ಕೂದಲಿಗಷ್ಟೇ ಅಲ್ಲ, ಚರ್ಮದ ಕಾಂತಿ ಹೆಚ್ಚಿಸಲು ಮತ್ತು ಕೊಬ್ಬು ಕರಗಿಸಲೂ ಸಹಕಾರಿ ಸೀಗೆ
ನಿಮಗೆಲ್ಲಾ ಎಣ್ಣೆಯ ಪರಮ ಶತ್ರು ಸೀಗೆಯು ಬಗ್ಗೆ ಗೊತ್ತೇ ಇರುತ್ತದೆ. ತಲೆ ಕೂದಲಿಗೆ ಎಣ್ಣೆ ಹಚ್ಚಿಕೊಂಡು ಸೀಗೇಪುಡಿಯನ್ನು ಎರೆದು ಸ್ನಾನ ಮಾಡಿದರೆ ಜಿಡ್ಡಿನ ಲವಲೇಶವೂ ಇಲ್ಲದಂತೆ ತೊಳೆಯುವ ಅತ್ಯಂತ ಪ್ರಬಲ ಮಾರ್ಜಕ ಸೀಗೆ. ಇದು ಲೆಗ್ಯುಮಿನೋಸೀ ಕುಟುಂಬದ ವಿಮೋಸೀ ಎನ್ನುವ ಉಪಕುಟುಂಬಕ್ಕೆ ಸೇರುವ ಅಕೇಸಿಯ ಕಾನ್ಸಿನ್ನ ಎಂಬ ಪ್ರಭೇದದ ಮುಳ್ಳಿನ ಮರಬಳ್ಳಿ. ಸೀಗೆಗೆ ಇಂಗ್ಲೀಷಿನಲ್ಲಿ ಹರ್ಬಾರಿಯಂ ಎಂದು ಕರೆದರೆ, ಹಿಂದಿಯಲ್ಲಿ ಶೀಕಾಕಾಯ್ ಎನ್ನಲಾಗುತ್ತದೆ, ಶೀಕಾ ಎಂದರೆ ಕೂದಲು ಮತ್ತು ಕಾಯ್ ಅಂದರೆ ಹಣ್ಣು. ನಮ್ಮ ಅತ್ಯಂತ ಪ್ರಾಚೀನ ಮಾರ್ಜಕವಾದ ಸೀಗೆ ನಮ್ಮ ಗ್ರಾಮೀಣ ಭಾಗದಲ್ಲಿ ಸಾಮಾನ್ಯವಾಗಿ ಬೇಲಿಗಳಲ್ಲಿ ಬಳ್ಳಿಗಳನ್ನು ಹಬ್ಬಿಸಿ ಬೆಳೆಯುತ್ತಾರೆ. ಅಕೇಸಿಯ ಪೆನ್ನೇಟ ಎನ್ನುವ ಹೆಸರಿನ ಸೀಗೆಯ ಮತ್ತೊಂದು ಜಾತಿಯಿದೆ ಇದು ಕಾಡು ಸೀಗೆ.
ಸೀಗೆ ನಮ್ಮ ಆಯುರ್ವೇದಿಕೆ ಔಷದ ಪದ್ಧತಿಯಲ್ಲೂ ಸಾಕಷ್ಟು ಮಹತ್ವವಿದೆ. ಸೀಗೆಯ ಎಲೆಗಳು ಮತ್ತು ತೊಗಟೆಯನ್ನು ಒಣಗಿಸಿ ಪುಡಿ ಮಾಡಿ ನೀರಿನ ಮಿಶ್ರಣದಲ್ಲಿ ಹದವಾಗಿ ಬೆರೆಸಿ ಗಟ್ಟಿಯಾಗಿ ಹಸಿ ಹಿಟ್ಟಿನಂತಾಗಿಸಿ ನಿಯಮಿತವಾಗಿ ತಲೆಗೆ ಹಚ್ಚಿ ಸ್ನಾನ ಮಾಡುವುದರಿಂದ ಕೇಶದ ಕಾಂತಿ ಹೆಚ್ಚುತ್ತದೆ, ಕೂದಲು ಉದುರುವ, ತಲೆ ಹೊಟ್ಟು, ಹೇನಿನ ಸಮಸ್ಯೆ ದೂರವಾಗುತ್ತದೆ. ಸೀಗೆಯ ಸೊಪ್ಪಿನಲ್ಲಿ ಅದ್ಭುತ ಔಷದೀಯ ಗುಣಗಳಿವೆ. ಇದರ ಸೊಪ್ಪಿನಲ್ಲಿ ಹಲವು ಖಾದ್ಯಗಳನ್ನು ಮಾಡುವ ಪದ್ಧತಿ ನಮ್ಮ ದಕ್ಷಿಣ ಭಾರತದ ಗ್ರಾಮೀಣ ಪ್ರದೇಶಗಳಲ್ಲಿ ಈಗಲೂ ಇದೆ.
ಆಯುರ್ವೇದಿಕ್ ವೈದ್ಯರ ಪ್ರಕಾರ ಸೀಗೆಸೊಪ್ಪು ಅತ್ಯುತ್ತಮವಾದ ಡಯಟ್ ಆಹಾರ. ದೇಹದ ತೂಕ ಇಳಿಸಲು, ಕೊಬ್ಬ ಕರಗಿಸಲು, ಹಾಗೂ ಸುಸ್ತಾದಾಗ ಹೆಚ್ಚಿನ ಶಕ್ತಿ ನೀಡಲು ಇದರ ಸೊಪ್ಪಿನ ಪದಾರ್ಥಗಳು ಉಪಯೋಗಕಾರಿ. ಸೀಗೆ ಸೊಪ್ಪಿನ ಸಾರನ್ನು ವಾರದಲ್ಲಿ ಒಮ್ಮೆಯಾದರೂ ಮಾಡಿ ಬಳಸಿದರೆ ಸ್ಥೂಲಕಾಯ ಸಮಸ್ಯೆಯೇ ಎದುರಾಗುವುದಿಲ್ಲ. ನಮ್ಮ ಗ್ರಾಮೀಣ ಭಾಗಗಳಲ್ಲಿ ಬಾಣಂತಿಯರಿಗೆ ಸೀಗೆಸೊಪ್ಪಿನ ಸಾರು ಉಣಬಡಿಸಲಾಗುತ್ತದೆ. ನಿಯಮಿತವಾಗಿ ಸೀಗೆ ಸೊಪ್ಪಿನ ಸಾರು ಸೇವಿಸುವುದರಿಂದ ನಿದ್ರಾಹೀನತೆ ದೂರವಾಗುತ್ತದೆ. ಸೀಗೆಯನ್ನು ಪುಡಿ ಮಾಡಿ ತಲೆ ಕೂದಲಿನ ಜೊತೆ ದೇಹದ ಭಾಗಗಳಿಗೂ ಲೇಪಿಸಿಕೊಂಡು ಸ್ನಾನ ಮಾಡುವುದರಿಂದ ಚರ್ಮದ ಕಾಂತಿ ಹೆಚ್ಚುತ್ತದೆ.
ಮಾಹಿತಿ ಮತ್ತು ಲೇಖನ: ಅಂಬಿಕಾ ಸೀತೂರು