ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದಿಗೆ ಒಂದು ವರ್ಷ ಪೂರೈಸಿದ ಹಿನ್ನೆಲೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸರಳ ಸಮಾರಂಭ ನಡೆಯಿತು. ಈ ವೇಳೆ ಮಾತನಾಡಿದ ಮುಖ್ಯಮಂತ್ರಿಗಳು, ಕೋವಿಡ್ ಸಮಸ್ಯೆ ಇಲ್ಲದಿದ್ದರೆ ಸಾಕಷ್ಟು ಅಭಿವೃದ್ಧಿ ಕಾರ್ಯ ಮಾಡಬಹುದಿತ್ತು. ರಾಜ್ಯದ ಅಭಿವೃದ್ಧಿಗೆ ಕೋವಿಡ್ ಅಡ್ಡಿಯಾಗಿದೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಬಿಎಸ್ ವೈ , ನಿಮ್ಮ ಆಶಿರ್ವಾದದಿಂದ ನಾನು ಅಧಿಕಾರಕ್ಕೆ ಬಂದು ಒಂದು ವರ್ಷ ಆಗಿದೆ. ಉಳಿದ ಅವಧಿಯಲ್ಲೂ ಸುಭದ್ರ ಆಡಳಿತ ನೀಡುತ್ತೇನೆ. ನಿಮ್ಮೆಲ್ಲರ ಸಹಕಾರದಿಂದ ರಾಜ್ಯದ ಅಭಿವೃದ್ಧಿ ಮಾಡುತ್ತೇನೆ. ಉಳಿದ ಅವಧಿಯಲ್ಲಿ ಸುಭದ್ರ ಸರಕಾರ, ರಾಜ್ಯದ ಸರ್ವಾಂಗೀಣ ಅಭಿವೃದ್ಧಿ ಮಾಡುವುದು ನನ್ನ ಗುರಿಯಾಗಿದೆ. ಕೋವಿಡ್ ಇಲ್ಲದ್ದಿರೆ ರಾಜ್ಯದಲ್ಲಿ ಮತ್ತಷ್ಟು ಅಭಿವೃದ್ಧಿ ಮಾಡಬಹುದಿತ್ತು. ಅಭಿವೃದ್ಧಿಗೆ ಕೋವಿಡ್ ಅಡ್ಡಿ ಆಗಿದೆ ಎಂದರು.
ಮುಂದುವರಿದು ಮಾತನಾಡುತ್ತಾ ಸರ್ಕಾರದ ಯೋಜನೆಗಳನ್ನು ಉಲ್ಲೇಖಿಸಿದ ಸಿಎಂ, ಕಿಸಾನ್ ಸಮ್ಮಾನ್ ಐತಿಹಾಸಿಕ ಯೋಜನೆ. 50 ಲಕ್ಷ ರೈತರಿಗೆ ತಲಾ 4 ಸಾವಿರ ನೆರವು ನೀಡಿದ್ದೇವೆ. ರೈತರು- ನೇಕಾರರು ನನ್ನ ಎರಡು ಕಣ್ಣು ಇದ್ದಂತೆ. ಎಸ್ಸಿ ಎಸ್ಟಿ ಜನರು ನೆಮ್ಮದಿಯಿಂದ ಬದುಕಬೇಕು. ಬಡವರು ಮನೆ ಇಲ್ಲದಂತೆ ಇರಬಾರದು. ನೇಕಾರರಿಗೆ ತಲಾ ಎರಡು ಸಾವಿರ ರೂ., ಎಪಿಎಂಸಿ ಕಾಯ್ದೆ ತಿದ್ದುಪಡಿ ಮೂಲಕ ರೈತರು ಬೆಳೆದ ಬೆಳೆ ಮಾರಾಟ ಸ್ವಾತಂತ್ರ್ಯ ಕಲ್ಪಿಸಿದೆ ಎಂದು ತಿಳಿಸಿದರು.








