ಬೆಂಗಳೂರು : ರಾಜ್ಯ ಸರ್ಕಾರ ಕೊರೊನಾ ಹೆಸರಲ್ಲಿ ಎರಡು ಸಾವಿರ ಕೋಟಿ ರೂಪಾಯಿ ಲೂಟಿ ಮಾಡಿದೆ ಎಂದು ಆರೋಪಿಸಿ ಮಾಜಿ ಸಿಎಂ ಸಿದ್ದರಾಮಯ್ಯ ತನಿಖೆ ಆಗ್ರಹಿಸಿದ್ದಾರೆ. ಈ ವಿಚಾರವಾಗಿ ಕಂದಾಯ ಸಚಿವ ಆರ್. ಅಶೋಕ್ ಅವರು ಪ್ರತಿಕ್ರಿಯೆ ನೀಡಿದ್ದು, ಸಿದ್ದರಾಮಯ್ಯ ತನಿಖೆ ಮಾಡಿ ಎಂದು ಹೇಳಿದ ತಕ್ಷಣ ತನಿಖೆ ಮಾಡಲು ನಾವೇನು ಗುಲಾಮರೇ..? ಎಂದಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ರಾಜಕೀಯ ಪ್ರೇರಿತ ಆರೋಪ ಮಾಡುತ್ತಿದೆ, ಈಗಾಗಲೇ ಸಂಬಂಧಿಸಿದ ಸಚಿವರು ಉತ್ತರ ನೀಡಿದ್ದಾರೆ. ಸಿದ್ದರಾಮಯ್ಯ ತನಿಖೆ ಮಾಡಿ ಎಂದು ಹೇಳಿದ ತಕ್ಷಣ ತನಿಖೆ ಮಾಡಲು ನಾವೇನು ಗುಲಾಮರೇ..? ಎಂದು ಪ್ರಶ್ನಿಸಿದರು.
ಸಿದ್ದರಾಮಯ್ಯ ಸಿಎಂ ಆಗಿದ್ದಾಗ ನಾವು ಸಾವಿರ ಪತ್ರ ಬರೆದಿದ್ದೆವು. ಆರ್ ಟಿಐ ಮೂಲಕ ಅವರು ಮಾಹಿತಿ ಪಡೆಯಬಹುದು ಆದರೆ ಅವರು ಎಷ್ಟು ಉತ್ತರ ನೀಡಿದ್ದರು ಗೊತ್ತಿದೆ. ನಾವು ಅವರ ಪತ್ರಗಳಿಗೆ ಉತ್ತರ ನೀಡುತ್ತೇವೆ. ಸಿದ್ದರಾಮಯ್ಯ ಅವರೇ ಸ್ಥಾಪಿಸಿದ್ದ ಎಸಿಬಿಗೆ ಯಾಕೆ ದೂರು ನೀಡುತ್ತಿಲ್ಲ, ಪರಮ ನಂಬಿಕೆ ಇರುವ ಎಸಿಬಿಗೆ ದೂರು ನೀಡಲಿ. ನಾವೇ ತನಿಖೆಗೆ ನೀಡಬೇಕೆಂದು ನಿಯಮವೇನಿದೆ..? ಎಂದು ಸಿದ್ದುಗೆ ಸಾಮ್ರಾಟ್ ತಿರುಗೇಟು ನೀಡಿದ್ದಾರೆ.
ಇದೇ ವೇಳೆ ಸರ್ಕಾರ ಒಂದು ವರ್ಷ ಪೂರೈಸಿದ ಬಗ್ಗೆ ಮಾತನಾಡಿದ ಅವರು, ಸದ್ಯ ಒಂದು ವರ್ಷ ಜನಪರ ಸರ್ಕಾರವಾಗಿ ಬಿಎಸ್ ವೈ ಕೆಲಸ ಮಾಡಿದ್ದಾರೆ. ಪ್ರಾರಂಭದಲ್ಲೇ ನೆರೆ ಉಂಟಾಗಿತ್ತು. ಯಡಿಯೂರಪ್ಪ ಹೊರತುಪಡಿಸಿ ಬೇರೆ ಯಾರೇ ಇದ್ದಿದ್ರೂ ಇಂತಹ ಪರಿಸ್ಥಿತಿ ನಿಭಾಯಿಸಲು ಆಗುತ್ತಿರಲಿಲ್ಲ, ಕೊರೊನಾ ಸಂದರ್ಭದಲ್ಲಿ ಕೂಡ ಸಮರ್ಥವಾಗಿ ನಿಭಾಯಿಸಿದ್ದಾರೆ. ಈ ವರ್ಷ ದಾಖಲೆ ಪ್ರಮಾಣದಲ್ಲಿ ಕೃಷಿ ಚಟುವಟಿಕೆ ನಡೆಯುತ್ತದೆ. ಇದು ನಾವು ರೈತಪರ ಇದ್ದೇವೆ ಅನ್ನೋದಕ್ಕೆ ಸಾಕ್ಷಿ ಎಂದಿದ್ದಾರೆ.








