ಪಾಟ್ನಾ: ಮದುವೆಯಾದ ಕೆಲವೇ ಗಂಟೆಗಳಲ್ಲಿ ಪ್ರಿಯಕರನ ಜೊತೆ ವಧು ಓಡಿ ಹೋದ ಘಟನೆ ಬಿಹಾರದ ಗೋಪಾಲ್‌ಗಂಜ್‌ನಲ್ಲಿ ನಡೆದಿದೆ. ಮದುವೆ ಬಳಿಕ ವರನ ಜೊತೆ ಊಟ ಮುಗಿಸಿಕೊಂಡು ಬಂದ ಬಳಿಕ ವಧು ಸ್ನೇಹಿತರ ಜೊತೆ ಮಾತನಾಡುವುದಾಗಿ ಹೇಳಿ ಮದುವೆ ಮಂಟಪದ ಹೊರಗಡೆ ಬಂದಿದ್ದಳು. ಇತ್ತ ಎಲ್ಲ ಸುಸೂತ್ರವಾಗಿ ನೆರವೇರಿದ ಖುಷಿಯಲ್ಲಿದ್ದ ವಧು-ವರರ ಕುಟುಂಬಸ್ಥರು ಸಂಬಂಧಿಕರ ಜೊತೆ ಮಾತನಾಡುತ್ತಾ ಕುಳಿತ್ತಿದ್ದರು. ಮತ್ತೊಂದೆಡೆ ವಧುವನ್ನು ಬೀಳ್ಕೋಡಲು ಎಲ್ಲ ತಯಾರಿ ನಡೆಸಲಾಗುತ್ತಿತ್ತು. ಈ ನಡುವೆ ವಧು ತನ್ನ ಪ್ರಿಯಕರನ ಜೊತೆ ಪರಾರಿ ಆಗಿದ್ದಾಳೆ ಎಂಬ ಸುದ್ದಿ ಕೇಳಿ ಬಂದಿದೆ. ಈ ವಿಷಯ ತಿಳಿಯುತ್ತಿದ್ದಂತೆ ವರ ಬೇಸರಗೊಂಡಿದ್ದು, ನಾನು ವಧು ಇಲ್ಲದೆ ಇಲ್ಲಿಂದ ಹಿಂತಿರುಗುದಿಲ್ಲ ಎಂದು ಹಠ ಹಿಡಿದ್ದಿದ್ದಾನೆ.
ವಧು ತನ್ನ ಪ್ರಿಯಕರನ ಜೊತೆ ಪರಾರಿಯಾದ ನಂತರ ಇಬ್ಬರ ಕುಟುಂಬಸ್ಥರ ನಡುವೆ ದೊಡ್ಡ ವಾಗ್ವಾದವೂ ನಡೆದಿದೆ. ಬಳಿಕ ವಧುವಿನ ಕುಟುಂಬಸ್ಥರು ವರನ ಕಡೆಯವರಿಗೆ ಸಮಾಧಾನ ಮಾಡಿ ಗ್ರಾಮದ ಮತ್ತೊಬ್ಬ ಯುವತಿ ಜೊತೆ ವರನಿಗೆ ಮದುವೆ ಮಾಡಿ ಕೊಟ್ಟಿದ್ದಾರೆ. ಮತ್ತೊಬ್ಬ ಯುವತಿಯ ಜೊತೆ ಮದುವೆ ಮಾಡಿಸಿದಾಗ ವರ ಹಾಗೂ ಆತನ ಕುಟುಂಬಸ್ಥರು ಕೋಪ ಮರೆತು ಶಾಂತರಾಗಿದ್ದಾರೆ.








