ಬಳ್ಳಾರಿ : ಕೊರೊನಾ ವಿಚಾರದಲ್ಲಿ ವಿಪಕ್ಷಗಳು ಅನಗತ್ಯ ಆರೋಪ ಮಾಡಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯಕ್ಕೆ ಮುಂದಾಗಿವೆ ಎಂದು ಸಚಿವ ಶ್ರೀ ರಾಮುಲು ಅವರು ಆರೋಪಿಸಿದ್ದಾರೆ.
ಬಳ್ಳಾರಿಯಲ್ಲಿ ವಿಪಕ್ಷಗಳ ಆರೋಪದ ಬಗ್ಗೆ ಮಾತನಾಡಿದ ಅವರು, ಕೋವಿಡ್ ನಿಯಂತ್ರಣದ ಸಲುವಾಗಿ ಯಾವ ಯಾವ ಉಪಕರಣ ಖರೀದಿ ಮಾಡಲಾಗಿದೆ ಎಂದು ಈಗಾಗಲೇ ವಿಪಕ್ಷ ನಾಯಕರಿಗೆ ದಾಖಲೆ ಸಮೇತ ಮಾಹಿತಿ ನೀಡಿದ್ದೇವೆ. ಆದ್ರೂ ಕೂಡ ವಿಪಕ್ಷಗಳು ಜನರ ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ. ದೇಶದ ಎಲ್ಲಾ ರಾಜ್ಯಗಳಲ್ಲಿನ ವಿಪಕ್ಷಗಳು ಸರ್ಕಾರಕ್ಕೆ ಸಹಕಾರ ನೀಡುತ್ತಿವೆ. ಕರ್ನಾಟಕದಲ್ಲಿ ಮಾತ್ರ ವಿಪಕ್ಷಗಳು ಅನಗತ್ಯ ಆರೋಪ ಮಾಡುತ್ತಿವೆ. ನಾವು ಸದನದಲ್ಲೂ ಲೆಕ್ಕ ಕೊಡಲು ಸಿದ್ಧರಿದ್ದೇವೆ. ಹೀಗಾಗಿ ಜನರಲ್ಲಿ ಅನಗತ್ಯ ಗೊಂದಲ ಸೃಷ್ಟಿ ಮಾಡೋದು ಬೇಡ. ಇಲ್ಲಸಲ್ಲದ ಆರೋಪ ಮಾಡಿ ಅನಗತ್ಯ ರಾಜಕಾರಣ ಮಾಡೋದನ್ನು ಕೈಬಿಡಬೇಕೆಂದು ವಿಪಕ್ಷಗಳಲ್ಲಿ ಮನವಿ ಮಾಡಿಕೊಂಡರು.
ಇದೇ ವೇಳೆ ಆಶಾ ಕಾರ್ಯಕರ್ತೆಯರ ಪ್ರತಿಭಟನೆ ಬಗ್ಗೆ ಮಾತನಾಡಿದ ರಾಮುಲು, ಆಶಾ ಕಾರ್ಯಕರ್ತೆಯರ ವೇತನ ಹೆಚ್ಚಳ ವಿಚಾರ ಕುರಿತು ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಲಾಗುವುದು. ಅವರು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ಳುವ ಭರವಸೆ ನನಗಿದೆ ಎಂದರು.







