ನಾಳೆ ಒಟಿಟಿ ಫ್ಲಾಟ್ ಪಾರ್ಮ್ ನಲ್ಲಿ ರಿಲೀಸ್ ಆಗ್ತಿರುವ ಡ್ಯಾನಿಶ್ ಸೇಠ್ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಫ್ರೆಂಚ್ ಬಿರಿಯಾನಿ ಚಿತ್ರದ ಅನುಭವವನ್ನು ಚಿತ್ರದ ಇನ್ನೊಬ್ಬ ಪ್ರಮುಖ ಪಾತ್ರಧಾರಿ ನಟ ರಂಗಾಯಣ ರಘು ಅವರು ಸಾಕ್ಷಾ ಟಿವಿ.ಕಾಂ ಜೊತೆಗೆ ಹಂಚಿಕೊಂಡಿದ್ದಾರೆ. ಅವರೊಂದಿಗೆ ನಾವು ನಡೆಸಿದ ಸಂಕ್ಷಿಪ್ತ ಸಂದರ್ಶನ ಇಲ್ಲಿದೆ.
ಸಾಕ್ಷಾ ಟಿವಿ: ರಂಗಾಯಣ ರಘು ಅವರ ಬಾಯಿಂದಲೇ ಫ್ರೆಂಚ್ ಬಿರಿಯಾನಿ ರೆಸಿಪಿ ಕೇಳುವುದಾದ್ರೆ..?
ರಂಗಾಯಣ ರಘು: ಇದೊಂದು ಹಾಸ್ಯಪ್ರಧಾನ ಚಿತ್ರ. ಬೆಂಗಳೂರಿಗೆ ಅನೇಕ ತರಹದವರು ಬರುತ್ತಾರೆ. ಅದ್ರಲ್ಲಿ ಫಾರಿನರ್ಸ್ ಇರಬಹುದು ಬೇರೆ ಬೇರೆ ಕಡೆಗಳಿಂದ ಬಂದವರೇ ಇರಬಹುದು. ಅವರು ಇಲ್ಲಿಗೆ ಬಂದಂತಹ ಸಂದರ್ಭದಲ್ಲಿ, ಆಗುವ ಅವಾಂತರಗಳು, ಅನುಭವಗಳು, ಅವಸ್ಥೆಗಳ ಕಾಲ್ಪನಿಕ ಚಿತ್ರಣವೇ ಫ್ರೆಂಚ್ ಬಿರಿಯಾನಿ. ಫ್ರೆಂಚ್ ಮೂಲದವರು ಇಲ್ಲಿಗೆ ಬಂದಾಗ, ಅವರ ಮುಖಾಂತರ ನಾವು ಯಾವ ರೀತಿ ಬದುಕುತ್ತಿದ್ದೇವೆ ಎಂಬುವುದನ್ನು ತೋರಿಸುವುದು ಚಿತ್ರದ ಕಥಾ ಹಂದರ. ಬೆಂಗಳೂರಿನಲ್ಲಿ ಕೆಲವರಿಗೆ 4-5 ಬಾಷೆ ಬಂದರೇ ಇನ್ನೂ ಕೆಲವರಿಗೆ ಕೇವಲ ಒಂದು ಭಾಷೆ ಮಾತ್ರ ಮಾತಾಡಲು ಬರುತ್ತೆ. ಅಂತಹ ಸಂದರ್ಭದಲ್ಲಿ ಕೇವಲ ಕನ್ನಡ ಮಾತನಾಡುವವರೊಂದಿಗೆ ಫಾರಿನರ್ ಸಂಭಾಷಣೆಯ ವೇಳೆ ಆಗುವ ಆಕಸ್ಮಿಕ ವೈರುಧ್ಯ ಸಂಗತಿಗಳನ್ನು, ಹಾಸ್ಯಘಟನೆಗಳನ್ನೇ ಚಿತ್ರದಲ್ಲಿ ತೋರಿಸಲಾಗಿದೆ.
ಸಾಕ್ಷಾ ಟಿವಿ: ಫ್ರೆಂಚ್ ಬಿರಿಯಾನಿಯಲ್ಲಿ ಪ್ರಮುಖ ಪಾತ್ರಧಾರಿಯಾದ ನಿಮ್ಮ ಪಾತ್ರದ ಬಗ್ಗೆ ಹೇಳುವುದಾದರೇ..?
ರಂಗಾಯಣ ರಘು: ನಾನು ಈ ಚಿತ್ರದಲ್ಲಿ ಪೋಲಿಸ್ ಇನ್ಸ್ ಪೆಕ್ಟರ್. ಸ್ಟೇಷನ್ ನಲ್ಲಿ ತಿಗಣೆ ಕಾಟಕ್ಕೆ ಬೇಸತ್ತು ಸ್ಟೇಷನ್ ನಿಂದ ಎಲ್ಲರನ್ನೂ ಹೊರಗೆ ಹಾಕಿ ತಿಗಣೆ ಔಷಧಿ ಹೊಡೆಸುವಾಗ ಪ್ರಂಚ್ ಮನುಷ್ಯನೊಬ್ಬ ಬಂದು ತಗಲಾಕಿ ಕೊಳ್ತಾರೆ. ಅವರು ಎಲ್ಲಿಂದ? ಹೇಗೆ? ಯಾಕೆ? ಬಂದ್ರು ಅನ್ನುವುದು ಗೊತ್ತಿರುವುದಿಲ್ಲ. ಅವರು ಮಾತಾಡುವುದು ಇಂಗ್ಲಿಷ್, ಕನ್ನಡ ಬರೋದಿಲ್ಲ. ನಮಗೆ ಇಂಗ್ಲಿಷ್ ಅರ್ಧಂಬರ್ಧ. ಹೀಗಿರುವಾಗ ನಮ್ಮ ಮತ್ತು ಅವರ ನಡುವಿನ ಸಂಭಾಷಣೆಯೂ ಹಾಸ್ಯಾಸ್ಪದವಾಗಿದ್ದು ಅದನ್ನು ರಂಜನೀಯವಾಗಿ ಚಿತ್ರದಲ್ಲಿ ತೋರಿಸಲಾಗಿದೆ.
ಸಾಕ್ಷಾ ಟಿವಿ: ಹೊಸ ನಾಯಕ ನಟ ಡ್ಯಾನಿಷ್ ಸೇಠ್, ವಿದೇಶಿ ನಟ ಸಾಲ್ ಯೂಸುಫ್ ಹಾಗೂ ಚಿತ್ರತಂಡದ ಜೊತೆಗಿನ ನಿಮ್ಮ ಅನುಭವ ಹೇಗಿತ್ತು..?
ರಂಗಾಯಣ ರಘು: ಒಳ್ಳೆ ಟೀಂ, ಡ್ಯಾನಿಶ್ ಅವರೊಂದಿಗೆ ಕೆಲಸ ಮಾಡಿದ್ದು ಖುಷಿಯಿದೆ. ಪ್ರೆಂಚ್ ವ್ಯಕ್ತಿಯ ಕಥೆಯೂ ಒಂದು ವಿಭಿನ್ನ ಅನುಭವ. ಡ್ಯಾನಿಶ್ ಜೊತೆ ಹಾಗೂ ಚಿತ್ರದ ಎಲ್ಲಾ ಬೇರೆ ಬೇರೆ ವಿಭಾಗದ ಜೊತೆ ಕೆಲಸ ಮಾಡಿದ್ದು ಹೊಸ ಅನುಭವ ಮತ್ತು ಆಹ್ಲಾದಕಾರಿ ಸಂಗತಿ. ಚಿತ್ರೀಕರಣ ನಡೆಯುತ್ತಿದ್ದ ಪ್ರತೀ ದಿನವೂ ನಾವು ಸಾಕಷ್ಟು ಎಂಜಾಯ್ ಮಾಡಿದ್ದೀವಿ. ಹೊಸ ತಲೆಮಾರಿನ ಪ್ರತಿಭಾವಂತರ ಹೊಸ ಚಿಂತನೆಯ ಜೊತೆ ಕೆಲಸ ಮಾಡುವುದೇ ಅದ್ಭುತ ಅನುಭವ.
ಸಾಕ್ಷಾ ಟಿವಿ: ಪ್ರತಿಭಾವಂತ ಸಂಗೀತ ನಿರ್ದೇಶಕ ವಾಸುಕಿ ವೈಭವ್ ಚಿತ್ರಕ್ಕೆ ಸಂಗೀತ ನೀಡಿದ್ದಾರೆ. ವಾಸುಕಿ ವೈಭವ್ ಮತ್ತು ಮ್ಯೂಸಿಕ್ ಕುರಿತಾಗಿ ಹೇಳೋದಾದ್ರೆ..?
ರಂಗಾಯಣ ರಘು: ಕನ್ನಡದ ಅದ್ಭುತ ಮ್ಯೂಸಿಕ್ ಡೈರೆಕ್ಟರ್ ವಾಸುಕಿ ವೈಭವ್. ಅವರಿಗೆ ಚಿತ್ರರಂಗದಲ್ಲಿ ಅದ್ಭುತ ಭವಿಷ್ಯವಿದೆ. ಅವರ ಮ್ಯೂಸಿಕ್ ಸಾಧಾರಣ ಮಾತಿನಂತೆಯೂ ಇರುತ್ತದೆ. ಹಾಡಿನಂತೆಯೂ ಇರುತ್ತದೆ. ಅವರ ಹಾಡುಗಳಿಂದ ನನಗೆ ನಮ್ಮ ನಾಟಕದ ದಿನಗಳು ನೆನಪಾಗುತ್ತವೆ. ಅವು ಸಾಮಾಜಿಕ ನಾಟಕಗಳಿರಬಹುದು, ಪೌರಾಣಿಕ ನಾಟಕಗಳಿರಬುದು. ಈ ಎಲ್ಲಾ ಅಂಶಗಳನ್ನು ನೆನಪಿಸಿಕೊಡುವಂತಹ ಮ್ಯೂಸಿಕ್ ಅವರದ್ದು. ಇಂತಹ ಅದ್ಭುತ ಸಂಗೀತವನ್ನು ನಿಜವಾಗಲೂ ಪ್ರೋತ್ಸಾಹಿಸಬೇಕು. ನಾನು ಇದುವರೆಗೂ ಮಾಡಿದ ಚಿತ್ರಗಳಲ್ಲಿ ಬೇರೆ ಭಾಷೆಗಳ ಪದಗಳೂ ಹೆಚ್ಚಿರುತ್ತಿದ್ದವು. ಆದ್ರೆ ಇವರ ಸಂಗೀತದಲ್ಲಿ ಕನ್ನಡ ಪದ ಬಳಕೆ ಹೆಚ್ಚಿದ್ದು, ನನಗೆ ಇಂತಹ ಸಂಗೀತ ತುಂಬ ಇಷ್ಟವಾಗುತ್ತೆ. ಅಂದರೆ ನಮ್ಮತನ, ನಮ್ಮ ಕನ್ನಡವನ್ನು ಉಳಿಸಿಕೊಂಡು ಹೆಚ್ಚಾಗಿ ಬಳಸಬೇಕು. ಹೀಗಾಗಿ ವಾಸುಕಿ ಸಂಗೀತ ನನಗೆ ಬಹಳ ಖುಷಿ ನೀಡುವ ವಿಚಾರ. ಅವರ ಹಾಡುಗಳಲ್ಲಿ ಸಂಭಾಷಣೆ ಇರುತ್ತದೆ, ಸುಗಮ ಸಂಗೀತ ಇರುತ್ತದೆ, ಕಥೆಯಂತೆ ಭಾಸವಾಗುತ್ತದೆ, ಜನಪದ ಶೈಲಿಯನ್ನೂ ನೆನಪಿಸುತ್ತೆ. ವಾಸುಕಿ ವೈಭವ್ ಭವಿಷ್ಯದಲ್ಲಿ ನಮ್ಮ ಚಿತ್ರರಂಗದ ಆಸ್ತಿಯಾಗಬಲ್ಲ ಪ್ರತಿಭಾವಂತ.
ಸಾಕ್ಷ್ಯಟಿವಿ: ಪುನಿತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ಆಶ್ರಯದಲ್ಲಿ ಈ ಚಿತ್ರ ನಿರ್ಮಾಣವಾಗಿದೆ, ಈ ಬಗ್ಗೆ ಹೇಳುವುದಾದರೇ!
ರಂಗಾಯಣ ರಘು: ಪುನಿತ್ ಒಬ್ಬ ನಟರಷ್ಟೇ ಅಲ್ಲ ಹೊಸ ಪ್ರತಿಭೆಗಳನ್ನು ಗುರುತಿಸಿ ಬೆಳೆಸಬಲ್ಲ ಅದ್ಭುತ ವ್ಯಕ್ತಿ. ಅವರ ಪ್ರೊಡಕ್ಷನ್ ನಲ್ಲಿ ನಿರ್ಮಾಣವಾಗುತ್ತಿರುವ ನಾಲ್ಕನೇ ಚಿತ್ರ. ಚಿತ್ರರಂಗದ ಸಿದ್ಧ ಸೂತ್ರಗಳನ್ನೆಲ್ಲಾ ಬದಿಗಿಟ್ಟು ಕೇವಲ ಕಥೆ ಮತ್ತು ಸೃಜನಶೀಲತೆಗೆ ಮೌಲ್ಯ ನೀಡುವ ಉನ್ನತ ಚಿಂತನೆ ಅವರಲ್ಲಿದೆ. ಅವರಿಂದಾಗಿಯೇ ಕನ್ನಡ ಚಿತ್ರರಂಗಕ್ಕೆ ಹೊಸ ಹೊಸ ಪ್ರತಿಭೆಗಳು ಬರುತ್ತಿವೆ. ಇದು ಭವಿಷ್ಯದಲ್ಲಿ ನಮ್ಮ ಚಿತ್ರರಂಗವನ್ನು ಮತ್ತಷ್ಟು ಮೇಲ್ದರ್ಜೆಗೆ ಏರಿಸುತ್ತದೆ. ಪುನಿತ್ ರಾಜ್ ಕುಮಾರ್ ಜೊತೆ ಅನೇಕ ಸಿನಿಮಾಗಳನ್ನು ನಟಿಸಿದ್ದರಿಂದ ಅವರನ್ನು ಹತ್ತಿರದಿಂದ ನೋಡಿದ್ದೇನೆ. ಯಾವುದೇ ಸ್ಟಾರ್ ಡಂ ಹಮ್ಮಿಲ್ಲದ ಅತ್ಯಂತ ಸರಳ ಸಜ್ಜನ ಅಪ್ಪು ಅನ್ನುವುದೇ ನಮಗೆ ಅಪಾರ ಅಭಿಮಾನ ನೀಡುವ ಸಂಗತಿ.
ಸಾಕ್ಷಾ ಟಿವಿ: ಈ ಕೋವಿಡ್ ಸಂಕಷ್ಟ ಕಾಲದಲ್ಲಿ ಒಟಿಟಿ ಫ್ಲಾಟ್ ಪಾರ್ಮ್ ನಲ್ಲಿ ಚಿತ್ರ ಬಿಡುಗಡೆಯಾಗುತ್ತಿರುವ ಬಗ್ಗೆ ನಿಮ್ಮ ಅಭಿಪ್ರಾಯ..?
ರಂಗಾಯಣ ರಘು: ಈಗ ಸಂದರ್ಭ ಬಹಳ ಬಿಗಡಾಯಿಸಿದೆ. ಈ ಕೊರೊನಾ ಮಹಾಮಾರಿಯಿಂದ ಬದುಕಿದ್ರು ನೆಮ್ಮದಿ ಇಲ್ಲ. ಸತ್ರೂ ನೆಮ್ಮದಿ ಇಲ್ಲ ಅನ್ನುವಂತಹ ಪರಿಸ್ಥಿತಿ ಇದೆ. ಇಂತಹ ಸ್ಥಿತಿಯಲ್ಲಿದ್ದಾಗ ಒಟಿಟಿಯಲ್ಲಿ ಚಿತ್ರ ರಿಲೀಸ್ ಆಗುವುದು ಒಳ್ಳೆಯ ಬೆಳವಣಿಗೆ. ಆದ್ರೆ ಸಿನೆಮಾ ಇರಬಹುದು, ನಾಟಕ ಇರಬಹುದು ಇವು ಜನ ಸಮೂಹದೊಂದಿಗೆ ನೋಡಿದಾಗಲೇ ಹೆಚ್ಚು ಮನರಂಜನೆ ನೀಡುವುದು. ಆದ್ರೂ ಈಗಲೂ ಮನೆ ಮಂದಿಯವರೊಂದಿಗೆ ಮನೆಯಲ್ಲಿ ಆನ್ ಲೈನ್ ಮೂಲಕ ಚಿತ್ರ ನೋಡಬಹುದು. ಅಲ್ಲದೇ ಕೊರೊನಾ ಯಾವಾಗ ಮುಗಿಯುತ್ತೋ ಗೊತ್ತಿಲ್ಲ. ಈ ಸಂಕಷ್ಟ ಕಾಲ ಕಳೆಯುವುದಕ್ಕೆ ಇನ್ನೂ ತಡ ಆಗಬಹುದು. ಹೀಗಿರುವಾಗ ವೀಕ್ಷಕರು ಮನೆಯಲ್ಲಿದ್ದಾಗ ಒಟಿಟಿಯಲ್ಲಿ ಚಿತ್ರ ಬಿಡುಗಡೆಯಾಗುವುದು ಉತ್ತಮ.
ಪುನೀತ್ ರಾಜ್ ಕುಮಾರ್ ಅವರ ಪಿ ಆರ್ ಕೆ ಪ್ರೊಡಕ್ಷನ್ ನಲ್ಲಿ ಮೂಡಿಬರುತ್ತಿರುವ 4ನೇ ಚಿತ್ರ ಫ್ರೆಂಚ್ ಬಿರಿಯಾನಿ ಹಾಸ್ಯ ಪ್ರದಾನ ಚಿತ್ರವಾಗಿದ್ದು, ಹಂಬಲ್ ಪೊಲಿಟಿಶಿಯನ್ ನೊಗರಾಜ್ ಖ್ಯಾತಿಯ ಡ್ಯಾನಿಶ್ ಸೇಠ್, ಸಾಲ್ ಯೂಸೂಫ್, ರಂಗಾಯಣ ರಘು ಹಾಗೂ ದಿಶಾ ಮದನ್ ಮುಂತಾದವರ ನಟನೆಯ ಚಿತ್ರ ಇದಾಗಿದೆ. ನಾಳೆ ಡಿಜಿಟಲ್ ಮೀಡಿಯಾದಲ್ಲಿ ಚಿತ್ರ ತೆರೆಕಾಣಲಿದೆ. ಈ ಚಿತ್ರದಲ್ಲಿ ಹೊಸ ಪ್ರತಿಭೆಗಳು ಕಮಾಲ್ ಮಾಡಿದ್ದು, ಪ್ರೇಕ್ಷರಿಂದ ಉತ್ತಮ ರೆಸ್ಪಾನ್ಸ್ ಸಿಗಲಿದೆ ಅಂತಾರೆ ರಂಗಾಯಣ ರಘು. ನಿರ್ದೇಶಕ ಪನ್ನಗ ಭರಣ ಈ ಚಿತ್ರದ ಮೂಲಕ ಹೊಸ ಮೈಲಿಗಲ್ಲು ಸಾಧಿಸಲಿದ್ದಾರೆ ಅನ್ನುವ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.