ಸರ್ಕಾರದ ವಿರುದ್ಧ ಕೊರೊನಾ ಬಿಕ್ಕಟ್ಟಿನ ವಿಚಾರದಲ್ಲಿ ವಿಪಕ್ಷ ನಾಯಕರು ತೀವ್ರವಾಗಿ ಟೀಕಾಪ್ರಹಾರಗಳನ್ನು ನಡೆಸುತ್ತಿದ್ದು, ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ಆರೋಪಿಸುತ್ತಲೇ ಬಂದಿದ್ದಾರೆ. ಇದಕ್ಕೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಸುಧಾಕರ್ ಅವರು ಸರಣಿ ಟ್ವೀಟ್ ಗಳ ಮೂಲಕ ಕಾಂಗ್ರೆಸ್ ಗೆ ತಿರುಗೇಟು ನೀಡಿದ್ದಾರೆ.
“ ಜಗತ್ತಿನಲ್ಲಿ ನಾನೇ ಬಲ್ಲವನೆಂದು, ನಾನೇ ಸತ್ಯವಂತನೆಂದುಕೊಂಡರೆ ಅಂಥಹವರು ಎಲ್ಲರಿಗಿಂತಲೂ ಕೀಳಾಗುತ್ತಾರೆ. ಸೇವಾ ಕಾರ್ಯದಲ್ಲಿ ಪ್ರೀತಿ ಕರುಣೆ ಇರಬೇಕೆ ಹೊರತು ಪ್ರತಿಷ್ಠೆ ಕೀರ್ತಿ ಮತ್ತು ಕಾಮನೆಗಳಲ್ಲ. ಅಸೂಯೆ ಅಧಃಪತನಕ್ಕೆ ನಾಂದಿ. ಸತ್ಯ ಯಾವುತ್ತು ಧಾನ್ಯವಿದ್ದಂತೆ, ಸುಳ್ಳು ತೌಡಿದ್ದಂತೆ. ಜನರಿಗೆ ಗಟ್ಟಿ, ಜೊಳ್ಳು ಯಾವುದು ಎಂದು ಗೊತ್ತಿದೆ.’’ ಎಂದು ಟಾಂಗ್ ಕೊಟ್ಟಿದ್ದಾರೆ.
ಮತ್ತೊಂದು ಟ್ವೀಟ್ ಮಾಡಿ “ ವೈದ್ಯಕೀಯ ಉಪಕರಣಗಳ ಖರೀದಿಯಲ್ಲಿ ಯಾವುದೇ ಭ್ರಷ್ಟಾಚಾರವಾಗಿಲ್ಲ ಅಂತ ನಾವು ದಾಖಲೆಗಳನ್ನು ಬಿಡುಗಡೆ ಮಾಡಿದರೂ ಮಾನ್ಯ ವಿರೋಧ ಪಕ್ಷದ ನಾಯಕರು ಆಧಾರ ರಹಿತವಾಗಿ ಸುಳ್ಳು ಆರೋಪ ಮಾಡುತ್ತಿದ್ದಾರೆ. ನಿಜ ಸತ್ಯದ ಅರಿವಾಗುವ ತನಕ ನೀವು ತಿಳಿದಿರುವ ಸತ್ಯವೆಲ್ಲವೂ ಕಾಲ್ಪನಿಕ” ಎಂದು ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿದ್ದಾರೆ.
ಅಲ್ದೇ “ಕೊರೊನಾ ಮಹಾಮಾರಿಯಿಂದ ಸಂಕಷ್ಟದಲ್ಲಿ ಸತ್ಯಾಂಶವಿಲ್ಲದ ದಾಖಲೆಗಳ ಮೂಲಕ ರಾಜ್ಯದ ಜನರ ದಿಕ್ಕು ತಪ್ಪಿಸುವ ನಿಮ್ಮ ಆಧಾರ ರಹಿತ ಆರೋಪಗಳನ್ನು ರಾಜ್ಯದ ಜನ ನಂಬುವುದಿಲ್ಲ. ಜನರಿಗೆ ಸತ್ಯ ಯಾವುದು ಸುಳ್ಳು ಯಾವುದು ಗೊತ್ತಿದೆ. ಯಾರು ಬೇಕಾದರೂ ಲೆಕ್ಕ ಕೇಳಿದರೂ ನಮ್ಮ ಬಳಿ ಸರಿಯಾದ ದಾಖಲೆಗಳಿವೆ” ಎಂದು ಆರೋಪಗಳ ಸುರಿಮಳೆಗೈದಿರುವ ಕಾಂಗ್ರೆಸ್ ನಾಯಕರಿಗೆ ಖಾರವಾಗಿ ಪ್ರತ್ಯುತ್ತರ ನೀಡಿದ್ದಾರೆ.
ಇಷ್ಟಕ್ಕೆ ಸುಮ್ಮನಾಗದೆ ಮತ್ತೊಂದು ಟ್ವೀಟ್ ಮಾಡಿರುವ ಸುದಾಕರ್ ಅವರು “ಇಷ್ಟು ವರ್ಷದ ರಾಜಕೀಯ ಅನುಭವದಲ್ಲಿ ಪ್ರಸ್ತಾವನೆಗೂ ಮಂಜೂರಾತಿಗೂ ವ್ಯತ್ಯಾಸ ಗೊತ್ತಿಲ್ಲ ಎಂದು ಕಾಣುತ್ತದೆ. ಅವರು ವೈದ್ಯಕೀಯ ಶಿಕ್ಷಣ ಇಲಾಖೆಯಲ್ಲಿ 815 ಕೋಟಿ ರೂ. ವೆಚ್ಚದಲ್ಲಿ ಉಪಕರಣ ಖರೀದಿಯಾಗಿದೆ ಎಂದಿದ್ದಾರೆ. ಆದರೆ ಖರ್ಚು ಕೇವಲ 33 ಕೋಟಿ. ರೂ. ಅಷ್ಟು ಪ್ರಸ್ತಾವನೆ ಖರ್ಚಿನ ಲೆಕ್ಕ ಹೇಗೆ ಆಗುತ್ತದೆ” ಎಂದು ವ್ಯಂಗ್ಯವಾಡಿದ್ದಾರೆ. 








