ಚೀನಾದ 47 ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿದ ಮರುದಿನವೇ ಕಾಂಗ್ರೆಸ್ ವಕ್ತಾರ ಅಭಿಷೇಕ್ ಮನು ಸಿಂಗ್ವಿ, ಜನಪ್ರಿಯ ಆನ್ಲೈನ್ ವಿಡಿಯೋ ಗೇಮ್ ಪಬ್ ಜಿ ಯನ್ನು ನಿಷೇಧಿಸಲು ಮೋದಿ ಸರ್ಕಾರ ಬಯಸಿದೆ. ಆದರೆ ಯುವಕರು ಆಟವನ್ನು ನಿಲ್ಲಿಸಿದರೆ, ನಿರುದ್ಯೋಗದ ಬಗ್ಗೆ ಮಾತನಾಡುತ್ತಾರೆ ಎಂದು ಮೋದಿ ಸರ್ಕಾರಕ್ಕೆ ಅರಿವಿದೆ ಎಂದು ಟೀಕಿಸಿದ್ದಾರೆ.
ಟ್ವೀಟ್ ನಲ್ಲಿ ಅಭಿಷೇಕ್ ಮನು ಸಿಂಗ್ವಿ, “ಮೋದಿಜಿ ನಿಜವಾಗಿಯೂ ಪಬ್ ಜಿ ಯನ್ನು ನಿಷೇಧಿಸಲು ಬಯಸಿದ್ದರು. ಆದರೆ ಯುವಕರು ಫ್ಯಾಂಟಸಿ ಪ್ರಪಂಚದಿಂದ , ನೈಜ ಲೋಕಕ್ಕೆ ಬಂದು ಉದ್ಯೋಗಗಳಂತಹ ವಿಷಯಗಳನ್ನು ಕೇಳುತ್ತಾರೆ ಮತ್ತು ಅದರಿಂದ ಸಮಸ್ಯೆಯಾಗುತ್ತದೆ ಎಂದು ಪಬ್ ಜಿ ಬ್ಯಾನ್ ಮಾಡಲು ಹಿಂದೇಟು ಹಾಕುತ್ತಿದ್ದಾರೆ ಎಂದು ಕಾಲೆಳೆದಿದ್ದಾರೆ.
ಗಾಲ್ವಾನ್ ಕಣಿವೆಯ ಸಂಘರ್ಷದ ಬೆನ್ನಲ್ಲೇ ಟಿಕ್ಟಾಕ್ ಸೇರಿದಂತೆ 59 ಚೀನಾ ಆ್ಯಪ್ ಗಳನ್ನು ಕೇಂದ್ರ ಸರ್ಕಾರ ನಿರ್ಬಂಧಿಸಿತ್ತು. ಎರಡು ದಿನಗಳ ಹಿಂದೆ ಚೀನಾದ 47 ಆ್ಯಪ್ಗಳನ್ನು ಸರ್ಕಾರ ನಿಷೇಧಿಸಿತ್ತು. ಇದೀಗ ಗೇಮ್ ಗೆ ಸಂಬಂಧಿಸಿದ ಪಬ್ ಜಿ ಸೇರಿದಂತೆ ಚೀನಾದ 250 ಆ್ಯಪ್ ಗಳನ್ನು ನಿಷೇಧಿಸಲು ಸರ್ಕಾರ ಪಟ್ಟಿ ತಯಾರಿಸಿದೆ ಎಂದು ಹೇಳಲಾಗುತ್ತಿದೆ.
ಪಬ್ ಜಿ ದಕ್ಷಿಣ ಕೊರಿಯಾ ಅಭಿವೃದ್ಧಿ ಪಡಿಸಿರುವ ಆ್ಯಪ್ ಆಗಿದ್ದರೂ ಚೀನಾದ ಟೆನ್ಸೆಂಟ್ ಕಂಪನಿ ಬಂಡವಾಳ ಹೂಡಿರುವ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅದನ್ನೂ ನಿಷೇಧಿಸಲು ನಿರ್ಧರಿಸಿದೆ.








