ಅಂಬಾಲಾ : ಇಂದು ಮಹತ್ವಾಕಾಂಕ್ಷಿ ರಫೇಲ್ ಯುದ್ಧ ವಿಮಾನಗಳು ಭಾರತದ ನೆಲವನ್ನು ಸ್ಪರ್ಶಿಸಲಿವೆ. ಫ್ರಾನ್ಸ್ ನಿಂದ ಮೊದಲ ಹಂತವಾಗಿ 5 ರಫೇಲ್ ಯುದ್ಧ ವಿಮಾನಗಳು ಸೋಮವಾರ ಹೊರಟಿದ್ದು, ಇಂದು ಮಧ್ಯಾಹ್ನ 2 ಗಂಟೆಗೆ ಹರ್ಯಾಣದ ಅಂಬಾಲದ ಅಲ್ ದಾಫ್ರಾ ವಾಯಪಡೆಗೆ ಸೇರ್ಪಡೆಗೊಳ್ಳಲಿವೆ.
ಯುದ್ಧ ವಿಮಾನ ಬಂದಿಳಿಯುವ ಸಂದರ್ಭದಲ್ಲಿ ಮತ್ತು ಬಂದಿಳಿದ ಮೇಲೆ ವಾಯುನೆಲೆಯ ಮತ್ತು ಅದರ ಅಕ್ಕಪಕ್ಕದ ಪ್ರದೇಶಗಳ ಫೋಟೋ ಮತ್ತು ವಿಡಿಯೊಗಳನ್ನು ತೆಗೆಯುವುದನ್ನು ನಿಷೇಧಿಸಲಾಗಿದೆ. ಅಂಬಾಲಾ ವಾಯುನೆಲೆಯ ಸುತ್ತಮುತ್ತ 3 ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಜನರು ಖಾಸಗಿ ಡ್ರೋನ್ ಗಳನ್ನು ಹಾರಿಸುವುದಕ್ಕೆ ಜಿಲ್ಲಾಡಳಿತ ನಿಷೇಧ ಹೇರಿದೆ.
2016ರಲ್ಲಿ 59 ಸಾವಿರ ಕೋಟಿ ರೂ. ವೆಚ್ಚದಲ್ಲಿ 36 ರಫೇಲ್ ವಿಮಾನಗಳನ್ನು ಖರೀದಿಸುವ ಸಂಬಂಧ ಭಾರತ ಸರ್ಕಾರ ಫ್ರಾನ್ಸ್‌ನ ಡಸಾಲ್ಟ್ ಕಂಪನಿಯ ಜೊತೆ ಸಹಿ ಹಾಕಿತ್ತು. ಒಪ್ಪಂದ ಪ್ರಕಾರ 2020ರ ಜುಲೈಯಲ್ಲಿ ಮೊದಲ ಬ್ಯಾಚ್ ವಿಮಾನಗಳು ಭಾರತಕ್ಕೆ ಬರಬೇಕು ಡೆಡ್‌ಲೈನ್ ವಿಧಿಸಲಾಗಿತ್ತು. ಈ ಡೆಡ್‌ಲೈನ್‌ಗೆ ಅನುಗುಣವಾಗಿ ಮೊದಲ ಬ್ಯಾಚ್‌ನ 10 ವಿಮಾನಗಳು ಈಗ ಪೂರ್ಣ ಪ್ರಮಾಣದಲ್ಲಿ ಹಸ್ತಾಂತರವಾಗುತ್ತಿವೆ. ಈ ಪೈಕಿ 5 ವಿಮಾನಗಳು ಭಾರತಕ್ಕೆ ಬರುತ್ತಿದ್ದರೆ ಉಳಿದ 5 ವಿಮಾನಗಳು ಫ್ರಾನ್ಸ್‌ನಲ್ಲಿ ತರಬೇತಿ ನೀಡಲು ಬಳಕೆಯಾಗಲಿದೆ.