ಎಕೆ -47ನಿಂದ ತಾಲಿಬಾನ್ ಉಗ್ರರ ಹತ್ಯೆ ಮಾಡಿ ಪೋಷಕರ ಕೊಲೆಗೆ ಪ್ರತೀಕಾರ ತೀರಿಸಿದ ಅಫಘಾನ್ ಬಾಲಕಿ
ಅಫ್ಘಾನ್, ಜುಲೈ 24: ತಾಲಿಬಾನ್ ಉಗ್ರರ ವಿರುದ್ಧ ಹೋರಾಡಿದ ಹದಿಹರೆಯದ ಹುಡುಗಿ ಅಫ್ಘಾನಿಸ್ತಾನದಲ್ಲಿ ಹೀರೋಯಿನ್ ಆಗಿದ್ದಾಳೆ. ಎಕೆ -47 ನಿಂದ ಇಬ್ಬರು ಉಗ್ರರನ್ನು ಆಕೆ ಕೊಂದಿದ್ದಾಳೆ.
ಸುಮಾರು 15 ವರ್ಷ ವಯಸ್ಸಿನ ಖಮರ್ ಗುಲ್ ನನ್ನು ಅಧ್ಯಕ್ಷರ ಭವನಕ್ಕೆ ಆಹ್ವಾನಿಸಲಾಗಿದ್ದು, ಈಗಾಗಲೇ ಅಧ್ಯಕ್ಷ ಅಹ್ಸ್ರಾಫ್ ಘನಿ ಅವಳ ಧೈರ್ಯಕ್ಕಾಗಿ ಶ್ಲಾಘಿಸಿದ್ದಾರೆ.
ಅಫ್ಘಾನಿಸ್ತಾನದ ಪಶ್ಚಿಮ ಘೋರ್ ಪ್ರಾಂತ್ಯದ ದೂರವಾಣಿ ಮೂಲಕ ಮಾಧ್ಯಮಗಳ ಜೊತೆ ಮಾತನಾಡಿದ ಗುಲ್, ಕಳೆದ ವಾರ ರಾತ್ರಿ ಭಯೋತ್ಪಾದಕರು ಗೆರಿವೆಹ್ ಹಳ್ಳಿಯಲ್ಲಿರುವ ತನ್ನ ಮನೆಯ ಒಳಗೆ ಬಲವಂತವಾಗಿ ಬಂದಿರುವುದಾಗಿ ವಿವರಿಸಿದ್ದಾಳೆ.
ಮುಂಜಾನೆ 1 ಗಂಟೆ ಸುಮಾರಿಗೆ ತಾಲಿಬಾನ್ ಉಗ್ರರು ನಮ್ಮ ಮನೆ ಬಾಗಿಲು ಬಡಿದರು. ನನ್ನ ತಾಯಿ ಬಾಗಿಲು ತೆರೆಯಲು ನಿರಾಕರಿಸಿದಾಗ ಅವರು ನಮ್ಮ ಬಾಗಿಲು ಮುರಿದು ನನ್ನ ಹೆತ್ತವರನ್ನು ಹಜಾರಕ್ಕೆ ಎಳೆದುಕೊಂಡು ಇಬ್ಬರನ್ನೂ ಕೊಂದರು ಎಂದು ಅವಳು ತಿಳಿಸಿದ್ದಾಳೆ.
ತಂದೆಯಿಂದ ಈ ಮೊದಲೇ ರೈಫಲ್ ನಲ್ಲಿ ಗುಂಡು ಹಾರಿಸುವುದನ್ನು ಕಲಿಸಿದ್ದ ಗುಲ್ ತನ್ನ ತಂದೆಯ ರೈಫಲ್ ಅನ್ನು ಹಿಡಿದು ಉಗ್ರರಿಗೆ ಗುಂಡು ಹಾರಿಸಿದ್ದಾಳೆ. ಗುಲ್ ಮತ್ತು ಜಿಲ್ಲಾ ರಾಜ್ಯಪಾಲರ ಪ್ರಕಾರ ಇಬ್ಬರು ತಾಲಿಬಾನ್ ದಂಗೆಕೋರರು ಗುಂಡಿನ ದಾಳಿಯಲ್ಲಿ ಸಾವನ್ನಪ್ಪಿದ್ದು, ಮತ್ತೊಬ್ಬ ಗಾಯಗೊಂಡಿದ್ದಾನೆ. ಆಕೆ ಉಗ್ರರನ್ನು ಕೊಲ್ಲುತ್ತಿದ್ದಂತೆ ಇನ್ನಷ್ಟು ಉಗ್ರರು ಆಕೆಯ ಮನೆಯ ಮೇಲೆ ದಾಳಿ ಮಾಡಿದ್ದು, ಅಷ್ಟರಲ್ಲಿ ಗ್ರಾಮಸ್ಥರು, ಪೊಲೀಸ್ ಮತ್ತು ಭದ್ರತಾ ಸಿಬ್ಬಂದಿಗಳು ಬಾಲಕಿಯನ್ನು ರಕ್ಷಿಸಿದ್ದಾರೆ.

ನನ್ನ ಹೆತ್ತವರ ಕೊಲೆಗಾರರನ್ನು ನಾನು ಕೊಂದಿದ್ದೇನೆ ಎಂದು ನನಗೆ ಹೆಮ್ಮೆ ಇದೆ ಎಂದು ಗುಲ್ ಸಂದರ್ಶನದಲ್ಲಿ ತಿಳಿಸಿದ್ದು, ಅವರು ನನ್ನ ಹೆತ್ತವರನ್ನು ಕೊಂದ ಕಾರಣ ನಾನು ಅವರನ್ನು ಕೊಂದೆ, ಮತ್ತು ಅವರು ನನಗಾಗಿ ಮತ್ತು ನನ್ನ ಚಿಕ್ಕ ಸಹೋದರನಿಗಾಗಿ ಬರುತ್ತಾರೆ ಎಂದು ನನಗೆ ತಿಳಿದಿತ್ತು ಎಂದು ಹೇಳಿದ್ದಾಳೆ.
ನಾನು ಇಬ್ಬರು ತಾಲಿಬಾನರನ್ನು ಕೊಂದ ನಂತರ, ನನ್ನ ಹೆತ್ತವರ ಬಳಿ ಹೋಗಿ ಮಾತನಾಡಿಸಲು ನೋಡಿದೆ. ಆದರೆ ಅವರು ಉಸಿರಾಡುತ್ತಿರಲಿಲ್ಲ ಎಂದು ಅವಳು ತಿಳಿಸಿದ್ದು ನಾನು ಅವರೊಂದಿಗೆ ಕೊನೆಯ ಬಾರಿ ಮಾತನಾಡಲು ಸಾಧ್ಯವಾಗಲಿಲ್ಲ ಎಂದು ನನಗೆ ದುಃಖವಾಗಿದೆ ಎಂದು ಹೇಳಿದ್ದಾಳೆ.
ಸ್ಥಳೀಯ ತೈವಾರಾ ಜಿಲ್ಲೆಯ ಮುಖ್ಯಸ್ಥ ಮುಹಮ್ಮದ್ ರಫೀಕ್ ಆಲಂ ಅವರು ಈ ಬಗ್ಗೆ ಪ್ರತಿಕ್ರಿಯಿಸಿದ್ದು ಗುಲ್ ನ ತಂದೆ ಅರ್ಬಾಬ್ ಷಾ ಗುಲ್ ಅವರು ಸರ್ಕಾರಿ ಬೆಂಬಲಿಗರು ಮತ್ತು ಹಳ್ಳಿಯ ಗ್ರಾಮ ಪರಿಷತ್ತಿನ ಮುಖ್ಯಸ್ಥರಾಗಿದ್ದರು . ಈ ಕಾರಣಕ್ಕಾಗಿ ಅವರನ್ನು ದಂಗೆಕೋರರು ಗುರಿಯಾಗಿಸಿಕೊಂಡಿದ್ದರು ಎಂದು ಹೇಳಿದ್ದಾರೆ.
ಈ ಗ್ರಾಮವು ಜಿಲ್ಲಾ ಕೇಂದ್ರದಿಂದ 25 ಮೈಲಿ ದೂರದಲ್ಲಿದೆ ಮತ್ತು ಸರ್ಕಾರದ ನಿಯಂತ್ರಣದಲ್ಲಿದೆ. ನಾವು ಬೆಳಿಗ್ಗೆ ಗ್ರಾಮಕ್ಕೆ ಆಗಮಿಸಿ ಕಮರ್ ಗುಲ್ ಅವರ ಹೆತ್ತವರನ್ನು ಸಮಾಧಿ ಮಾಡಿದ್ದೇವೆ ಎಂದು ಆಲಂ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾ ಬಳಕೆದಾರರು ಗುಲ್ ಅವರನ್ನು ಶ್ಲಾಘಿಸಿದ್ದಾರೆ ಮತ್ತು ಕೆಲವರು ಅವರ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.
ನನ್ನ ಜೀವನ ಮತ್ತು ನನ್ನ ಕುಟುಂಬದ ಜೀವನ ಅಪಾಯದಲ್ಲಿದ್ದು ಸರ್ಕಾರವು ನಮ್ಮನ್ನು ರಕ್ಷಿಸಬೇಕೆಂದು ನಾನು ಬಯಸುತ್ತೇನೆ ಎಂದು ಗುಲ್ ಹೇಳಿದ್ದಾಳೆ.
ಗುಲ್ ಅವರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ ಎಂದು ಪ್ರಾಂತೀಯ ಗವರ್ನರ್ ನೂರ್ ಮುಹಮ್ಮದ್ ಕೊಹ್ನಾರ್ಡ್ ಮಾಧ್ಯಮಗಳಿಗೆ ತಿಳಿಸಿದ್ದು, ಅಧ್ಯಕ್ಷ ಘಾನಿಯನ್ನು ಭೇಟಿ ಮಾಡಲು ಗುಲ್ ಶೀಘ್ರದಲ್ಲೇ ಕಾಬೂಲ್‌ಗೆ ತೆರಳಲಿದ್ದಾಳೆ ಎಂದು ಹೇಳಿದರು.








