ಗ್ವಾಲಿಯರ್ : ಆಗಸ್ಟ್ 5 ರಂದು ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ನಡೆಯಲಿದೆ. ಇದಕ್ಕೆ ಈಗಾಗಲೇ ಎಲ್ಲಾ ಸಿದ್ಧತೆಗಳು ನಡೆಯುತ್ತಿದೆ. ಇದರ ಮಧ್ಯೆ ಮಧ್ಯಪ್ರದೇಶದ ಬಿಜೆಪಿ ನಾಯಕ ರಾಮೇಶ್ವರ್ ಶರ್ಮಾ ಅವರು ರಾಮಮಂದಿರ ನಿರ್ಮಾಣದೊಂದಿಗೆ ಕೊರೊನಾ ವೈರಸ್ ಅಂತ್ಯವಾಗಲಿದೆ ಎಂದು ಹೇಳಿಕೆ ನೀಡಿದ್ದಾರೆ.
ಗ್ವಾಲಿಯರ್ ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 5 ರಂದು ರಾಮಮಂದಿರ ಭೂಮಿ ಪೂಜೆ ನಡೆಯಲಿದ್ದು, ಭಗವಾನ್ ರಾಮ ಮಾನವಕುಲದ ಕಲ್ಯಾಣಕ್ಕಾಗಿ ಮತ್ತು ಆ ಸಮಯದಲ್ಲಿ ರಾಕ್ಷಸರನ್ನು ಕೊಲ್ಲಲು ಪುನರ್ ಜನ್ಮ ಪಡೆದಿದ್ದರು. ಅದೇ ರೀತಿ ರಾಮಮಂದಿರ ನಿರ್ಮಾಣ ಪ್ರಾರಂಭವಾದ ಕೂಡಲೇ ಕೋವಿಡ್-19 ಸೋಂಕಿನ ನಾಶವೂ ಪ್ರಾರಂಭವಾಗುತ್ತದೆ ಎಂದು ಶರ್ಮಾ ಹೇಳಿದ್ದಾರೆ.
ಇನ್ನು ಆಗಸ್ಟ್ 5ರಂದು ಪ್ರಧಾನಿ ನರೇಂದ್ರ ಮೋದಿ ಅವರು ರಾಮಮಂದಿರ ಶಿಲಾನ್ಯಾಸ ಕ್ರಮ ನಡೆಸಲಿದ್ದಾರೆ. ಈ ಸಮಾರಂಭದಲ್ಲಿ ಆಹ್ವಾನಿತರು ಸೇರಿದಂತೆ 200 ಕ್ಕೂ ಹೆಚ್ಚು ಜನರು ಹಾಜರಾಗುವುದಿಲ್ಲ ಮತ್ತು ಸಮಾರಂಭದಲ್ಲಿ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವ ನಿಯಮಗಳನ್ನು ಅನುಸರಿಸಲಾಗುವುದು ಎಂದು ರಾಮ್ ದೇವಾಲಯದ ಟ್ರಸ್ಟಿ ಗೋವಿಂದ್ ದೇವ್ ಗಿರಿ ಹೇಳಿದ್ದಾರೆ.








