ಬೆಂಗಳೂರು: ಲಾಕ್‍ಡೌನ್ ತೆರವಾದ ಬಳಿಕವೂ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದಲ್ಲಿ ಇಂದು ಕೊರೊನಾ ಮಹಾಸ್ಫೋಟವಾಗಿದೆ.
ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಬರೋಬ್ಬರಿ 5030 ಮಂದಿಗೆ ಕೊರೊನಾ ಪಾಸಿಟಿವ್ ಬಂದಿದೆ. ಇನ್ನೊಂದು ಆಘಾತದ ಸಂಗತಿಯೆಂದರೆ ಇಂದು 97 ಮಂದಿ ಕೊರೊನಾಗೆ ಬಲಿಯಾಗಿದ್ದು, ಇದರಲ್ಲಿ ಬೆಂಗಳೂರಿನಲ್ಲಿ 48 ಮಂದಿ ಉಸಿರು ಚೆಲ್ಲಿದ್ದಾರೆ. 12 ಜಿಲ್ಲೆಗಳಲ್ಲಿ ಭಾರಿ ಸಂಖ್ಯೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗಿರುವುದು ಆಘಾತ ಸೃಷ್ಟಿಸಿದೆ.
ಇದರೊಂದಿಗೆ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 80863ಕ್ಕೆ ಏರಿಕೆಯಾಗಿದ್ದು, ಇದರಲ್ಲಿ 49,931 ಸಕ್ರಿಯ ಪ್ರಕರಣಗಳಿವೆ. ಇಂದು 2071 ಮಂದಿ ರಾಜ್ಯದ ವಿವಿಧ ಆಸ್ಪತ್ರೆಗಳಿಂದ ಡಿಶ್ಚಾರ್ಜ್ ಆಗಿದ್ದಾರೆ. ತೀವ್ರ ಸ್ವರೂಪದ ಸಮಸ್ಯೆ ಎದುರಿಸುತ್ತಿರುವ ವಿವಿಧ ಆಸ್ಪತ್ರೆಗಳ ಐಸಿಯುಗಳಲ್ಲಿ 640 ಮಂದಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ರಾಜಧಾನಿ ಬೆಂಗಳೂರಿನಲ್ಲಿ ಇಂದು 2207 ಮಂದಿ ಕೊರೊನಾ ಪಾಸಿಟಿವ್ ಬಂದಿದ್ದು, ದಿನದಿಂದ ದಿನಕ್ಕೆ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಲೇ ಇದೆ. ಇಂದು ನಗರದಲ್ಲಿ 48 ಮಂದಿ ಬಲಿಯಾದರೆ, ರಾಯಚೂರಿನಲ್ಲಿ ಇದೇ ಮೊದಲ ಬಾರಿಗೆ ಮಹಾಮಾರಿ ಕೊರೊನಾ 17 ಜನರನ್ನು ಬಲಿಪಡೆದುಕೊಂಡಿದೆ.
ಅಚ್ಚರಿ ಎಂದರೆ ಇಂದು ಬೆಂಗಳೂರು ಸೇರಿದಂತೆ 13 ಜಿಲ್ಲೆಗಳ ಕೊರೊನಾ ಸೋಂಕಿತರ ಸಂಖ್ಯೆ 2 ಅಂಕಿ ದಾಟಿದೆ. ಬೆಂಗಳೂರು ಬಿಟ್ಟರೆ ಉಳಿದ 12 ಜಿಲ್ಲೆಗಳಲ್ಲಿ ಈ ಸಂಖ್ಯೆ ನೂರರ ಮೇಲೆಯೇ ಇದೆ. ರಾಯಚೂರಿನಲ್ಲಿ ಇದೇ ಮೊದಲ ಬಾರಿಗೆ 258 ಮಂದಿಗೆ ಕೊರೊನಾ ಬಂದಿದ್ದರೆ, ಕಲಬುರಗಿಯಲ್ಲಿ 229 ಮಂದಿಗೆ ಹೆಮ್ಮಾರಿ ಅಂಟಿಕೊಂಡಿದೆ.
ಪ್ರಮುಖ ಜಿಲ್ಲೆಗಳ ಕೊರೊನಾ ಸಂಖ್ಯೆ ಇಂತಿದೆ..
ರಾಯಚೂರು: 258
ದಕ್ಷಿಣ ಕನ್ನಡ: 218
ಬೆಳಗಾವಿ: 214
ಧಾರವಾಡ: 183
ಬಳ್ಳಾರಿ: 164
ಬೆಂಗಳೂರು ಗ್ರಾಮಾಂತರ: 161
ಉಡುಪಿ: 160
ಮೈಸೂರು: 116
ಹಾಸನ: 108
ದಾವಣಗೆರೆ: 107
ಬಾಗಲಕೋಟೆ: 106
ಬೀದರ್: 84








