ಮಣಿಪುರ – 14 ದಿನಗಳ ವರೆಗೆ ಸಂಪೂರ್ಣ ಲಾಕ್ ಡೌನ್
ಮಣಿಪುರ, ಜುಲೈ 23: ಇಂದು ಮಧ್ಯಾಹ್ನ 2 ಗಂಟೆಯಿಂದ ಮಣಿಪುರವು 14 ದಿನಗಳವರೆಗೆ ಸಂಪೂರ್ಣ ಲಾಕ್‌ಡೌನ್ ಆಗಲಿದೆ. ಇದಕ್ಕೂ ಮುನ್ನ ಮಂಗಳವಾರ, ಮಣಿಪುರದಲ್ಲಿ ಕೋವಿಡ್ -19ನ 90 ಹೊಸ ಪ್ರಕರಣಗಳು ದಾಖಲಾಗಿದ್ದು, ಈ ಮೂಲಕ ಒಟ್ಟು ಪ್ರಕರಣಗಳ ಸಂಖ್ಯೆ 2,000 ದಾಟಿದೆ. ಒಟ್ಟು ಕೊರೋನಾ ಪ್ರಕರಣಗಳು ಈಗ 2,015 ರಷ್ಟಿದ್ದು, ಅದರಲ್ಲಿ 631 ಸಕ್ರಿಯ ಪ್ರಕರಣಗಳಾಗಿವೆ.
ಕೋವಿಡ್-19 ನಿಂದ ಮಂಗಳವಾರ ಅರವತ್ತನಾಲ್ಕು ಜನರು ಚೇತರಿಸಿಕೊಂಡಿದ್ದು, ಒಟ್ಟು ಚೇತರಿಸಿಕೊಂಡ ಪ್ರಕರಣಗಳ ಸಂಖ್ಯೆ 1,384 ಕ್ಕೆ ಏರಿಕೆ ಕಂಡಿದೆ.

ಏತನ್ಮಧ್ಯೆ, ಜನರ ಸಂಚಾರವನ್ನು ನಿಷೇಧಿಸಲು ದೇಬೌಲ್, ಬಂಡಾನ ಜಿಲ್ಲಾಧಿಕಾರಿ ಇಡೀ ಜಿಲ್ಲೆಯಲ್ಲಿ ಕರ್ಫ್ಯೂ ವಿಧಿಸಿದ್ದಾರೆ. ಥೌಬಲ್ ಜಿಲ್ಲೆಯ ಮೂರು ಪ್ರದೇಶಗಳು – ಥೌಬಲ್ ಖುನೌ, ಮೊಯಿಜಿಂಗ್ ಗ್ರಾಮ ಪಂಚಾಯತ್ ಪ್ರದೇಶಗಳು ಮತ್ತು ಹೈರೋಕ್ ಭಾಗ III – ಇವುಗಳನ್ನು ನಿಯಂತ್ರಣ ವಲಯಗಳಾಗಿ ಘೋಷಿಸಲಾಗಿದೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿಯವರ ಕಾರ್ಯಕ್ರಮವೂ ಮಣಿಪುರದಲ್ಲಿ ನಿಗದಿಯಾಗಿದೆ. 2024 ರ ವೇಳೆಗೆ ಎಲ್ಲಾ ಗ್ರಾಮೀಣ ಕುಟುಂಬಗಳಿಗೆ ಕುಡಿಯಲು ಯೋಗ್ಯವಾದ ನೀರನ್ನು ಒದಗಿಸುವ ರಾಜ್ಯ ಸರ್ಕಾರದ ಪ್ರಯತ್ನಗಳ ಪ್ರಮುಖ ಅಂಶವಾದ ಮಣಿಪುರ ನೀರು ಸರಬರಾಜು ಯೋಜನೆಗೆ ಗುರುವಾರ ಅವರು ಅಡಿಪಾಯ ಹಾಕಲಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಪ್ರಧಾನಿ ಈ ಯೋಜನೆಗೆ ಅಡಿಪಾಯ ಹಾಕಲಿದ್ದಾರೆ.








