ಬೆಂಗಳೂರು : ಕೋವಿಡ್ ಸಾಮಗ್ರಿ ಖರೀದಿಯಲ್ಲಿ ರಾಜ್ಯ ಸರ್ಕಾರ 2 ಸಾವಿರ ಕೋಟಿಗೂ ಅಧಿಕ ರೂಪಾಯಿಗಳ ಅವ್ಯವಹಾರ ನಡೆಸಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಅವರು ಆರೋಪ ಮಾಡಿದ್ದಾರೆ. ಇದು ರಾಜ್ಯದಲ್ಲಿ ಭಾರಿ ಚರ್ಚೆ ಆಗುತ್ತಿದ್ದು, ಈ ಬಗ್ಗೆ ನಿನ್ನೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಆರ್.ಅಶೋಕ್, 2019ರಲ್ಲಿ ಚಂದ್ರಲೋಕದಿಂದ ವೆಂಟಿಲೇಟರ್ ಬಂದಿತ್ತಾ ಎಂದು ತಿರುಗೇಟು ನೀಡಿದ್ದರು.
ಈ ಸಂಬಂಧ ಸಾಮ್ರಾಟ್ ಹೇಳಿಕೆಗೆ ಬಗ್ಗೆ ಟ್ವಿಟ್ಟರ್ ನಲ್ಲಿ ಟಗರು ಡಿಚ್ಚಿ ಕೊಟ್ಟಿದ್ದು, “2019ರ ವೆಂಟಿಲೇಟರ್ ಖರೀದಿಯಲ್ಲಿಯೂ ಅಕ್ರಮವಾಗಿದೆ, ಅದೇನು ಚಂದ್ರಲೋಕದಿಂದ ಬಂದಿತ್ತಾ..? ಎಂದು ಕೇಳಿದ್ದಿರಲ್ಲಾ ಅಶೋಕ್ ಅವರೇ, ಆಗ ಅಕ್ರಮವಾಗಿದ್ದರೆ ವಿರೋಧ ಪಕ್ಷದಲ್ಲಿದ್ದ ನೀವ್ಯಾಕೆ ಆಗಲೇ ಪ್ರಶ್ನಿಸಿರಲಿಲ್ಲ. ಆ ಕಾಲದಲ್ಲಿ ನೀವು ಮಂಗಳ ಗ್ರಹದಲ್ಲಿ ಇದ್ರಾ” ಎಂದು ಪ್ರಶ್ನೆ ಹಾಕಿದ್ದಾರೆ.
“ಕೊರೊನಾ ಉಪಕರಣಗಳ ಖರೀದಿಯಲ್ಲಿ ಅಕ್ರಮ ನಡೆದಿಲ್ಲ ಎನ್ನುವ ವಿಶ್ವಾಸ ನಿಮಗಿದ್ದರೆ ಅಂಜಿಕೆ ಯಾಕೆ? ಆರೋಪಗಳ ತನಿಖೆಯನ್ನು ಹೈಕೋರ್ಟ್ ನ ಹಾಲಿ ನ್ಯಾಯಾಧೀಶರಿಂದ ಮಾಡಿಸಿ. ನಮ್ಮ ದಾಖಲೆಗಳನ್ನು ಅಲ್ಲಿಯೇ ನೀಡುತ್ತೇವೆ” ಎಂದು ಬರೆದುಕೊಂಡಿದ್ದಾರೆ.








