ಬೆಂಗಳೂರು : ಕೊರೊನಾ ವೈರಸ್ ಕಾರಣವಾಗಿಟ್ಟುಕೊಂಡು 7ನೇ ತರಗತಿ ಪಠ್ಯಪುಸ್ತಕದಿಂದ ಟಿಪ್ಪು ಸುಲ್ತಾನ್ ಪಠ್ಯವನ್ನು ಶಿಕ್ಷಣ ಇಲಾಖೆ ಕೈಬಿಟ್ಟಿದೆ. ಇದಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಅದರಂತೆ ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್, ಟಿಪ್ಪು ಪಠ್ಯವನ್ನು ಕೈಬಿಟ್ಟಿರುವುದು ದುರ್ದೈವ ಎಂದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್ ನಂತಹ ಸಂಕಷ್ಟ ಪರಿಸ್ಥಿತಿಯ ದುರ್ಲಾಭ ಪಡೆದು ಇಂತಹ ಕೆಲಸ ಮಾಡಿರುವುದು ಸರಿಯಲ್ಲ. ಸರ್ಕಾರ ಕೂಡಲೇ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು ಎಂದು ಒತ್ತಾಯಿಸಿದರು. ಟಿಪ್ಪು ಒಬ್ಬ ದೇಶಭಕ್ತ. ಶಿಕ್ಷಣವನ್ನು ಕೇಸರೀಕರಣ ಮಾಡಲು ಸರ್ಕಾರ ಈ ಹುನ್ನಾರ ನಡೆಸಿದೆ. ಕೆಲವು ಪಠ್ಯದಲ್ಲಿ ಉಳಿಸಿ ಒಂದು ತರಗತಿಯಲ್ಲಿ ಬಿಟ್ಟಿದ್ದು ಸರಿಯಲ್ಲ. ಕೋವಿಡ್ ಸಂಕಷ್ಟ ಪರಿಹರಿಸುವಲ್ಲಿ ಸರ್ಕಾರ ಹೆಚ್ಚಿನ ಗಮನ ಕೊಡಲಿ ಎಂದು ಸಲೀಂ ಸಲಹೆ ನೀಡಿದರು.








