ಮಂಡ್ಯ: ಕೆಆರ್‍ಎಸ್ ಡ್ಯಾಂನ ಮುಖ್ಯ ದ್ವಾರದಲ್ಲಿ ಎರಡು ಬೃಹತ್ ಪ್ರತಿಮೆಗಳ ನಿರ್ಮಾಣಕ್ಕೆ ಸ್ಥಳೀಯರಿಂದ ವಿರೋಧ ವ್ಯಕ್ತವಾಗಿದೆ.
ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಸರ್.ಎಂ ವಿಶ್ವೇಶ್ವರಯ್ಯ ಜೋಡಿ ಪ್ರತಿಮೆಗಳ ನಿರ್ಮಾಣಕ್ಕೆ ಅಪಸ್ವರ ವ್ಯಕ್ತವಾಗಿದೆ.

ಮಹಾರಾಜರ ಸಮಾನಕ್ಕೆ ನೌಕರನ ಪ್ರತಿಮೆ ನಿರ್ಮಾಣ ಸರಿಯಲ್ಲ. ಪ್ರತಿಮೆ ನಿರ್ಮಾಣವೇ ಅವೈಜ್ಞಾನಿಕ. ವಿಶ್ವೇಶ್ವರಯ್ಯ ಪ್ರತಿಮೆಯಿಂದ ಅಣೆಕಟ್ಟು ಸೌಂದರ್ಯಕ್ಕೆ ಧಕ್ಕೆಯಾಗಲಿದೆ. ಜೊತೆಗೆ ಪ್ರವಾಸಿಗರ ವೀಕ್ಷಣೆಗೆ ಪ್ರತಿಮೆಗಳು ಅಡ್ಡಿಯಾಗಲಿದೆ ಎಂಬುದು ಮಂಡ್ಯ, ಮೈಸೂರಿನ ಪ್ರಗತಿಪರರ ವಾದ.
9 ಕೋಟಿ ವೆಚ್ಚದಲ್ಲಿ ಎರಡು ಪ್ರತಿಮೆಗಳ ನಿರ್ಮಣಕ್ಕೆ ಹೆಚ್‍ಎಸ್‍ಆರ್ ಕಂಪನಿಗೆ ಗುತ್ತಿಗೆ ನೀಡಲಾಗಿದೆ. ನಾಲ್ವಡಿಯವರಿಗಿಂತ ವಿಶ್ವೇಶ್ವರಯ್ಯ ಪ್ರತಿಮೆ ನಿರ್ಮಾಣವೇ ಚುರುಕುಗೊಂಡಿದೆ. ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಗುತ್ತಿಗೆದಾರರಿಗೆ ಸರ್ಕಾರ, ಅಧಿಕಾರಿಗಳು ತಾಕೀತು ಮಾಡಿದ್ದಾರೆ. ವಿಶ್ವೇಶ್ವರಯ್ಯ ಪ್ರತಿಮೆಗೆ ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಶೀಘ್ರ ಕಾಮಗಾರಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎನ್ನಲಾಗಿದೆ.
ಕೆಆರ್‍ಎಸ್‍ಗೆ ಬಾಗೀನ ಸಮರ್ಪಣೆ ಕಾರ್ಯಕ್ರಮದಲ್ಲೇ ಪ್ರತಿಮೆಗಳ ಉದ್ಘಾಟನೆಗೆ ಚಿಂತನೆ ನಡೆದಿದೆ. ಮೈಸೂರು ಸಂಸ್ಥಾನದಲ್ಲಿ ವಿಶ್ವೇಶ್ವರಯ್ಯ ನೌಕರ ಅಷ್ಟೇ. ಕೆಆರ್‍ಎಸ್ ನಿರ್ಮಾಣಕ್ಕೆ ವಿಶ್ವೇಶ್ವರಯ್ಯ ಒಬ್ಬರೇ ಶ್ರಮಿಸಿಲ್ಲ. ವಿಶ್ವೇಶ್ವರಯ್ಯರಂತೆ ಏಳು ಮಂದಿ ದಿವಾನರು ಕೆಲಸ ಮಾಡಿದ್ದಾರೆ. ಹೀಗಾಗಿ ಮಹಾರಾಜರ ಸಮಾನಕ್ಕೆ ನೌಕರನ ಪ್ರತಿಮೆ ನಿರ್ಮಾಣ ಮಾಡುವುದು ಸರಿಯಲ್ಲ ಎಂಬುದು ಪ್ರಗತಿ ಪರರ ವಿರೋಧಕ್ಕೆ ಕಾರಣವಾಗಿದೆ.









