ಬೆಂಗಳೂರು: ರಾಜ್ಯಾದ್ಯಂತ ಕಳೆದ ರಾತ್ರಿಯಿಂದ ಜಾರಿಯಲ್ಲಿರುವ ಸಂಡೇಡೌನ್ಗೆ ದಕ್ಷಿಣ ಕನ್ನಡ ಜಿಲ್ಲೆ, ಹುಬ್ಬಳ್ಳಿ ನಗರಗಳನ್ನು ಹೊರತುಪಡಿಸಿದರೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಜನರ ಓಡಾಟಕ್ಕೆ ಬ್ರೇಕ್ ಹಾಕಲು ಜಿಲ್ಲಾಡಳಿತ ಅಗತ್ಯ ವಸ್ತುಗಳ ಮಾರಾಟಕ್ಕೂ ಬ್ರೇಕ್ ಹಾಕಿದೆ. ಕೇವಲ ಹಾಲು ಮಾರಾಟ, ಔಷಧಿ, ಆಸ್ಪತ್ರೆಗಳನ್ನು ತೆರೆಯಲು ಅವಕಾಶ ನೀಡಲಾಗಿದೆ. ಪ್ರಾವಿಜನ್ ವಸ್ತುಗಳು, ತರಕಾರಿ, ಸೊಪ್ಪು, ಮಾಂಸ ಮೀನು ಮಾರಾಟ ಸೇರಿದಂತೆ ಯಾವ ಅಗತ್ಯ ವಸ್ತುಗಳ ಮಾರಾಟಕ್ಕೂ ಅನುಮತಿ ನೀಡಿಲ್ಲ. ಹೀಗಾಗಿ ಜನರು ಮನೆಗಳಿಂದ ಹೊರಗೆ ಬರುತ್ತಿಲ್ಲ. ಹೀಗಾಗಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಲಾಕ್ಡೌನ್ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಹುಬ್ಬಳ್ಳಿಯ ಚೆನ್ನಮ್ಮ ವೃತ್ತದ ಬಳಿ ಇರುವ ಮಾರುಕಟ್ಟೆ ಬಂದ್ ಮಾಡಿರುವ ಹಿನ್ನೆಲೆಯಲ್ಲಿ ತರಕಾರಿ ಸೇರಿದಂತೆ ಅಗತ್ಯ ವಸ್ತುಗಳ ಮಾರಾಟಕ್ಕೆ ಬ್ರೇಕ್ ಹಾಕಿದ್ದು, ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಕೊಪ್ಪಳದಲ್ಲಿ ಸಂಡೇ ಲಾಕ್ಡೌನ್ಗೆ ಜನರು ಕ್ಯಾರೇ ಎನ್ನುತ್ತಿಲ್ಲ. ಮಾಸ್ಕ್ ಧರಿಸದೆ ಲಾಕ್ಡೌನ್ಗೂ ನಮಗೂ ಯಾವುದೇ ಸಂಬಂಧ ಇಲ್ಲ ಎಂಬಂತೆ ಜನರು ಓಡಾಡುತ್ತಿದ್ದಾರೆ.

ರಾಜ್ಯದಲ್ಲಿ ಅತಿಹೆಚ್ಚು ಕೊರೊನಾ ಸೋಂಕಿತ ಪ್ರಕರಣಗಳು ದಾಖಲಾಗಿರುವ ಕಲಬುರಗಿಯಲ್ಲೂ ಸಂಡೇ ಲಾಕ್ಡೌನ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಓಡಾಡುತ್ತಿರುವ ದೃಷ್ಯ ಸಾಮಾನ್ಯವಾಗಿದೆ.
ಸಾಂಸ್ಕøತಿಕ ನಗರಿ ಮೈಸೂರಿನಲ್ಲಿ ಸಂಡೇ ಲಾಕ್ಡೌನ್ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಲಾಕ್ಡೌನ್ ಇದ್ದರೂ ವಾಕಿಂಗ್ ನೆಪದಲ್ಲಿ, ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ರಸ್ತೆಗಳಲ್ಲಿ ಓಡಾಡುತ್ತಿದ್ದಾರೆ. ಅಂಗಡಿ ಮುಂಗಟ್ಟು ಸ್ಥಗಿತಗೊಂಡಿದ್ದರೂ ತರಕಾರಿ, ಅಗತ್ಯ ವಸ್ತುಗಳ ಮಾರಾಟ ನೆಪದಲ್ಲಿ ಜನರು ಮನೆಗಳಿಂದ ಹೊರ ಬರುತ್ತಿದ್ದಾರೆ.
ರಾಜಧಾನಿಯಲ್ಲಿ ಡೋಂಟ್ ಕೇರ್..!
ಸಂಡೇ ಲಾಕ್ಡೌನ್ಗೆ ರಾಜಧಾನಿ ಬೆಂಗಳೂರಿನಲ್ಲಿ ಡೋಂಟ್ ಕೇರ್ ಎನ್ನುವ ದೃಷ್ಯ ಕಂಡು ಬರುತ್ತಿದೆ. ಕೆ.ಆರ್ ಮಾರುಕಟ್ಟೆ, ಯಶವಂತಪುರ ಸೇರಿದಂತೆ ಹಲವು ಮಾರುಕಟ್ಟೆಗಳಲ್ಲಿ ತರಕಾರಿ, ಹಣ್ಣು, ಮೀನು ಮಾಂಸ ಮಾರಾಟ ಎಂದಿನಂತೆ ಭರ್ಜರಿಯಾಗಿಯೇ ನಡೆಯುತ್ತಿದೆ. ಅಗತ್ಯ ವಸ್ತುಗಳ ಖರೀದಿ ನೆಪದಲ್ಲಿ ಜನರು ಬೀದಿಗೆ ಬರುತ್ತಿರುವುದು ಸಾಮಾನ್ಯವಾಗಿದೆ.
ಮಲ್ಲೇಶ್ವರಂನ ಹೂವು-ಹಣ್ಣಿನ ಮಾರುಕಟ್ಟೆ ಓಪನ್ ಆಗಿದ್ದು, ಖರೀದಿಯೂ ಜೋರಾಗಿದೆ.
ಸಂಡೇ ಲಾಕ್ಡೌನ್ ಇದ್ರೂ ವಾಹನಗಳ ಓಡಾಟಕ್ಕೆ ಬ್ರೇಕ್ ಬಿದ್ದಿಲ್ಲ. ಆಟೋ, ಟ್ಯಾಕ್ಸಿ ಹಾಗೂ ಸರಕು ವಾಹನಗಳ ಸಂಚಾರ ಮಾಮೂಲಿನಂತಿದೆ. ತುಮಕೂರು ರಸ್ತೆ, ಕೋಲಾರ ರಸ್ತೆಗಳಲ್ಲಿ ವಾಹನಗಳ ಸಂಚಾರ ಎಂದಿನಂತಿದೆ.

ಪಶ್ಚಿಮ ಬಂಗಾಳ, ಬಿಹಾರ ಸೇರಿದಂತೆ ಹೊರ ರಾಜ್ಯಗಳಿಗೆ ರೈಲುಗಳು ತೆರಳುತ್ತಿರುವ ಹಿನ್ನೆಲೆಯಲ್ಲಿ ಮೆಜೆಸ್ಟಿಕ್ ರೈಲ್ವೆ ನಿಲ್ದಾಣ ಹಾಗೂ ಯಶವಂತಪುರ ರೈಲು ನಿಲ್ದಾಣಗಳಲ್ಲಿ ಸಾವಿರಾರು ಜನರು ಜಮಾಯಿಸಿದ್ದಾರೆ.
ಬಿಎಂಟಿಸಿ, ಕೆಎಸ್ಆರ್ಟಿಸಿ ಬಸ್ಗಳ ಸಂಚಾರ ಸ್ಥಗಿತಗೊಂಡಿದ್ದರಿಂದ ಎರಡೂ ನಿಲ್ದಾಣಗಳು ಖಾಲಿ ಖಾಲಿ ಹೊಡೆಯುತ್ತಿವೆ.








