ಐಸಿಸಿ ಮುಖ್ಯಸ್ಥರಾಗಲು ಸೌರವ್ ಗಂಗೂಲಿ ಸೂಕ್ತ ವ್ಯಕ್ತಿ – ಕುಮಾರ ಸಂಗಕ್ಕರ
ಸೌರವ್ ಗಂಗೂಲಿಯವರ ಬಿಸಿಸಿಐ ಅಧ್ಯಕ್ಷ ಅವಧಿ ಜುಲೈ 27ಕ್ಕೆ ಮುಗಿಯಲಿದೆ. ಈಗಾಗಲೇ ಕಾರ್ಯದರ್ಶಿ ಜೈ ಶಾ ಅವರು ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿರುವುದರಿಂದ ಆಗಸ್ಟ್ ತನಕ ಅಧಿಕಾರವಧಿ ಮುಂದುವರಿಯಲಿದೆ.
ಲೋಧಾ ಸಮಿತಿಯ ಪ್ರಕಾರ ಗಂಗೂಲಿ ಇನ್ನೂ ಮೂರು ವರ್ಷಗಳ ಬಳಿಕವಷ್ಟೇ ಬಿಸಿಸಿಐ ಅಥವಾ ಬೆಂಗಾಲ್ ಕ್ರಿಕೆಟ್ ಸಂಸ್ಥೆಯ ಹುದ್ದೆಯನ್ನು ಪಡೆಯಲು ಸಾಧ್ಯವಾಗುತ್ತದೆ. ಇದೀಗ ಗಂಗೂಲಿ ಆರು ವರ್ಷಗಳಿಂದ ಬಂಗಾಲ್ ಕ್ರಿಕೆಟ್ ಸಂಸ್ಥೆ ಹಾಗೂ ಬಿಸಿಸಿಐನಲ್ಲಿ ಅಧಿಕಾರ ಚಲಾಯಿಸಿದ್ದಾರೆ.
ಇದೀಗ ಗಂಗೂಲಿ ಐಸಿಸಿ ಮುಖ್ಯಸ್ಥರಾಗಬೇಕು ಎಂಬ ಮಾತುಗಳು ಕೇಳಿ ಬರುತ್ತಿವೆ. ಈ ಹಿಂದೆಯೇ ದಕ್ಷಿಣ ಆಫ್ರಿಕಾ ಕ್ರಿಕೆಟ್ ಸಂಸ್ಥೆಯ ನಿದೇರ್ಶಕ ಹಾಗೂ ದಕ್ಷಿಣ ಆಫ್ರಿಕಾ ಕ್ರಿಕೆಟ್ ತಂಡದ ನಾಯಕ ಗ್ರೇಮ್ ಸ್ಮಿತ್ ಅವರು ಗಂಗೂಲಿ ಐಸಿಸಿ ಮುಖ್ಯಸ್ಥರಾಗಬೇಕು ಎಂದು ಹೇಳಿದ್ದರು.
ಸದ್ಯ ಸ್ಮಿತ್ ಹೇಳುವಂತೆ ಶ್ರೀಲಂಕಾ ಕ್ರಿಕೆಟ್ ತಂಡದ ಮಾಜಿ ನಾಯಕ ಕುಮಾರ ಸಂಗಕ್ಕರ ಕೂಡ ಗಂಗೂಲಿ ಬೆನ್ನಿಗೆ ನಿಂತಿದ್ದಾರೆ. ಸೌರವ್ ಗಂಗೂಲಿ ಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ. ಅವರ ಅಪಾರ ಆಡಳಿತ ಅನುಭವ ಮತ್ತು ಕ್ರಿಕೆಟ್ ಮೇಲಿನ ಬದ್ಧತೆ ಹಾಗೂ ಚಾಣಕ್ಷತನದ ಬುದ್ದಿವಂತಿಕೆಯಿಂದ ಐಸಿಸಿಯಲ್ಲಿ ಕೆಲವೊಂದು ಬದಲಾವಣೆಗಳನ್ನು ತರಬಹುದು ಎಂದು ಸಂಗಕ್ಕರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸೌರವ್ ಗಂಗೂಲಿ ಕ್ರಿಕೆಟ್ ಆಟವನ್ನು ಹೃದಯದಿಂದ ಪ್ರೀತಿಸುತ್ತಾರೆ. ಆಟದ ಮೇಲೆ ಅವರಿಗೆ ಅಪಾರವಾದ ಪ್ರೀತಿ ಮತ್ತು ಬದ್ಧತೆ ಇದೆ. ಹೀಗಾಗಿ ಸೌರವ್ ಐಸಿಸಿ ಮುಖ್ಯಸ್ಥರಾದ್ರೆ ಸಾಕಷ್ಟು ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು. ಹಾಗಂತ ಬಿಸಿಸಿಐ, ಶ್ರೀಲಂಕಾ, ಇಂಗ್ಲೆಂಡ್ ಕ್ರಿಕೆಟ್ ಸಂಸ್ಥೆಗಳ ಅಧ್ಯಕ್ಷರಾದಾಗ ಏನು ಬದಲಾವಣೆ ಮಾಡಲು ಸಾಧ್ಯವಿಲ್ಲ. ಅದೂ ಅಲ್ಲದೆ ಸೌರವ್ ಗಂಗೂಲಿಯ ಯೋಚನೆ ಕೂಡ ಭಿನ್ನವಾಗಿರುತ್ತದೆ. ಅವರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಯೋಚನೆ ಮಾಡುವಂತೆ ಚಾಣಕ್ಷತನವನ್ನು ಹೊಂದಿದ್ದಾರೆ ಎಂದು ಸಂಗಕ್ಕರ ಹೇಳಿದ್ದಾರೆ.
ನಾನು ಗಂಗೂಲಿಯವರನ್ನು ಬಹಳ ಹತ್ತಿರದಿಂದ ಗಮನಸಿದ್ದೇನೆ. ಅವರು ಬಿಸಿಸಿಐ ಅಧ್ಯಕ್ಷರಾದ ನಂತರವೂ ನೋಡಿದ್ದೇನೆ. ಕ್ರಿಕೆಟ್ ಆಡಳಿತಗಾರನಾಗಿ, ತರಬೇತುದಾರನಾಗಿ, ಆಡಳಿತಗಾರನಾಗಿ ಅವರು ಆಟಗಾರರು ಮತ್ತು ಪದಾಧಿಕಾರಿಗಳ ಜೊತೆಗೂ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಹೀಗಾಗಿ ಐಸಿಸಿ ಮುಖ್ಯಸ್ಥರಾಗುವುದಕ್ಕೆ ಗಂಗೂಲಿಯೇ ಸೂಕ್ತ ವ್ಯಕ್ತಿ. ಅವರ ಅಧಿಕಾರಾವಧಿಯಲ್ಲಿ ವಿಶ್ವ ಕ್ರಿಕೆಟ್ ಇನ್ನಷ್ಟು ಸುಧಾರಣೆಯಾಗಬಹುದು ಎಂದು ಹೇಳಿದ್ದಾರೆ.
ಈಗಾಗಾಗಲೇ ಐಸಿಸಿ ಮುಖ್ಯಸ್ಥರಾಗಿದ್ದ ಶಶಾಂಕ್ ಮನೋಹರ್ ಅವರ ಅಧಿಕಾರ ಅವಧಿ ಮಗಿದಿದೆ. ಒಂದು ಮೂಲದ ಪ್ರಕಾರ ಮುಂದಿನ ಐಸಿಸಿ ಮುಖ್ಯಸ್ಥರ ಹುದ್ದೆ ಇಂಗ್ಲೆಂಡ್ ಪಾಲಾಗುವ ಸಾಧ್ಯತೆ ಇದೆ. ಹಾಗೇ ಪಾಕಿಸ್ತಾನ ಎಹಾಸನ್ ಮಣಿ ಕೂಡ ರೇಸ್ ನಲ್ಲಿದ್ದಾರೆ.