ಯುಕೆಯಲ್ಲಿ ಸಾಕು ಬೆಕ್ಕಿಗೆ ಕೊರೋನಾ ವೈರಸ್ ಸೋಂಕು ಪತ್ತೆ
ಇಂಗ್ಲೆಂಡ್, ಜುಲೈ 28: ಯುಕೆಯಲ್ಲಿ ಸಾಕು ಬೆಕ್ಕಿಗೆ ಕೋವಿಡ್ -19 ಸೋಂಕು ತಗುಲಿದೆ ಎಂದು ಯುಕೆ ಮುಖ್ಯ ಪಶುವೈದ್ಯ ಅಧಿಕಾರಿ ಧೃಡ ಪಡಿಸಿದ್ದಾರೆ.
ಬೆಕ್ಕಿನ ಮಾಲೀಕರಿಗೆ ಕೊರೋನವೈರಸ್ ಸೋಂಕು ದೃಢಪಟ್ಟಿತ್ತು ಮತ್ತು ಸಾಕುಪ್ರಾಣಿಗೆ ಅವರಿಂದ ಕೊರೊನಾ ಸೋಂಕು ಹರಡಿದೆ ಎಂದು ಹೇಳಲಾಗಿದೆ
ವೇಬ್ರಿಡ್ಜ್‌ನ ಪ್ರಾಣಿ ಮತ್ತು ಸಸ್ಯ ಆರೋಗ್ಯ ಸಂಸ್ಥೆ (ಎಪಿಎಚ್‌ಎ) ಪ್ರಯೋಗಾಲಯದಲ್ಲಿ ನಡೆಸಿದ ಪರೀಕ್ಷೆಗಳಲ್ಲಿ ಸಾಕು ಬೆಕ್ಕಿಗೆ ಕೋವಿಡ್ -19 ವೈರಸ್ ಸೋಂಕು ಪತ್ತೆಯಾಗಿದೆ.
ಮೊದಲ ಬಾರಿಗೆ ಸಾಕು ಬೆಕ್ಕಿನಲ್ಲಿ ಕೋವಿಡ್ -19 ಗೆ ಕಾರಣವಾದ ವೈರಸ್ ಪತ್ತೆಯಾಗಿದೆ ಎಂದು ಯುಕೆ ಮುಖ್ಯ ಪಶುವೈದ್ಯ ಅಧಿಕಾರಿ ಸೋಮವಾರ ಬಹಿರಂಗಪಡಿಸಿದ್ದಾರೆ. ಆದರೆ ಸಾಕು ಪ್ರಾಣಿಯಿಂದ ವೈರಸ್ ಇತರರಿಗೆ ಅಥವಾ ಇತರ ಪ್ರಾಣಿಗಳಿಗೆ ಹರಡಿದ ಬಗ್ಗೆ ಯಾವುದೇ ಪುರಾವೆಗಳಿಲ್ಲ ಎಂದು ಅವರು ಹೇಳಿದ್ದಾರೆ. ಈ ಹಿನ್ನಲೆಯಲ್ಲಿ ಪ್ರಾಣಿಗಳ ಸಂಪರ್ಕಕ್ಕೆ ಮೊದಲು ಮತ್ತು ನಂತರವೂ ನಿಯಮಿತವಾಗಿ ಕೈ ತೊಳೆಯಲು ಆರೋಗ್ಯ ಅಧಿಕಾರಿಗಳು ತಮ್ಮ ಸಲಹೆಯನ್ನು ಪುನರುಚ್ಚರಿಸಿದ್ದಾರೆ.
ಲಭ್ಯವಿರುವ ಎಲ್ಲಾ ಪುರಾವೆಗಳು ಈ ಹಿಂದೆ ಕೋವಿಡ್ -19 ದೃಢಪಟ್ಟ ಮಾಲೀಕರಿಂದ ಬೆಕ್ಕಿಗೆ ಹರಡಿರುವುದಾಗಿ ಸೂಚಿಸಿದೆ. ಅಂದಿನಿಂದ ಬೆಕ್ಕು ಮತ್ತು ಅದರ ಮಾಲೀಕರು ಸಂಪೂರ್ಣ ಚೇತರಿಸಿಕೊಂಡಿದ್ದಾರೆ ಮತ್ತು ಮನೆಯ ಇತರ ಪ್ರಾಣಿಗಳಿಗೆ ಅಥವಾ ಜನರಿಗೆ ಹರಡಿಲ್ಲ .
ಇದು ಇಲ್ಲಿಯವರೆಗೆ ಪತ್ತೆಯಾದ ಅತ್ಯಂತ ಅಪರೂಪದ ಘಟನೆಯಾಗಿದ್ದು ಸೋಂಕಿತ ಪ್ರಾಣಿ ಸೌಮ್ಯವಾದ ಕ್ಲಿನಿಕಲ್ ಚಿಹ್ನೆಗಳನ್ನು ತೋರಿಸಿದೆ ಮತ್ತು ಕೆಲವೇ ದಿನಗಳಲ್ಲಿ ಚೇತರಿಸಿಕೊಂಡಿದೆ. ಆದರೆ ಸಾಕುಪ್ರಾಣಿಗಳು ನೇರವಾಗಿ ಮನುಷ್ಯರಿಗೆ ವೈರಸ್ ಹರಡುತ್ತವೆ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ಮುಖ್ಯ ಪಶುವೈದ್ಯ ಅಧಿಕಾರಿ ಕ್ರಿಸ್ಟೀನ್ ಮಿಡಲ್ಮಿಸ್ ಹೇಳಿದ್ದಾರೆ.
ಸಾಕು ಬೆಕ್ಕಿಗೆ ಆರಂಭದಲ್ಲಿ ಬೆಕ್ಕಿನ ಹರ್ಪಿಸ್ ವೈರಸ್, ಸಾಮಾನ್ಯ ಬೆಕ್ಕು ಉಸಿರಾಟದ ಸೋಂಕು ಎಂದು ಶಂಕಿಸಲಾಯಿತು.ಆದರೆ ಸಂಶೋಧನಾ ಕಾರ್ಯಕ್ರಮದ ಭಾಗವಾಗಿ ಮಾದರಿಯನ್ನು ಸಾರ್ಸ್-ಕೋವ್ -2ಗಾಗಿ ಪರೀಕ್ಷಿಸಿದಾಗ ಸೋಂಕು ತಗುಲಿರುವುದು ದೃಢಪಟ್ಟಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.