ಕೆರೆಬಿಯನ್ನರ ಚಳಿ ಬಿಡಿಸಿದ ಇಂಗ್ಲೆಂಡ್ ವೇಗಿ ಸ್ಟುವರ್ಟ್ ಬ್ರಾಡ್
ಇಂಗ್ಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡ ಸೋಲಿನ ಭೀತಿಯಲ್ಲಿದೆ. ಪಂದ್ಯದ ಎರಡನೇ ದಿನ ಇಂಗ್ಲೆಂಡ್ ನ ಘಾತಕ ವೇಗದ ದಾಳಿಯ ಮುಂದೆ ವಿಂಡೀಸ್ ಬ್ಯಾಟ್ಸ್ ಮೆನ್‍ಗಳು ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ದಾರಿ ಹಿಡಿದ್ರು. ಎರಡನೇ ದಿನದ ಅಂತ್ಯಕ್ಕೆ ವೆಸ್ಟ್ ಇಂಡೀಸ್ ಆರು ವಿಕೆಟ್ ನಷ್ಟಕ್ಕೆ 137 ರನ್ ದಾಖಲಿಸಿದೆ. ನಾಯಕ ಜೇಸನ್ ಹೋಲ್ಡರ್ (24) ಮತ್ತು ಶಾನ್ ಡಾವ್ರಿಚ್ (10) ಅವರು ಮೂರನೇ ದಿನಕ್ಕೆ ಬ್ಯಾಟಿಂಗ್ ಕಾಯ್ದುಕೊಂಡಿದ್ದಾರೆ.
ಇದಕ್ಕು ಮೊದಲು ಇಂಗ್ಲೆಂಡ್ ತಂಡದ ರನ್ ವೇಗಕ್ಕೆ ಕೆರೆಬಿಯನ್ ಬೌಲರ್‍ಗಳು ಬ್ರೇಕ್ ಹಾಕಿದ್ದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ಒಲಿವ್ ಪೊಪ್ 91 ರನ್‍ಗೆ ಔಟಾದ್ರೆ, ಜೋಸ್ ಬಟ್ಲರ್ ತನ್ನ ಹೋರಾಟವನ್ನು 67 ರನ್‍ಗೆ ಅಂತ್ಯಗೊಳಿಸಿದ್ರು. ಬಳಿಕ ಸ್ಟುವರ್ಟ್ ಬ್ರಾಡ್ ವಿಂಡೀಸ್ ಬೌಲರ್‍ಗಳ ಚಳಿ ಬಿಡಿಸಿದ್ರು. ಕೇವಲ 45 ಎಸೆತಗಳಲ್ಲಿ 9 ಬೌಂಡರಿ ಮತ್ತು ಒಂದು ಸಿಕ್ಸರ್ ನ ಸಹಾಯದಿಂದ ಬ್ರಾಡ್ 62 ರನ್ ಗಳಿಸಿದ್ರು. ಪರಿಣಾಮ ಇಂಗ್ಲೆಂಡ್ ತಂಡ ಮೊದಲ ಇನಿಂಗ್ಸ್ ನಲ್ಲಿ 369 ರನ್ ಪೇರಿಸುವಂತಾಯ್ತು.
ವಿಂಡೀಸ್ ತಂಡದ ವೇಗಿ ಕೇಮರ್ ರಾಚ್ 72ಕ್ಕೆ 4 ವಿಕೆಟ್ ಪಡೆದ್ರು. ಹಾಗೇ ಶಾನೋನ್ ಗ್ಯಾಬ್ರಿಯಲ್ ಮತ್ತು ರೋಸ್ಟನ್ ಚೇಸ್ ತಲಾ ಎರಡು ಉರುಳಿಸಿದ್ರೆ, ಜೇಸನ್ ಹೋಲ್ಡರ್ ಒಂದು ವಿಕೆಟ್ ಕಬಳಿಸಿದ್ರು.
ಬಳಿಕ ಬ್ಯಾಟಿಂಗ್ ಮಾಡಿದ್ದ ವೆಸ್ಟ್ ಇಂಡೀಸ್ ತಂಡಕ್ಕೆ ಇಂಗ್ಲೆಂಡ್ ತಂಡದ ವೇಗಿಗಳು ಮಾರಕವಾಗಿ ಕಾಡಿದ್ರು. ಕ್ರೇಗ್ ಬ್ರಾತ್‍ವೇಟ್ 1 ರನ್ ಗಳಿಸಿದ್ರೆ, ಜಾನ್ ಕ್ಯಾಂಬೆಲ್ 32 ರನ್‍ಗೆ ಸೀಮಿತವಾದ್ರು. ಬಳಿಕ ಶಾಯ್ ಹೋಪ್ 17 ರನ್ ಮತ್ತು ಶಾಮ್ರಾಹ್ ಬ್ರೂಕ್ಸ್ 4 ರನ್ ಗಳಿಸಿ ಜೇಮ್ ಆಂಡರ್ಸನ್‍ಗೆ ವಿಕೆಟ್ ಒಪ್ಪಿಸಿದ್ರು. ನಂತರ ರೋಸ್ಟನ್ ಚೇಸ್ 9 ರನ್ ಗಳಿಸಿದ್ದಾಗ ಸ್ಟುವರ್ಟ್ ಬ್ರಾಡ್ ಅವರ ಎಲ್‍ಬಿ ಬಲೆಗೆ ಬಿದ್ರೆ, ವಿಂಡೀಸ್ ತಂಡದ ಆಧಾರ ಸ್ತಂಭ ಜೆರ್ಮನ್ ಬ್ಲ್ಯಾಕ್ ವುಡ್ 26 ರನ್ ಗಳಿಸಿ ಕ್ರಿಸ್ ವೋಕ್ಸ್‍ಗೆ ಕ್ಲೀನ್ ಬೌಲ್ಡಾದ್ರು. ಅಂತಿಮವಾಗಿ ಜೇಸನ್ ಹೋಲ್ಡರ್ ಮತ್ತು ಶಾನ್ ಡಾವ್ರಿಚ್ ತಂಡವನ್ನು ಸೋಲಿನಿಂದ ಬಚಾವ್ ಮಾಡಲು ಮೂರನೇ ದಿನ ದಿಟ್ಟ ಪ್ರದರ್ಶನವನ್ನು ನೀಡಬೇಕಿದೆ.
ಇಂಗ್ಲೆಂಡ್ ತಂಡದ ಪರ ಜೇಮ್ಸ್ ಆಂಡರ್ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ ಎರಡು ವಿಕೆಟ್ ಪಡೆದ್ರೆ, ಜೋಫ್ರಾ ಆರ್ಚರ್ ಮತ್ತು ಕ್ರಿಸ್ ವೋಕ್ಸ್ ತಲಾ ಒಂದೊಂದು ವಿಕೆಟ್ ಉರುಳಿಸಿದ್ರು. ಮೂರು ಟೆಸ್ಟ್ ಪಂದ್ಯಗಳ ಸರಣಿಯಲ್ಲಿ ಈಗಾಗಲೇ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿವೆ. ಹೀಗಾಗಿ ಮೂರನೇ ಪಂದ್ಯ ಹೆಚ್ಚು ಮಹತ್ವ ಪಡೆದುಕೊಂಡಿದೆ.