ಯಾರಾದರೂ ಸತ್ತರೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಾ ? ಲಾಕ್ ಡೌನ್ ವಿರೋಧಿಗಳಿಗೆ ಮಹಾರಾಷ್ಟ್ರ ಸಿಎಂ ಪ್ರಶ್ನೆ
ಮುಂಬೈ, ಜುಲೈ 26: ಆರ್ಥಿಕ ತೊಂದರೆಗಳನ್ನು ಪರಿಹರಿಸಲು ರಾಜ್ಯದಲ್ಲಿ ಲಾಕ್ ಡೌನ್ ಅನ್ನು ತೆಗೆಯುವ ಆತುರದಲ್ಲಿ ಸರ್ಕಾರವಿಲ್ಲ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಶನಿವಾರ ಹೇಳಿದ್ದಾರೆ.
ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಭಾವಿಸಿ ತರಾತುರಿಯಲ್ಲಿ ಲಾಕ್ ಡೌನ್ ತೆಗೆದ ಕೆಲವು ದೇಶಗಳಲ್ಲಿ ವೈರಸ್ ಇನ್ನೂ ಹರಡುತ್ತಿದೆ ಎಂದು ತಿಳಿದಾಗ ಮತ್ತೆ ನಿರ್ಬಂಧಗಳನ್ನು ವಿಧಿಸಬೇಕಾಯಿತು ಎಂದು ಮುಖ್ಯಮಂತ್ರಿ ಹೇಳಿದ್ದಾರೆ.
ಲಾಕ್ಡೌನ್ ಅನ್ನು ಸಂಪೂರ್ಣವಾಗಿ ತೆಗೆದುಹಾಕಲಾಗುತ್ತದೆ ಎಂದು ನಾನು ಎಂದಿಗೂ ಹೇಳುವುದಿಲ್ಲ. ಆದರೆ ನಾನು ಕೆಲವೊಂದು ವಿಚಾರಗಳಿಗೆ ಕ್ರಮೇಣ ತೆರೆಯಲು ಯೋಚಿಸಿದ್ದೇನೆ.
ಮತ್ತೆ ತೆರೆದ ನಂತರ, ಅದನ್ನು ಮತ್ತೆ ಪುನಃ ಮುಚ್ಚಬಾರದು. ಆದ್ದರಿಂದ, ನಾನು ಹಂತ ಹಂತವಾಗಿ ಕ್ರಮಗಳನ್ನು ತೆಗೆದುಕೊಳ್ಳಲು ಬಯಸುತ್ತೇನೆ. ನೀವು ಕೇವಲ ಆರ್ಥಿಕತೆ ಅಥವಾ ಆರೋಗ್ಯದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಇವೆರಡರ ನಡುವೆ ಸಮತೋಲನ ಇರಬೇಕಿದೆ ಎಂದು ಪಕ್ಷದ ಮುಖವಾಣಿ “ಸಾಮ್ನಾ” ನಲ್ಲಿ ಶನಿವಾರ ಪ್ರಕಟವಾದ ಶಿವಸೇನೆ ನಾಯಕ ಸಂಜಯ್ ರಾವತ್ ಅವರಿಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ.
ಈ ಸಾಂಕ್ರಾಮಿಕವು ಜಾಗತಿಕ ಯುದ್ಧವಾಗಿದೆ ಮತ್ತು ಇದು ಇಡೀ ಪ್ರಪಂಚದ ಮೇಲೆ ಪರಿಣಾಮ ಬೀರಿದೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಹೇಳಿದರು.
ದೇಶದಲ್ಲಿ ಅತಿ ಹೆಚ್ಚು ಕೊರೋನವೈರಸ್ ಹೊಂದಿರುವ ಮಹಾರಾಷ್ಟ್ರವು ಜುಲೈ 31 ರವರೆಗೆ ಲಾಕ್ ಡೌನ್ ವಿಸ್ತರಿಸಿದೆ.
1.44 ಲಕ್ಷ ಸಕ್ರಿಯ ಸೋಂಕು ಪ್ರಕರಣಗಳು ಮತ್ತು ವೈರಸ್‌ನಿಂದಾಗಿ 13,000 ಕ್ಕೂ ಹೆಚ್ಚು ಸಾವುಗಳು ಸೇರಿದಂತೆ 3.57 ಲಕ್ಷ ಪ್ರಕರಣಗಳು ರಾಜ್ಯದಲ್ಲಿ ದಾಖಲಾಗಿವೆ.
ಲಾಕ್ ಡೌನ್ ತೆಗೆದ ನಂತರ ಯಾರಾದರೂ ಸತ್ತರೆ ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಾ ಎಂದು ಮುಖ್ಯಮಂತ್ರಿ ಲಾಕ್ ಡೌನ್ ಅನ್ನು ವಿರೋಧಿಸುವ ಜನರನ್ನು ಕೇಳಿದರು.
ಅನೇಕ ಜನರು ಲಾಕ್‌ಡೌನ್ ಅನ್ನು ವಿರೋಧಿಸುತ್ತಿದ್ದಾರೆ. ಲಾಕ್‌ಡೌನ್ ಆರ್ಥಿಕತೆಯ ಮೇಲೆ ಪರಿಣಾಮ ಬೀರುತ್ತಿದೆ ಎಂದು ಅವರು ಹೇಳುತ್ತಾರೆ. ಅಂತಹ ಜನರಿಗೆ, ನಾನು ಲಾಕ್‌ಡೌನ್ ಅನ್ನು ತೆಗೆದುಹಾಕಲು ಸಿದ್ಧನಿದ್ದೇನೆ ಎಂದು ಹೇಳುತ್ತೇನೆ, ಆದರೆ ಜನರು ಅದರಿಂದ ಸತ್ತರೆ, ನೀವು ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೀರಾ? ಎಂದು ಪ್ರಶ್ನಿಸಿದರು ಜೊತೆಗೆ ನಾವು ಆರ್ಥಿಕತೆಯ ಬಗ್ಗೆ ಕಾಳಜಿ ವಹಿಸುತ್ತೇವೆ ಎಂದು ಹೇಳಿದರು.