ಪಾಕಿಸ್ತಾನ – ‘ಧರ್ಮನಿಂದೆಯ’ ವಿಷಯಕ್ಕಾಗಿ 100 ಕ್ಕೂ ಹೆಚ್ಚು ಪಠ್ಯಪುಸ್ತಕ ನಿಷೇಧ
ಲಾಹೋರ್, ಜುಲೈ 25: ಪಾಕಿಸ್ತಾನದ ಪಂಜಾಬ್ ನ ಪಠ್ಯಕ್ರಮ ಮತ್ತು ಪಠ್ಯಪುಸ್ತಕ ಮಂಡಳಿಯು ಪಾಕ್ ಸ್ಥಾಪಕ ಮೊಹಮ್ಮದ್ ಆಲಿ ಜಿನ್ನಾ ಕುರಿತು ಅಸ್ಪಷ್ಟ ಮಾಹಿತಿ ಹೊಂದಿದೆ ಎಂಬ ಕಾರಣಕ್ಕೆ ಖಾಸಗಿ ಶಾಲೆಗಳ ಸುಮಾರು ನೂರಕ್ಕೂ ಹೆಚ್ಚು ಪಠ್ಯ ಪುಸ್ತಕಗಳನ್ನು ನಿಷೇಧಿಸಿದೆ.
ಪಂಜಾಬ್ ಪಠ್ಯಪುಸ್ತಕ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ರಾಯ್ ಮಂಜೂರ್ ಹುಸೇನ್ ನಾಸಿರ್ ಲಾಹೋರ್‌ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ನಡೆಸಿ ಮಾತನಾಡಿದ್ದು, ಈ ಪುಸ್ತಕಗಳಲ್ಲಿ ಪಾಕಿಸ್ತಾನ ಮತ್ತು ಅದರ ಸೃಷ್ಟಿಯ ಬಗ್ಗೆ ಸತ್ಯವನ್ನು ತಿರುಚಲಾಗಿದೆ, ಖ್ವಾಯಿದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಮತ್ತು ರಾಷ್ಟ್ರಕವಿ ಅಲ್ಲಮಾ ಮುಹಮ್ಮದ್ ಇಕ್ಬಾಲ್ ಅವರ ಬಗ್ಗೆ ತಪ್ಪಾಗಿ ಪ್ರಕಟಿಸಲಾಗಿದ್ದು, ನಕಾರಾತ್ಮಕವಾಗಿ ಬಿಂಬಿಸಲಾಗಿದೆ. ಅಷ್ಟೇ ಅಲ್ಲ ಕೆಲವು ಸಂದರ್ಭಗಳಲ್ಲಿ ವಿಷಯಗಳ ವಿವರಣೆಗೆ ಹಂದಿಗಳ ಚಿತ್ರಗಳನ್ನು ಬಳಸಿ ಈ ಮೂಲಕ ಧರ್ಮನಿಂದನೆ ಮಾಡಲಾಗಿದೆ ಎಂದಿದ್ದಾರೆ.

ನಿಷೇಧಿತ ಪಠ್ಯ ಪುಸ್ತಕಗಳಲ್ಲಿ ಹೆಚ್ಚಿನವು ಆಮದು ಮಾಡಿಕೊಂಡವು ಅಥವಾ ವಿದೇಶಿ ಪ್ರಕಾಶಕರಿಂದ ಸ್ಥಳೀಯವಾಗಿ ಮುದ್ರಿಸಲ್ಪಟ್ಟವು.
ಕೆಲವು ಪಠ್ಯ ಪುಸ್ತಕಗಳಲ್ಲಿ ಭಾರತಕ್ಕಿಂತ ಪಾಕಿಸ್ತಾನ
ಕೆಳಮಟ್ಟದೆಂದು ಚಿತ್ರಿಸಲಾಗಿದ್ದರೆ, ಇನ್ನೂ ಕೆಲವು ಪುಸ್ತಕಗಳಲ್ಲಿನ ನಕ್ಷೆಗಳಲ್ಲಿ ಆಜಾದ್ ಜಮ್ಮು ಮತ್ತು ಕಾಶ್ಮೀರ (ಎಜೆಕೆ) ವನ್ನು ಭಾರತದ ಭಾಗವೆಂದು ತೋರಿಸಲಾಗಿದೆ ಎಂದು ನಾಸಿರ್ ಹೇಳಿದ್ದಾರೆ. ಇದು ಪಾಕಿಸ್ತಾನದ ಮಕ್ಕಳ ಮನಸ್ಸಿನಲ್ಲಿ ವಿಷ ಬೀಜ ಬಿತ್ತುವ ಪ್ರಯತ್ನ ಎಂದು ಅವರು ಆರೋಪಿಸಿದ್ದಾರೆ.
ಪಠ್ಯಪುಸ್ತಕಗಳಲ್ಲಿ ಖ್ವಾಯಿದ್-ಎ-ಅಜಮ್ ಮುಹಮ್ಮದ್ ಅಲಿ ಜಿನ್ನಾ ಮತ್ತು ಅಲ್ಲಮಾ ಮುಹಮ್ಮದ್ ಇಕ್ಬಾಲ್ ಅವರ ಕುರಿತಾಗಿ ಬರೆಯದೆ ಮಹಾತ್ಮ ಗಾಂಧಿ ಮತ್ತು ಕೆಲವು ಅಪರಿಚಿತರ ಕುರಿತಾಗಿ ಬರೆಯಲಾಗಿದ್ದು, ಒಂದೆಡೆ ಗಾಂಧಿಯನ್ನು ವೈಭವೀಕರಿಸುವುದು ಹಾಗೂ ಮತ್ತೊಂದೆಡೆ ಪಾಕಿಸ್ತಾನದ ರಾಷ್ಟ್ರೀಯ ವೀರರನ್ನು ಕೀಳಾಗಿ ಕಾಣುವುದು ಸರಿಯಲ್ಲ ಎಂದು ಅವರು ಹೇಳಿದರು.
ಗಣಿತ ಪುಸ್ತಕದಲ್ಲಿ, ಎಣಿಕೆಯ ಪರಿಕಲ್ಪನೆಗಳನ್ನು ವಿವರಿಸಲು ಹಂದಿಗಳ ಚಿತ್ರಗಳನ್ನು ತೋರಿಸಿದ್ದರೆ, ದೇಶದ ನಿರುದ್ಯೋಗಕ್ಕೆ ಸಂಬಂಧಿಸಿದಂತೆ ವಿದ್ಯಾರ್ಥಿಗಳಲ್ಲಿ ಅಪರಾಧ ಮತ್ತು ಹಿಂಸಾಚಾರವನ್ನು ಉತ್ತೇಜಿಸಲು ಪ್ರಯತ್ನಿಸಿರುವುದೂ ಇದೆ ಎಂದು ಅವರು ಆರೋಪಿಸಿದರು.
ಪಠ್ಯಪುಸ್ತಕ ಮಂಡಳಿಯು ಪ್ರಾಂತ್ಯದಾದ್ಯಂತ ಖಾಸಗಿ ಶಾಲೆಗಳು ಬೋಧಿಸುತ್ತಿರುವ 10 ಸಾವಿರ ಪಠ್ಯ ಪುಸ್ತಕಗಳ ವಿಮರ್ಶಾತ್ಮಕ ಅವಲೋಕನವನ್ನು ಪ್ರಾರಂಭಿಸಿದ್ದು, ಮೊದಲ ಹಂತದಲ್ಲಿ 31 ಪ್ರಕಾಶಕರ 100 ಪುಸ್ತಕಗಳನ್ನು ನಿಷೇಧಿಸಿದೆ ಮತ್ತು ಪುಸ್ತಕಗಳ ಪ್ರಕಟಣೆ ಮತ್ತು ಮಾರಾಟವನ್ನು ನಿಲ್ಲಿಸುವಂತೆ ಪ್ರಕಾಶಕರಿಗೆ ನಿರ್ದೇಶನ ನೀಡಲಾಗಿದೆ.








