್ ಚಂದ್ರಶೇಖರ ವೆಂಕಟ ರಾಮನ್ ಅಥವಾ ಸಿ ವಿ ರಾಮನ್ ರದು.
ಸರ್ ಸಿ.ವಿ.ರಾಮನ್ ಎಂದರೆ ಯಾವ ಭಾರತೀಯರಿಗೆ ತಾನೇ ಗೊತ್ತಿಲ್ಲ. ವಿಜ್ಞಾನದಲ್ಲಿ ನೊಬೆಲ್ ಪ್ರಶಸ್ತಿ ಪಡೆದ ಏಷ್ಯಾದ ಮೊತ್ತಮೊದಲ ವಿಜ್ಞಾನಿ ಎಂಬ ಹೆಗ್ಗಳಿಕೆಗೆ ಪಾತ್ರರಾದ ಮಹಾನ್ ವಿಜ್ಞಾನಿ. ಬೆಳಕಿನ ಕಿರಣಗಳ ವಕ್ರೀಭವನ ಹೇಗಾಗುತ್ತದೆ ಎಂದು ಜಗತ್ತಿಗೆ ತಿಳಿಸಿಕೊಟ್ಟವರು.
1928ರ ಫೆಬ್ರವರಿ 28ರಂದು ಸರ್ ಸಿ ವಿ ರಾಮನ್ ಅವರು ವಿಶ್ವಪ್ರಸಿದ್ಧವಾದ ‘ರಾಮನ್ ಎಫೆಕ್ಟ್’ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ತಿಳಿಸಿದ್ದರು. ಈ ಮಹಾನ್ ಸಂಶೋಧನೆಗಾಗಿ ಅವರಿಗೆ ನೊಬೆಲ್ ಪುರಸ್ಕಾರ ಕೂಡಾ ಲಭಿಸಿತು. ಸರ್ ಸಿ.ವಿ.ರಾಮನ್ ಅವರ ಅಪೂರ್ವ ಸಾಧನೆಗಳ ನೆನಪಿನಲ್ಲಿ ಅವರು ತಮ್ಮ ಸಂಶೋಧನೆಯ ವಿವರಗಳನ್ನು ಜಗತ್ತಿಗೆ ಬಹಿರಂಗಪಡಿಸಿದ ದಿನವನ್ನು ರಾಷ್ಟ್ರೀಯ ವಿಜ್ಞಾನ ದಿನವೆಂದು ಆಚರಿಸಲಾಗುತ್ತದೆ.
ವಿಜ್ಞಾನ ಹಾಗೂ ನಮ್ಮ ಜೀವನದಲ್ಲಿ ವಿಜ್ಞಾನದ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಉದ್ದೇಶದೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನ ಆಚರಣೆಯನ್ನು ಪ್ರತಿ ವರ್ಷ ಫೆಬ್ರವರಿ 28ರಂದು ಆಚರಿಸಲಾಗುತ್ತದೆ. ಸಿ ವಿ ರಾಮನ್ ಅವರ ಪೂರ್ಣ ಹೆಸರು ಚಂದ್ರಶೇಖರ ವೆಂಕಟರಾಮನ್ ಎಂದು. ಅವರು ಜನಿಸಿದ್ದು ನವೆಂಬರ್ 7, 1888ರಂದು ತಮಿಳುನಾಡಿನ ತಿರುಚನಾಪಳ್ಳಿಯಲ್ಲಿ. ಅವರ ತಂದೆ ಚಂದ್ರಶೇಖರ ಅಯ್ಯರ್ ಗಣಿತ ಹಾಗೂ ಭೌತವಿಜ್ಞಾನದ ಶಿಕ್ಷಕರಾಗಿದ್ದರು. ತಾಯಿ ಪಾರ್ವತಿಯಮ್ಮಾಳ್.
ಸೇಂಟ್ ಅಲೋಶಿಯಸ್ ಆಂಗ್ಲೋ-ಇಂಡಿಯನ್ ಹೈಸ್ಕೂಲ್ ವಿಶಾಖಪಟ್ಟಣದಲ್ಲಿ ಅಧ್ಯಯನ ಮಾಡಿದ ರಾಮನ್ 13 ನೇ ವಯಸ್ಸಿನಲ್ಲಿ ವಿದ್ಯಾರ್ಥಿವೇತನದೊಂದಿಗೆ ಎಫ್.ಎ ಪರೀಕ್ಷೆ ಮತ್ತು 15 ನೇ ವಯಸ್ಸಿನಲ್ಲಿ ಮೆಟ್ರಿಕ್ಯುಲೇಷನ್ ಉತ್ತೀರ್ಣರಾದರು. 1902 ರಲ್ಲಿ ತಮ್ಮ ತಂದೆ ಗಣಿತ ಮತ್ತು ಭೌತಶಾಸ್ತ್ರದ ಉಪನ್ಯಾಸಕರಾಗಿದ್ದ ಮದ್ರಾಸ್‌ನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿದರು. 1904 ರಲ್ಲಿ ರಾಮನ್ ಮದ್ರಾಸ್ ವಿಶ್ವವಿದ್ಯಾಲಯದಿಂದ ಪ್ರಥಮ ಸ್ಥಾನದಲ್ಲಿ ಬಿಎಸ್ಸಿ ಪದವಿ ಪಡೆದರು ಮತ್ತು ಭೌತಶಾಸ್ತ್ರದಲ್ಲಿ ಚಿನ್ನದ ಪದಕವನ್ನು ಗೆದ್ದರು. 1907ರಲ್ಲಿ ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಅವರು ಎಂಎಸ್ಸಿ ಪದವಿಯನ್ನು ಅತ್ಯುನ್ನತ ಸ್ಥಾನದೊಂದಿಗೆ ಪೂರ್ಣಗೊಳಿಸಿದರು. ರಾಮನ್ 18 ವರ್ಷದವರಿದ್ದಾಗ ಬ್ರಿಟಿಷ್ ಜರ್ನಲ್ ಫಿಲಾಸಫಿಕಲ್ ಮ್ಯಾಗಜೀನ್‌ಗೆ ವೈಜ್ಞಾನಿಕ ಪ್ರಬಂಧವನ್ನು ಕಳುಹಿಸಿದರು. ಮ್ಯಾಗಜೀನ್ ನಲ್ಲಿ ಆ ಪ್ರಬಂಧ ಪ್ರಕಟಿಸಲಾಯಿತು. ಅವರ ಎರಡನೇ ಪ್ರಬಂಧ ಪ್ರಕಟವಾದ ನಂತರ, ಬ್ರಿಟಿಷ್‌ನ ಪ್ರಮುಖ ಭೌತಶಾಸ್ತ್ರಜ್ಞ ಲಾರ್ಡ್ ರೇಲೀ ಅವರಿಂದ ರಾಮನ್ ಪ್ರಶಂಸಾ ಪತ್ರವನ್ನು ಪಡೆದರು. ಎಲ್ಲ ಪರೀಕ್ಷೆಗಳಲ್ಲೂ ಅಧಿಕ ಅಂಕಗಳೊಂದಿಗೆ ಪ್ರಥಮ ಸ್ಥಾನದಲ್ಲಿ ಗುರುತಿಸಿಕೊಂಡ ರಾಮನ್ ಅವರ ಆಸಕ್ತಿ ಸಂಗೀತ, ಇತಿಹಾಸ, ವಿಜ್ಞಾನ, ಇಂಗ್ಲಿಷ್, ವೇದಾಂತ ಹೀಗೆ ವಿಸ್ತರಿಸಿಕೊಳ್ಳುತ್ತಲೇ ಇತ್ತು.
ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ಅಸಿಸ್ಟೆಂಟ್ ಅಕೌಂಟೆಂಟ್ ಜನರಲ್ ಆಗಿ ನೇಮಕಗೊಂಡ ಅವರು ಸರಕಾರದ ಉನ್ನತ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದರು. ಆದರೆ ಇವರೊಳಗಿನ ವಿಜ್ಞಾನದ ತುಡಿತ, ತಮ್ಮ ಹುದ್ದೆಗೆ ರಾಜೀನಾಮೆ ನೀಡುವಂತೆ ಮಾಡಿ ಅದೇ ಸಂದರ್ಭದಲ್ಲಿ ಬಂದ ಕಲ್ಕತ್ತ ವಿಶ್ವವಿದ್ಯಾಲಯದ ಪ್ರಾಧ್ಯಾಪಕರಾಗುವ ಆಹ್ವಾನ ಸ್ವೀಕರಿಸುವಂತೆ ಮಾಡಿತು. ಮುಂದೆ ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಸೈನ್ಸ್ ನಿರ್ದೇಶಕರಾಗಿ ಬೆಂಗಳೂರಿಗೆ ಬಂದವರು ತಮ್ಮ ಕೊನೆಯ ಉಸಿರಿನ ತನಕ ವಿವಿಧ ಸಂಶೋಧನೆಗಳಲ್ಲಿ ಮಗ್ನರಾಗಿದ್ದರು.
ಒಮ್ಮೆ ಸಿ ವಿ ರಾಮನ್ ಮೆಡಿಟರೇನಿಯನ್ ಸಮುದ್ರದಲ್ಲಿ ಕಡಲಿನ ನೀಲಿ ಬಣ್ಣವನ್ನು ಕಂಡು ಆ ಸೊಬಗಿಗೆ ಪರವಶರಾಗುತ್ತ ಪಯಣಿಸುತ್ತಿದ್ದರು. ಆಗ ಅವರಿಗೆ ಕಡಲಿನ ನೀರಿನ ಬಣ್ಣ ಅದು ಹೇಗೆ ನೀಲಿಯಾಯಿತು ಎಂಬ ಪ್ರಶ್ನೆ ಕಾಡಿತು. ಆಕಾಶವೂ ನೀಲಿ, ಸಮುದ್ರವೂ ನೀಲಿ. ಹಾಗಾದರೆ ಆಕಾಶದ ಪ್ರತಿಫಲನ ನೀರಿನ ಮೇಲೆ ಕಾಣುತ್ತಿದೆಯೇ ಅಥವಾ ಇದಕ್ಕೆ ಇನ್ನೇನಾದರೂ ಕಾರಣ ಇರಬಹುದೇ ಎಂದು ಯೋಚಿಸಿದ ಅವರಿಗೆ ಸೂರ್ಯನ ಬೆಳಕು ನೀರಿನ ಕಣ ಕಣದಲ್ಲೂ ಹರಡಿಕೊಳ್ಳುವುದೇ ಸಮುದ್ರವು ನೀಲಿಯಾಗಿ ಕಾಣುವುದಕ್ಕೆ ಕಾರಣ ಎಂದು ತಿಳಿಯಿತು. ಆ ಕ್ಷಣದಿಂದ ತಮ್ಮ ಸಂಶೋಧನೆಯನ್ನು ತೀವ್ರಗೊಳಿಸಿದ ರಾಮನ್ ದ್ರವಗಳಲ್ಲಿ ಬೆಳಕಿನ ಸಂಚಲನೆಯ ಕುರಿತಾದ ಸುದೀರ್ಘ ಅಧ್ಯಯನವನ್ನು ಕೈಗೊಂಡು ಆ ಪ್ರಯೋಗಗಳ ಪರಿಣಾಮವನ್ನು ವೈಜ್ಞಾನಿಕ ಲೋಕದೆದುರು ತೆರೆದಿಟ್ಟರು.1928ರ ಫೆಬ್ರವರಿ 28ರಂದು ರಾಮನ್ ಅವರು ಬೆಂಗಳೂರಿನ ಸೆಂಟ್ರಲ್ ಕಾಲೇಜಿನ ಸಭಾಂಗಣದಲ್ಲಿ ಬೆಳಕಿನ ಚದುರಿವಿಕೆಯಲ್ಲಿ ಸಾಮಗ್ರಿಗಳ ಗುಣಲಕ್ಷ ಣಗಳ ಪರಿಣಾಮದ ಬಗ್ಗೆ ಹೊಸ ಆವಿಷ್ಕಾರವನ್ನು ಪ್ರತಿಪಾದಿಸಿದರು. ಮುಂದೆ ಅದು ರಾಮನ್ ಪರಿಣಾಮ ಅಥವಾ ರಾಮನ್ ಎಫೆಕ್ಟ್ ಎಂದೇ ಪ್ರಸಿದ್ಧವಾಯಿತು. ಈ ಸಂಶೋಧನೆಗಾಗಿ ರಾಮನ್ ಅವರಿಗೆ ನೋಬಲ್ ಪಾರಿತೋಷಕ ಸಂದಿತು. ರಾಮನ್ ಅವರ ಈ ಸಂಶೋಧನೆಯ ಗೌರವಾರ್ಥವಾಗಿ ಫೆಬ್ರವರಿ 28ರಂದು ರಾಷ್ಟ್ರೀಯ ವಿಜ್ಞಾನ ದಿನವನ್ನಾಗಿ ಆಚರಿಸಲಾಗುತ್ತಿದೆ.
ಇಂದು ಸರ್ ಸಿ.ವಿ. ರಾಮನ್ ಅವರ ಅಮೋಘ ಸಾಧನೆಗಳನ್ನು ಸ್ಮರಿಸಿಕೊಂಡು ಸಂಭ್ರಮಿಸಬೇಕಾದ ದಿನ. ಅವರು ಹಾಕಿ ಕೊಟ್ಟ ಹಾದಿ ಇಂದಿನ ಯುವ ವಿಜ್ಞಾನಿಗಳಿಗೆ ದಾರಿ ತೋರಿಸುತ್ತಿರುವ ದೀಪ. ಮುಂದಿನ ದಿನಗಳಲ್ಲಿ ಇನ್ನಷ್ಟು ಹೊಸ ಯುುವ ವಿಜ್ಞಾನಿಗಳು ಹುಟ್ಟಿ, ವೈಜ್ಞಾನಿಕ ಆವಿಷ್ಕಾರಗಳನ್ನು ನಡೆಸಿ ಸಂಶೋಧನಾ ರಂಗದಲ್ಲೂ ಜಗತ್ತಿನಲ್ಲೇ ಭಾರತ ಮುಂಚೂಣಿಯಲ್ಲಿ ನಿಲ್ಲುವಂತಾಗಿ ದೇಶದ ಹೆಸರನ್ನು ಬೆಳಗಿಸಲಿ.
KSRLPSನಲ್ಲಿ ಉದ್ಯೋಗಾವಕಾಶಗಳು – ಈಗಲೇ ಅರ್ಜಿ ಸಲ್ಲಿಸಿ!
ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಪ್ರಚಾರ ಸಂಘ (KSRLPS) ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದೆ. ಈ ಸಂಘವು ಗ್ರಾಮೀಣ ಭಾಗದ ಜೀವನೋಪಾಯವನ್ನು ಬೆಂಬಲಿಸಲು ಹಾಗೂ ಅಭಿವೃದ್ಧಿಗೆ ಕೈಗೊಂಡಿರುವ...