ಬೆಂಗಳೂರು ; ರಾಜ್ಯ ಸರ್ಕಾರ ವಿಧಾನ ಪರಿಷತ್ ಗೆ ವಿವಿಧ ಕ್ಷೇತ್ರಗಳಿಂದ ಆರು ಜನರನ್ನು ನಾಮ ನಿರ್ದೇಶನ ಮಾಡಿದೆ. ಈ ಪೈಕಿ ಸಾಹಿತ್ಯ ಕ್ಷೇತ್ರದಿಂದ ಹೆಚ್.ವಿಶ್ವನಾಥ್ ಹಾಗೂ ಸಿನಿಮಾ ಕ್ಷೇತ್ರದಿಂದ ಸಿ.ಪಿ ಯೋಗೇಶ್ವರ್ ಅವರನ್ನು ನಾಮ ನಿರ್ದೇಶನ ಮಾಡಿದೆ. ಆದ್ರೆ ಈ ಇಬ್ಬರ ನಾಮ ನಿರ್ದೇಶನ ಬಗ್ಗೆ ಸಾರ್ವಜನಿಕ ವಲಯದಲ್ಲಿ ಸಾಕಷ್ಟು ಟೀಕೆಗಳು ಕೇಳಿಬರುತ್ತಿದೆ. ಅಲ್ಲದೆ ವಿಶ್ವನಾಥ್ ಸಾಹಿತಿ ಹೇಗಾದರು ಎಂದು ಸಾ.ರಾ ಮಹೇಶ್ ಅವರು ಪ್ರಶ್ನೆ ಎತ್ತಿದ್ದರು. ಇದೀಗ ಈ ಟೀಕೆಗಳಿಗೆ ವಿಶ್ವನಾಥ್ ಪ್ರತಿಕ್ರಿಯೆ ನೀಡಿ, ಪರಿಷತ್ ಗೆ ನನ್ನ ನಾಮ ನಿರ್ದೇಶನ ಕಾನೂನು ಬದ್ಧ ಎಂದು ಹೇಳಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ನಾನು ವಕೀಲನಾಗಿ ಕೆಲಸ ಮಾಡಿದ್ದೇನೆ. ತೀರ್ಪು ಓದದೆ ಕೆಲವು ಕಾನೂನು ತಜ್ಞರು ಮಾತನಾಡಿದ್ದಾರೆ. ನನ್ನ ನಾಮನಿರ್ದೇಶನ ಕಾನೂನು ಬದ್ಧವಾಗಿದೆ. ಸಾರಾ ಮಹೇಶ್ ರಾಜ್ಯಪಾಲರಿಗೆ ಮಾತ್ರವಲ್ಲ, ಯಾರಿಗೆ ಬೇಕಿದ್ದರೂ ಪತ್ರ ಬರೆಯಲಿ. ಇದಕ್ಕೂ ನನಗೂ ಸಂಬಂಧ ಇಲ್ಲ. ಸರಕಾರ ಇದನ್ನು ನೋಡಿಕೊಳ್ಳುತ್ತದೆ. ಸಾ.ರಾ. ಮಹೇಶ್ ನಂಥ ತಿಪ್ಪೆ ಗುಂಡಿಗೆ ಕಲ್ಲು ಎಸೆದು ನನ್ನ ಬಿಳಿ ಬಟ್ಟೆಯನ್ನು ಕೊಳೆ ಮಾಡಿಕೊಳ್ಳುವುದಿಲ್ಲ ಎಂದು ಹೇಳಿದ್ದಾರೆ.
ಇನ್ನು ಎಸ್.ಎಲ್. ಬೈರಪ್ಪ ದೊಡ್ಡ ಸಾಹಿತಿಯೇ ಅವರಿಗೆ ಸರಸ್ವತಿ ಸಮ್ಮಾನ್ ಸಿಕ್ಕಿದೆ. ಸಾರಸ್ವತ ಲೋಕ ತುಂಬಿದ್ದಾರೆ. ಅಂದಹಾಗೆ, ನಾನೂ ಸಹ ಸಾಹಿತಿಯೇ. ರಾಜಕಾರಣಕ್ಕೆ ಸಂಬಂಧಿಸಿದಂತೆ 8 ಪುಸ್ತಕಗಳನ್ನು ಬರೆದಿದ್ದೇನೆ. ರಾಜತಾಂತ್ರಿಕ ವಿಷಯಗಳನ್ನು ಒಳಗೊಂಡಂತೆ ರಾಜಕಾರಣದ ಬಗ್ಗೆ ಸಾಕಷ್ಟು ಬರೆದಿದ್ದೇನೆ. ಹೀಗಾಗಿ ಸಾಹಿತ್ಯ ಕೋಟ ಅಡಿ ನನಗೆ ಈ ಸ್ಥಾನ ಸಿಕ್ಕಿದೆ. ಏನೂ ತಿಳಿಯದೆ ನನ್ನನ್ನು ಆಯ್ಕೆ ಮಾಡೋಕ್ಕೆ ಎಜಿ ದಡ್ಡರೇ? ಸರಕಾರಕ್ಕೆ ತಿಳಿಯುವುದಿಲ್ಲವೇ? ಎಂದು ತಮ್ಮ ಆಯ್ಕೆಯನ್ನು ಹೆಚ್. ವಿಶ್ವನಾಥ್ ಸಮರ್ಥನೆ ಮಾಡಿಕೊಂಡಿದ್ದಾರೆ.








