ಜುಲೈ 30 ರಂದು ರಾಜ್ಯಸಭಾ ಸಂಸದರ ವರ್ಚುವಲ್ ಸಭೆ ಕರೆದ ಸೋನಿಯಾ ಗಾಂಧಿ
ಹೊಸದಿಲ್ಲಿ, ಜುಲೈ 28: ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಜುಲೈ 30 ರಂದು ಪ್ರಸ್ತುತ ರಾಜಕೀಯ ಪರಿಸ್ಥಿತಿ ಮತ್ತು ಕೋವಿಡ್ -19 ಕುರಿತು ಚರ್ಚಿಸಲು ರಾಜ್ಯಸಭಾ ಸಂಸದರ ವರ್ಚುವಲ್ ಸಭೆ ಕರೆದಿದ್ದಾರೆ.
ಈ ಹಿಂದೆ ಇದೇ ವಿಷಯಗಳ ಬಗ್ಗೆ ಚರ್ಚಿಸಲು ಅವರು ಲೋಕಸಭಾ ಸಂಸದರ ಸಭೆ ಕರೆದಿದ್ದರು ಮತ್ತು ಸಭೆಯಲ್ಲಿ ಹಾಜರಿದ್ದ ಸಂಸದರು ಪಕ್ಷದ ನಾಯಕತ್ವವನ್ನು ವಹಿಸಿಕೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯನ್ನು ಒತ್ತಾಯಿಸಿದ್ದರು.
ಪ್ರಸ್ತುತ ಸನ್ನಿವೇಶದಲ್ಲಿ ಕಾಂಗ್ರೆಸ್ ಮುಂದೆ ಹಲವಾರು ಸವಾಲುಗಳಿದ್ದು, ರಾಜಸ್ಥಾನವನ್ನು ಹೊರತುಪಡಿಸಿ ದೇಶದ ಎಲ್ಲಾ ರಾಜ್ ಭವನಗಳ ಹೊರಗೆ ಪ್ರತಿಭಟನೆ ನಡೆಸುತ್ತಿದೆ.
ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರಗಳನ್ನು ಉರುಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದು, ಸ್ಪೀಕ್ ಅಪ್ ಫಾರ್ ಡೆಮಾಕ್ರಸಿ ಎಂಬ ಅಭಿಯಾನವನ್ನೂ ಪ್ರಾರಂಭಿಸಿದೆ.
ಕಾಂಗ್ರೆಸ್ ಪಕ್ಷವು ರಾಷ್ಟ್ರಪತಿಯನ್ನು ಸಂಪರ್ಕಿಸಲಿದೆ ಮತ್ತು ಅಗತ್ಯಬಿದ್ದರೆ, ರಾಜಸ್ಥಾನದಲ್ಲಿ ನಡೆಯುತ್ತಿರುವ ಪರಿಸ್ಥಿತಿಗೆ ಸಂಬಂಧಿಸಿದಂತೆ ಪ್ರಧಾನಿ ನಿವಾಸದ ಹೊರಗೆ ಪ್ರತಿಭಟನೆ ನಡೆಸಲಿದೆ ಎಂದು ರಾಜಸ್ಥಾನ್ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದ್ದಾರೆ.
ಸಚಿನ್ ಪೈಲಟ್ ಮತ್ತು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನಡುವಿನ ಭಿನ್ನಾಭಿಪ್ರಾಯಗಳು ಬಹಿರಂಗವಾಗಿ ಹೊರಬಂದ ನಂತರ ರಾಜಸ್ಥಾನ್ ಕಾಂಗ್ರೆಸ್ ಗೊಂದಲದಲ್ಲಿದೆ. ಸಚಿನ್ ಪೈಲಟ್ ನನ್ನು ಉಪಮುಖ್ಯಮಂತ್ರಿ ಮತ್ತು ರಾಜ್ಯ ಘಟಕದ ಮುಖ್ಯಸ್ಥ ಹುದ್ದೆಯಿಂದ ವಜಾಗೊಳಿಸಲಾಗಿದೆ.
ಗೆಹ್ಲೋಟ್ ಸರ್ಕಾರವನ್ನು ಉರುಳಿಸಲು ಬಿಜೆಪಿ ಕುದುರೆ ವ್ಯಾಪಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ. ಆದರೆ ಬಿಜೆಪಿ ಆರೋಪಗಳನ್ನು ತಿರಸ್ಕರಿಸಿದೆ.