ಬೆಂಗಳೂರು : ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರಾಜ್ಯಾದ್ಯಂತ ಜನ ಕಲಾಮೇಳದ ರೀತಿ ಹೋರಾಟ ರೂಪಿಸಲು ರಾಜ್ಯ ಕಾಂಗ್ರೆಸ್ ಮುಂದಾಗಿದೆ. ಈ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದು, “ರಾಜ್ಯ ಸರ್ಕಾರ ಜಾರಿಗೆ ತಂದಿರುವ ಭೂ ಸುಧಾರಣೆ ತಿದ್ದುಪಡಿ ಕಾಯ್ದೆ ವಿರೋಧಿಸಿ ರೈತ ಸಂಘಟನೆಗಳ ಬೆಂಬಲದೊಂದಿಗೆ ರಾಜ್ಯಾದ್ಯಂತ ಜನ ಕಲಾ ಮೇಳದ ರೀತಿ ಹೋರಾಟ ರೂಪಿಸಲು ಇಂದಿನ ದಲಿತ ಮುಖಂಡರೊಂದಿಗೆ ಸಭೆಯಲ್ಲಿ ತೀರ್ಮಾನಿಸಲಾಗಿದೆ”.
ಭೂ ಸುಧಾರಣೆ ಕಾಯ್ದೆಗೆ ಸರಕಾರ ತಿದ್ದುಪಡಿ ತಂದಿರುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಲು ಜನ ಕಲಾಮೇಳದ ರೀತಿಯ ಹೋರಾಟವೇ ಸೂಕ್ತ. ಇದಕ್ಕಾಗಿ ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳ ಮುಖಂಡರನ್ನು ಒಳಗೊಂಡ ಸಮಿತಿ ರಚಿಸಲು ನಿರ್ಧರಿಸಿದ್ದೇವೆ ಎಂದು ತಿಳಿಸಿದ್ದಾರೆ.
ಮತ್ತೊಂದು ಟ್ವೀಟ್ ನಲ್ಲಿ. ರೈತ ಸಂಘಟನೆಗಳು ಹಾಗೂ ದಲಿತ ಸಂಘಟನೆಗಳು ನಮ್ಮ ಹೋರಾಟಕ್ಕೆ ಬೆಂಬಲ ಸೂಚಿಸಲು ಒಪ್ಪಿರುವುದರಿಂದ ನಮಗೆ ಇನ್ನಷ್ಟು ಬಲ ಬಂದಿದೆ. ಈ ಸಂಬಂಧ ಆಗಸ್ಟ್ ಮೊದಲ ವಾರದಲ್ಲಿ ಉಭಯ ಸಂಘಟನೆಗಳ ಪ್ರಮುಖರ ಸಭೆ ಕರೆಯಲಾಗುವುದು. ಅಲ್ಲಿ ಕಾರ್ಯಾಗಾರ ಆಯೋಜಿಸುವ ಕುರಿತಂತೆಯೂ ಚರ್ಚಿಸಲಾಗುವುದು.
ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ್ ಖರ್ಗೆ ಮತ್ತಿತರ ಮುಖಂಡರ ಸಲಹೆ ಮೇರೆಗೆ ಈ ಹಿಂದೆ ನಾವು ಭೂ ಸುಧಾರಣೆ ಕಾಯ್ದೆ ಬಗ್ಗೆ ಸಮಾಲೋಚನೆ ನಡೆಸಿದ್ದೇವೆ. ಹಳ್ಳಿ ಹಳ್ಳಿಗಳಲ್ಲಿಯೂ ಹೋರಾಟ ನಡೆಸುವ ಕುರಿತು ಮುಂದಿನ ದಿನಗಳಲ್ಲಿ ತೀರ್ಮಾನಿಸಲಾಗುವುದು ಎಂದು ಸಿದ್ದರಾಮಯ್ಯ ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.








