ನವದೆಹಲಿ: 9 ತಿಂಗಳು ಅಮ್ಮನ ಗರ್ಭದಲ್ಲಿ ಬೆಳೆದು ಪ್ರಪಂಚ ನೋಡಲು ಆರಂಭಿದ ಪುಟ್ಟ ಕಂದಮ್ಮನ ಈ ಸ್ಟೋರಿ ಎಂತಹವರನ್ನು ನಂಬಲು ಸಾಧ್ಯವೇ ಇಲ್ಲ ಎನ್ನಿಸಿ ಬಿಡುತ್ತದೆ.
ಅದರೆ, ಇದು ನಿಜ. ನವದೆಹಲಿಯ ಆಸ್ಪತ್ರೆಯೊಂದರಲ್ಲಿರುವ 36 ದಿನದ ಹಸುಗೂಸಿಗೆ ದೂರದ 1000ಕಿ.ಮೀ ದೂರದಿಂದ ಪ್ರತಿದಿನ ಎದೆಹಾಲು ಬರುತ್ತದೆ ಎಂದರೆ. ಅದರಲ್ಲೂ ಲಾಕ್‍ಡೌನ್ ಆದ ಈ ದಿನಗಳ ಸಂಕಷ್ಟದ ಸಂದರ್ಭದಲ್ಲಿ. ಇದನ್ನು ನಿಜ ಮಾಡಿ ತೋರಿಸಿಕೊಟ್ಟಿದ್ದಾರೆ ಕೇಂದ್ರಾಡಳಿತ ಪ್ರದೇಶ ಲಡಾಕ್‍ನ ಹೆತ್ತವರು.
ಹೌದು, ಇದು ಲಡಾಕ್‍ನ ಲೇಹ್‍ನಲ್ಲಿ 35 ದಿನಗಳ ಹಿಂದೆ ಜನಿಸಿದ ಪುಟ್ಟ ಕಂದಮ್ಮನ ಕರುಣಾಜನಕ ಕಥೆ.
ಲೇಹ್‍ನ 30ರ ಹರೆಯದ ಡಾರ್ಜೆ ಪಾಮೋ ಎಂಬವರು ಜೂನ್ 16ರಂದು ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದರು. ಆದರೆ, ಹುಟ್ಟಿದ ಕಂದನಿಗೆ ಹಾಲು ಸೇವಿಸಲು ಆಗುತ್ತಿರಲಿಲ್ಲ.
ಮಕ್ಕಳ ವೈದ್ಯರಲ್ಲಿ ತೋರಿಸಿದಾಗ ಕಂದನ ಅನ್ನನಾಳ ಮತ್ತು ಶ್ವಾಸನಾಳ ಸಂಪರ್ಕ ಹೊಂದಿದ ಪರಿಣಾಮ ಹಾಲು ಕುಡಿಸಿದರೆ ಶ್ವಾಸಕೋಶ ಸೇರುತ್ತಿತ್ತು. ಇದು ಮಗುವಿನ ಜೀವಕ್ಕೆ ಅಪಾಯವೆಂದ ವೈದ್ಯರು ಆಪರೇಶನ್ ಮಾಡಬೇಕು. ದೆಹಲಿ ಅಥವಾ ಹರಿಯಾಣಕ್ಕೆ ಕರೆದುಕೊಂಡು ಹೋಗಿ ಎಂದರು.
ಹೀಗಾಗಿ, ತಾಯಿಯನ್ನು ಲೇಹ್‍ನಲ್ಲೇ ಬಿಟ್ಟು ದೆಹಲಿಯ ಆಸ್ಪತ್ರೆಗೆ ಕರೆತರಲಾಯ್ತು. ಜೂನ್ 18ರಂದು ದೆಹಲಿಗೆ ಬಂದ ನಂತರ ಮಾರನೇ ದಿನವೇ ಹಸುಗೂಸಿಗೆ ನಡೆದ ಆಪರೇಶನ್ ಸಕ್ಸಸ್ ಕೂಡ ಆಯಿತು. ಆದರೆ ಸಮಸ್ಯೆ ಶುರುವಾಗಿದ್ದು ಮಗುವಿಗೆ ಪೌಡರ್ ಹಾಲು ಕೊಡಬೇಕೋ ಅಥವಾ ತಾಯಿ ಹಾಲು ನೀಡಬೇಕೋ ಎಂಬುದು.
ಈ ಸಂದಿಗ್ಧ ಪರಿಸ್ಥಿತಿ ಅರಿತ ಮಗುವಿನ ತಂದೆ ಮೈಸೂರಿನಲ್ಲಿ ಕೆಲಸ ಮಾಡುತ್ತಿದ್ದ ಜಿಕ್ಮೆತ್ ವಾಂಗ್ಡು ದೆಹಲಿಗೆ ದೌಡಯಿಸಿ ಲೇಹ್‍ನಿಂದ ದೆಹಲಿಗೆ ಪ್ರತಿದಿನ ತಾಯಿಯ ಎದುಹಾಲು ತರಿಸಿಕೊಳ್ಳುವ ವ್ಯವಸ್ಥೆ ಮಾಡಿದರು.
ವೈದ್ಯರ ಸಲಹೆ ಮೇರೆಗೆ ಲೇಹ್‍ನಿಂದ ದೆಹಲಿಗೆ ಸುಮಾರು 1000 ಕಿ.ಮೀ ದೂರದಿಂದ ಮಗುವಿಗೆ 60 ಮಿಲಿ ಲೀಟರ್ ತಾಯಿ ಹಾಲಿನ ಆರು ಬಾಟಲಿಗಳನ್ನು ತಲುಪಿಸಲು ವ್ಯವಸ್ಥೆ ಆಯಿತು.
ರಸ್ತೆ ಮೂಲಕವಂತೂ ತಾಯಿ ಹಾಲು ತರುವುದು ಅಸಾಧ್ಯವಾಗಿದ್ದೇ ವಿಮಾನ. ಮಗುವಿನ ಸ್ಥಿತಿ ಅರಿತ ವಿಮಾನಯಾನ ಸಂಸ್ಥೆಗಳು ಉಚಿತವಾಗಿ ತಾಯಿಯ ಹಾಲನ್ನು ದೆಹಲಿಗೆ ತಲುಪಿಸಲು ನೆರವಾದವು.
ಹೀಗೆ 36 ದಿನಗಳ ಸಾಹಸದ ಫಲವಾಗಿ ಮಗು ಚೇತರಿಸಿಕೊಂಡಿದ್ದು ಇಂದು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ತಾಯಿಯ ಮಡಿಲು ಸೇರುತ್ತಿದೆ. ದೂರದ 1000 ಕಿ.ಮೀ ದೂರದಿಂದ ಮಗುವಿಗೆ ತಾಯಿ ಹಾಲನ್ನು ತಲುಪಿಸಿದ ಸ್ಟೋರಿ ಯಾವ ಸಿನಿಮಾ ಕಥೆಗಿಂತಲೂ ಮಿಗಿಲಾದುದು. ಈ ಸಾಹಸಗಾಥೆಯನ್ನು ಕೇಳಿದ ಪ್ರತಿಯೊಬ್ಬರೂ ಮಗು ಹಾಗೂ ಪೋಷಕರಿಗೆ ಹಾರೈಕೆಯ ಜತೆಗೆ ತಂದೆ-ತಾಯಿಯ ಸಾಹಸವನ್ನು ಕೊಂಡಾಡಿದ್ದಾರೆ.