ಬೆಳಗಾವಿ: ಬೆಳಗಾವಿ ಜಿಲ್ಲಾಸ್ಪತ್ರೆಯಲ್ಲಿ ವೈದ್ಯರ ನಿರ್ಲಕ್ಷ್ಯದಿಂದ ರೋಗಿ ಸಾವು ಖಂಡಿಸಿ ಸಂಬಂಧಿಕರು ವೈದ್ಯರ ಮೇಲೆ ಹಲ್ಲೆ ಯತ್ನ ನಡೆಸಿದ್ದಲ್ಲದೆ ಆಂಬ್ಯುಲೆನ್ಸ್‍ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪ್ರಕರಣ ಸಂಬಂಧ ಬೆಳಗಾವಿಯ ಮಾಳಮಾರುತಿ ಠಾಣೆ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಘಟನೆ ನಡೆದಿದ್ದು ಹೇಗೆ..!
ಕೊರೊನಾ ಸೋಂಕಿನಿಂದ ಬಳಲುತ್ತಿದ್ದ ಬೆಳಗಾವಿಯ ಘೀ ಗಲ್ಲಿಯ 59 ವರ್ಷದ ವ್ಯಕ್ತಿಯನ್ನು ಜುಲೈ.19ರಂದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಸಂಜೆ ಮೃತಪಟ್ಟಿದ್ದಾನೆ. ವ್ಯಕ್ತಿಯ ಸಾವಿಗೆ ವೈದ್ಯರ ನಿರ್ಲಕ್ಷ್ಯವೇ ಕಾರಣ. ವೈದ್ಯರು ಸರಿಯಾದ ಚಿಕಿತ್ಸೆ ನೀಡಿದ್ದರೆ ಆತ ಸಾವನ್ನಪ್ಪುತ್ತಿರಲಿಲ್ಲ ಎಂದು ಮೃತನ ಸಂಬಂಧಿಕರು ಐಸಿಯು ವಾರ್ಡ್‍ಗೆ ನುಗ್ಗಿ ವೈದ್ಯರು ಹಾಗೂ ಸಿಬ್ಬಂದಿ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಈ ವೇಳೆ ಮಾತಿನ ಚಕಮಕಿ ನಡೆದು ಪರಿಸ್ಥಿತಿ ಕೈಮೀರುವ ಹಂತ ತಲುಪಿತ್ತು. ಸ್ಥಳಕ್ಕೆ ಧಾವಿಸಿದ್ದ ಪೊಲೀಸರು ಪರಿಸ್ಥಿತಿ ತಿಳಿಸಿಗೊಳಿಸಿದ್ದರು.
ಆದರೆ, ಆಸ್ಪತ್ರೆಯಿಂದ ಹೊರಗೆ ಬಂದ ಮೃತನ ಸಂಬಂಧಿಕರು ವೈದ್ಯರ ಕಾರು ಸೇರಿದಂತೆ ಐದು ಕಾರುಗಳ ಮೇಲೆ ಕಲ್ಲು ತೂರಾಟ ನಡೆಸಿ ಗಾಜು ಜಖಂಗೊದ್ದಾರೆ. ಅಷ್ಟಕ್ಕೇ ಸುಮ್ಮನಾಗದ ಗುಂಪು ಅಲ್ಲೇ ನಿಂತಿದ್ದ ಆಂಬ್ಯುಲೆನ್ಸ್‍ಗೆ ಬೆಂಕಿ ಹಚ್ಚಿದ್ದಾರೆ. ಬೆಂಕಿಯಿಂದ ಆಂಬ್ಯುಲೆನ್ಸ್ ಸಂಪೂರ್ಣ ಸುಟ್ಟು ಕರಕಲಾಗಿದೆ.
ಘಟನೆ ಹಿನ್ನೆಲೆಯಲ್ಲಿ ಆರೋಪಿಗಳ ವಿರುದ್ಧ ವೈದ್ಯರು ನೀಡಿದ ದೂರಿನ ಮೇರೆಗೆ ವಿಪತ್ತು ನಿರ್ವಹಣಾ ಕಾಯ್ದೆ ಸೇರಿದಂತೆ ಹಲವು ಕೇಸ್‍ಗಳ ಅಡಿ ಪ್ರಕರಣ ದಾಖಲಾಗಿತ್ತು.








