ಮೈಸೂರು : ಇನ್ನೇನು ಅವರ ರಾಜಕೀಯ ಜೀವನ ಮುಗಿದೇ ಹೋಯ್ತು.. ಬಿಜೆಪಿ ಹೈಕಮಾಂಡ್ ಅವರಿಗೆ ಚಾನ್ಸ್ ಕೊಟ್ಟಿಲ್ವಂತೆ.. ಹಾಗಾದ್ರೆ ಅವರ ರಾಜಕೀಯ ಭವಿಷ್ಯ ಇಲ್ಲಿಗೆ ಮುಗೀತಾ..? ಎಂದು ಮಾಜಿ ಸಚಿವ ಹೆಚ್. ವಿಶ್ವನಾಥ್ ಬಗ್ಗೆ ಈ ಪ್ರಶ್ನೆಗಳು ಮೂಡುತ್ತಲೇ ಇದ್ದವು. ಆದ್ರೆ ಈ ಎಲ್ಲಾ ಪ್ರಶ್ನೆ, ಅನುಮಾನಗಳಿಗೆ ಬ್ರೇಕ್ ಹಾಕುತ್ತಾ ಪಟ್ಟುಬಿಡದ ಹಳ್ಳಿಹಕ್ಕಿ, ಮತ್ತೆ ವಿಧಾನಸೌಧಕ್ಕೆ ಹಾರಿ ಹೋಗುವ ಮೂಲಕ ಎದುರಾಳಿಗೆ ರಾಜಕೀಯ ಕರಗತಗಳನ್ನು ಪ್ರದರ್ಶಿಸಿದ್ದಾರೆ. ಈ ಮೂಲಕ ಎದುರಾಳಿಗಳಿಗೆ ತಾವೇನು ಎಂಬುದನ್ನ ತೋರಿಸಿಕೊಟ್ಟಿದ್ದಾರೆ.
ಹೌದು..! ಉಪಚುನವಾಣೆ, ಎಂಎಲ್ ಸಿ ಎಲೆಕ್ಷನ್ ನಲ್ಲಿ ಹಿನ್ನಡೆ ಅನುಭವಿಸಿದ್ದ ಹೆಚ್.ವಿಶ್ವನಾಥ್ ಬಗ್ಗೆ ರಾಜಕೀಯ ಪಡಸಾಲೆಯಲ್ಲಿ ನಾನಾ ವದಂತಿಗಳು ಹರಿದಾಡುತ್ತಿದ್ದವು. ಅವರು ಎಂಎಲ್ ಸಿ ಆಗೋದೆ ಇಲ್ಲ ಎಂಬ ಮಾತುಗಳು ಸಹ ಕೇಳಿಬಂದಿದ್ದವು. ಆದ್ರೆ ಇದೀಗ ವಿಶ್ವನಾಥ್ ಅವರು ಮತ್ತೆ ವಿಧಾನಸೌಧದತ್ತ ಬಂದಿದ್ದಾರೆ.
ಎಂಎಲ್ ಸಿ ಆಗಲು ಕಾರಣವಾಯ್ತಾ ಈ ಹೇಳಿಕೆಗಳು..?
ಉಪಚುನಾವಣೆ ಸೋಲಿನ ಬಳಿಕ ವಿಶ್ವನಾಥ್ ಎಂಎಲ್ ಸಿಗಾಗಿ ಭಾರಿ ಲಾಬಿ ನಡೆಸಿದರು. ಈ ಹಂತದಲ್ಲಿ ಬಹಿರಂಗವಾಗಿಯೇ ಬಿಜೆಪಿ ನಾಯಕರ ವಿರುದ್ಧವೇ ಹೇಳಿಕೆಗಳನ್ನು ನೀಡುತ್ತಿದ್ದರು. ಇದು ಎಂಎಲ್ ಸಿ ಆಗುವ ಅವರ ಕನಸಿಗೆ ನೀರೆರಚಿತು.
ಇದರಿಂದ ಚೇತರಿಸಿಕೊಂಡ ವಿಶ್ವನಾಥ್, ಪ್ರಧಾನಿ ಮೋದಿ, ಗೃಹಮಂತ್ರಿ ಅಮಿತ್ ಶಾ, ಪಕ್ಷದ ಹೈಕಮಾಂಡ್, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಪಕ್ಷದ ಮುಖಂಡರನ್ನ ಹಾಡಿ ಹೊಗಳಿದರು. ‘ಮೋದಿ ಅವರನ್ನು ಹಿಂದುಳಿದರ ನಾಯಕ, ಮೋದಿ ಈ ದೇಶ ಕಂಡ ಮೊದಲ ಅಹಿಂದ ಪ್ರಧಾನಿ. ಮೋದಿ ಅವರನ್ನು ದೇವರಾಜು ಅರಸು ಅವರಿಗೆ ಹೋಲಿಕೆ ಮಾಡಿದ್ದು. ಮೋದಿ ಈ ದೇಶ ಕಂಡ ಯಶಸ್ವಿ ನಾಯಕ’ ಎಂದು ಪ್ರಧಾನಿಗಳನ್ನು ಹಾಡಿಹೊಗಳಿದ್ದರು. ಇದೇ ಕಾರಣಕ್ಕೆ ಅವರಿಗೆ ಸಾಹಿತ್ಯ ಕ್ಷೇತ್ರದಿಂದ ಎಂಎಲ್ ಸಿ ಆಗೋ ಭಾಗ್ಯ ಸಿಕ್ಕಿದೆ ಎಂದು ರಾಜಕೀಯ ಪಡಸಾಲೆಯಲ್ಲಿ ಚರ್ಚೆಗಳು ನಡೆಯುತ್ತಿವೆ.
ಇದಕ್ಕೆ ಕಾರಣ ಕೂಡ ಇದೆ.. ಈ ಮೊದಲು ಹೆಚ್. ವಿಶ್ವನಾಥ್ ಅವರು ಬಿಜೆಪಿ ನಾಯಕರ ವಿರುದ್ಧ ಬಹಿರಂಗ ಹೇಳಿಕೆಗಳನ್ನು ನೀಡುತ್ತಿದ್ದರು. ಹೀಗಾಗಿ ವಿಶ್ವನಾಥ್ ಅವರ ನಾಮನಿರ್ದೇಶನಕ್ಕೆ ಸ್ವತಃ ಪಕ್ಷದಲ್ಲೇ ವಿರೋಧವಿತ್ತು. ಅಲ್ಲದೆ ವಿಶ್ವನಾಥ್ ಅವರಿಗೆ ಎಂಎಲ್ ಸಿ ಸ್ಥಾನ ಕೈ ತಪ್ಪಿದಾಗ ಅವರ ಕೆಲ ಆಪ್ತರು, ವಿಶ್ವನಾಥ್ ಹೇಳಿಕೆಗಳಿಂದಲೇ ಅವರಿಗೆ ಎಂಎಲ್ ಸಿ ಸ್ಥಾನ ತಪ್ಪಿದೆ ಎಂದಿದ್ದರು.








