ವ್ಯಾಘ್ರಗಳೆಂಬ ದೈತ್ಯ ರಮ್ಯಮನೋಹರ ಸೃಷ್ಟಿಯ ಅದ್ಭುತದ ಕುರಿತು ನಿಮಗೆ ತಿಳಿದಿರದ ಒಂದಷ್ಟು ಮಾಹಿತಿ
ಕಾಡಿಗೆ ಹುಲಿ ರಕ್ಷಣೆ, ಹುಲಿಗೆ ಕಾಡು ರಕ್ಷಣೆ. ಇದು ನಾವೆಲ್ಲರೂ ಕೇಳಿಕೊಂಡು ಬಂದ ಅರಣ್ಯ ನೀತಿಯ ಅಲಿಖಿತ ಒಡಂಬಡಿಕೆ. ಯಾವುದೇ ಕಾಡಿಗಾದರೂ ಹುಲಿಯೇ ಭೂಷಣ. ಹುಲಿಗಳ ಸಂಚಾರವಿದ್ದ ಅಭಯಾರಣ್ಯಕ್ಕೆ ಇರುವ ಗತ್ತು ಗಾಂಭೀರ್ಯ ಹುಲಿಗಳಿಲ್ಲದ ಅರಣ್ಯಕ್ಕಿರುವುದಿಲ್ಲ. ಹುಲಿಗಳು ಸೃಷ್ಟಿಯ ಅದ್ಭುತ ಚಮತ್ಕಾರ; ರುದ್ರ ಮನೋಹರ ದೃಶ್ಯ ಕಾವ್ಯ. ಇಡೀ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಆಕರ್ಷಣೀಯವಾದ ವನ್ಯಜೀವಿ ಪಟ್ಟಿಯಲ್ಲಿ ವ್ಯಾಘ್ರರಾಜನಿಗೆ ಮೊದಲ ಸ್ಥಾನ. ಅರಣ್ಯದ ಅಗೋಚರ ವಿಕ್ಷಿಪ್ತ ಭಯಾನಕ ಕಾನೂನಿನಲ್ಲಿ ಹುಲಿರಾಯನದ್ದು ಯಾವತ್ತಿನ ಪಾರಮ್ಯ. ಇಂದು ವಿಶ್ವ ಹುಲಿ ದಿನಾಚರಣೆ; ಇಡೀ ಜಗತ್ತಿನ ಹುಲಿಗಳ ಸಂಖ್ಯೆಯಲ್ಲಿ ನಮ್ಮ ಭಾರತ ಅಗ್ರ ಸ್ಥಾನದಲ್ಲಿದೆ. ಪ್ರಪಂಚದ ಹುಲಿಗಳ ಒಟ್ಟು ಪ್ರಮಾಣದಲ್ಲಿ ಮುಕ್ಕಾಲು ಪಾಲು ಹುಲಿಗಳು ಅಂದರೆ ಶೇ. 70ರಷ್ಟು ನಮ್ಮ ದೇಶದ ಕಾಡುಗಳಲ್ಲಿವೆ ಅನ್ನುವ ಅತ್ಯಂತ ಮನೋಲ್ಲಾಸದ ಸಂಗತಿ ಈಗಷ್ಟೆ ಹೊರಬಿದ್ದಿದೆ.
ವೈಲ್ಡ್ ಕ್ಯಾಟ್ ಪ್ರಬೇಧದ ಅತ್ಯಂತ ದೈತ್ಯ ಜೀವಿ ಹುಲಿಯ ಬಗ್ಗೆ ನಮ್ಮ ತಿಳುವಳಿಕೆ ಈಗಲೂ ಅಷ್ಟಕಷ್ಟೆಯೇ. ಬ್ರಿಟೀಶ್ ರಾಜ್ ಅಧಿಪತ್ಯವಿದ್ದಾಗ ಮತ್ತು ಸ್ವಾತಂತ್ರ್ಯಾ ನಂತರದ ಮೊದಮೊದಲ ದಶಕಗಳಲ್ಲಿ ಎಗ್ಗುಸಿಗ್ಗಿಲ್ಲದೆ ಮಾರಣಹೋಮ ನಡೆದು ಅಳಿವಿನಂಚಿಗೆ ಬಂದು ನಿಂತಿದ್ದ ಹುಲಿಗಳ ರಕ್ಷಣೆಗಾಗಿ ವನ್ಯಜೀವಿ ಪ್ರೇಮಿಗಳು ಕೈಗೊಂಡ, ಸೇವ್ ಟೈಗರ್ ಅಭಿಯಾನ ನಿಜಕ್ಕೂ ಕ್ರಾಂತಿಕಾರಕ ನಡೆ. 70ರ ದಶಕದಲ್ಲೇ ಎದ್ದಿದ್ದ ಹುಲಿಗಳನ್ನು ಉಳಿಸಿ ಧ್ವನಿ ಗಟ್ಟಿಯಾಗಿ ಕಾರ್ಯಗತಗೊಂಡಿದ್ದು ಮಾತ್ರ 90ರ ದಶಕದಲ್ಲಿ. ಆದರೆ ಆನಂತರ ಈ ನಿಟ್ಟಿನಲ್ಲಿ ನಮ್ಮ ವನ್ಯಜೀವಿ ಹೋರಾಟಗಾರರು, ನಿಸರ್ಗ ಪ್ರೇಮಿಗಳು, ಪರಿಸರವಾದಿಗಳು ಮತ್ತು ಸರ್ಕಾರ ಕೈಗೊಂಡ ಅನೇಕ ರಚನಾತ್ಮಕ ಕಾರ್ಯಕ್ರಮಗಳ ಫಲವಾಗಿಯೇ ಇಂದು ಭಾರತ ವಿಶ್ವದಲ್ಲಿಯೇ ಹುಲಿಗಳ ಗಣತಿಯಲ್ಲಿ ಅಗ್ರಸ್ಥಾನ ಸಂಪಾದಿಸಿಕೊಂಡಿದೆ.
ಒಂದು ರಾಯಲ್ ಬೆಂಗಾಲ್ ಟೈಗರ್ ಬರೋಬ್ಬರಿ 300 ಕೆಜಿಗೂ ಹೆಚ್ಚು ತೂಗುತ್ತದೆ. ಅಂದರೆ ಸರಾಸರಿ 5 ರಿಂದ 6 ಸಾಮಾನ್ಯ ಗಾತ್ರ ಮನುಷ್ಯನ ತೂಕ. ಹುಲಿಗಳ ಹಿಂದಿನ ಎರಡು ಕಾಲುಗಳಿಗಿಂತ ಮುಂದಿನ ಎರಡು ಕಾಲುಗಳು ಮತ್ತು ಪಂಜಾ ಹೆಚ್ಚು ಬಲಶಾಲಿ. ಒಂದು ಆರೋಗ್ಯವಾಗಿರುವ ಹುಲಿ ತನ್ನ ಒಂದು ಕಾಲಿನ ಪಂಜಾದಿಂದ ಒಬ್ಬ ಬಲಿಷ್ಟ ಮನುಷ್ಯನ ಜೀವವನ್ನು ಒಂದೇ ಏಟಿಗೆ ಕೊನೆಗಾಣಿಸುತ್ತದೆ. ಹುಲಿಯ ಒಂದೇ ಒಂದು ಮಾರಣಾಂತಿಕ ಪ್ರಹಾರ ಮನುಷ್ಯನ ಬೆನ್ನು ಮೂಳೆಯನ್ನು ಪುಡಿಮಾಡುತ್ತದೆ. ಹಗಲಿನಲ್ಲಿ ಹೆಚ್ಚು ಸಂಚರಿಸದ ಹುಲಿ ಉದ್ದೇಶಪೂರ್ವಕವಾಗಿ ನಿಶಾಚರಿಯಂತೆ ವರ್ತಿಸಿ ಬೇಟೆ ಮುಂತಾದ ಕಾರ್ಯಾಚರಣೆಗಳನ್ನು ರಾತ್ರಿ ಹೊತ್ತಿನಲ್ಲಿ ನಡೆಸುತ್ತದೆ. ಕಾರಣವೇನು ಗೊತ್ತಾ? ಮನುಷ್ಯನ ಹಸ್ತಕ್ಷೇಪವಿರುವ ಕಾಡುಗಳಲ್ಲಿ ಹುಲಿಗಳು ಸಾಧ್ಯವಾದಷ್ಟು ಮನುಷ್ಯನಿಂದ ದೂರವಿರಲು ಬಯಸುತ್ತವೆ. ಹುಲಿಗಳಿಗೆ ಆಂತರ್ಯದಲ್ಲಿ ಕೊಂಚ ಮಟ್ಟಿಗಾದರೂ ಭಯ ಅಂತಿದ್ದರೆ ಅದು ಮನುಷ್ಯನ ಧೂರ್ತತನದ ಬಗ್ಗೆ ಮಾತ್ರ. ತನ್ನ ಉದ್ದೇಶ ಈಡೇರಿಸಿಕೊಳ್ಳಲು ಯಾವುದೇ ಕುತಂತ್ರ ಅನುಸರಿಸಬಲ್ಲ ಮನುಷ್ಯನಿಂದ ಸಾಧ್ಯವಾದಷ್ಟು ದೂರವಿರಬೇಕೆನ್ನುವ ಉದ್ದೇಶದಿಂದ ಹುಲಿಗಳು ಕತ್ತಲ ರಾತ್ರಿಯ ಕಾರ್ಯಾಚರಣೆಯ ಮೊರೆ ಹೋಗುತ್ತವೆ.
ಬಹಳಷ್ಟು ಜನರಿಗೆ ಗೊತ್ತಿಲ್ಲ, ಬಹುತೇಕ ಹುಲಿ ಮರಿಗಳು ಜನ್ಮ ತಾಳುವಾಗ ಕುರುಡಾಗಿ ಹುಟ್ಟುತ್ತವೆ. ತಾಯಿಯ ದೇಹಗಂಧವನ್ನು ಅನುಸರಿಸಿ ಅವು ತಿರುಗುತ್ತವೆ. ಒಂದು ಹಂತದ ಬೆಳವಣಿಗೆ ಸಾಧಿಸಿದ ನಂತರವಷ್ಟೆ ಅವುಗಳ ದೃಷ್ಟಿ ತೀಕ್ಷ್ಣಗೊಳ್ಳುತ್ತದೆ. ಬಾಲ್ಯಾವಸ್ಥೆಯಲ್ಲಿ ಹುಲಿಮರಿಗಳಿಗೆ ಅಪಾಯ ಹೆಚ್ಚು. ಹಸಿವಿನಿಂದ ಹಾಗೂ ಚಳಿಗೆ ಹುಲಿಮರಿಗಳು ಹೆಚ್ಚು ಸಾಯುತ್ತವೆ. ಇಲ್ಲವೇ ಹೆಣ್ಣು ಹುಲಿಯನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಲು ಗಂಡು ಹುಲಿ, ಮರಿಯನ್ನು ಕಬಳಿಸುತ್ತದೆ. ಬಾಲ್ಯದ ಸಂಘರ್ಷದಲ್ಲಿ ಬದುಕುವ ಹುಲಿಗಳು 20-25 ವರ್ಷ ಬದುಕುತ್ತವೆ. ಆದರೆ ಈಗೀಗ ಕಾಡಿನ ವಾತಾವರಣವೂ ಹುಲಿಗಳು ಬದುಕಲು ಪೂರಕವಾಗಿಲ್ಲ, ಹೀಗಾಗಿ 20 ವರ್ಷಕ್ಕಿಂತ ಮೊದಲೇ ಹುಲಿಗಳು ಸಾಯುತ್ತಿರುವ ಸಂಖ್ಯೆ ಹೆಚ್ಚಾಗಿದೆ. ರಣಥಂಬೂರ್ ಅರಣ್ಯದ ರೂಪದರ್ಶಿ ಹೆಣ್ಣು ಹುಲಿ ಮಚಿಲಿ ಬದುಕಿದ್ದು 19 ವರ್ಷ ಮಾತ್ರ. ಸರ್ಕಸ್ ನಿಂದ ರಕ್ಷಿಸಿ ಕರೆತರಲಾಗಿದ್ದ ಫ್ಲೋರಿಡಾದ ಟೆಂಪಾ ಜೂನಲ್ಲಿದ್ದ ಒಂದು ಹುಲಿ ಮಾತ್ರ ಪೂರ್ತಿ 25 ವರ್ಷ ಬದುಕಿತ್ತು.
ಹೆಣ್ಣು ಹುಲಿ ತನ್ನ ಐದಾರು ಮರಿಗಳ ಗುಂಪಿನಲ್ಲಿ ಕಾಣಿಸಿಕೊಂಡರೆ, ಆ ಗುಂಪನ್ನು ಆಂಬುಷ್ ಎಂದು ಕರೆಯಲಾಗುತ್ತದೆ. ಈ ಆಂಬುಷ್ ಅತ್ಯಂತ ಅಪಾಯಕಾರಿ, ಇವುಗಳ ಎದುರಿಗೆ ಎಂತಹ ಬಲಾಢ್ಯ ಪ್ರಾಣಿಗಳು ಬಂದರೂ ಸೋಲು ಮತ್ತು ಸಾವು ನಿಶ್ಚಿತ. ಹುಲಿಗಳು ತನ್ನದೇ ಜಾತಿಯ ಹುಲಿಗಳೊಂದಿಗೆ ಮಾತ್ರವಲ್ಲ ಬಿಗ್ ಕ್ಯಾಟ್ ವರ್ಗದ ಸಿಂಹದ ಜೊತೆಯೂ ಕೂಡಿಕೆ ಮಾಡುತ್ತವೆ. ಗಂಡು ಹುಲಿ – ಹೆಣ್ಣು ಸಿಂಹದ ಮಿಲನದಿಂದ ಹುಟ್ಟುವ ಟೈಗನ್ ಹಾಗೂ ಗಂಡು ಸಿಂಹ – ಹೆಣ್ಣು ಹುಲಿಯ ಕೂಡಿಕೆಯಿಂದ ಜನಿಸುವ ಲೈಗರ್ ಇದಕ್ಕೆ ಉದಾಹರಣೆ. ಇದರಲ್ಲಿ ಲೈಗರ್ 4.5 ಅಡಿ ಎತ್ತರ ಹಾಗೂ 6 ಅಡಿ ಉದ್ದವಿರುತ್ತದೆ. ಟೈಗನ್ ಗಳು ಅಮೇರಿಕಾ, ಜೆಕ್ ಗಣರಾಜ್ಯ. ಚೀನಾ, ಇರಾನ್, ರಷ್ಯಾ, ಭಾರತ, ಯುನೈಟೆಡ್ ಅರಬ್ ಎಮಿರಟ್ಸ್ ಮತ್ತು ಅರ್ಜಂಟೈನಾಗಳಲ್ಲಿ ಕಂಡು ಬರುತ್ತವೆ. ಥೈವಾನ್ ಕಾನೂನಿನಲ್ಲಿ ಮಾತ್ರ ಹುಲಿಗಳ ಕ್ರಾಸ್ ಬ್ರೀಡ್ ಗೆ ನಿಷೇದವಿದೆ.
ಹುಲಿಗಳು ಗಂಟೆಗೆ 60 ಕಿಲೋಮೀಟರ್ ವೇಗದಲ್ಲಿ ಓಡುತ್ತವೆ. ಹುಲಿಗಳಿಗೆ ನದಿಗಳಲ್ಲಿ ಈಜುವುದೆಂದರೆ ಮೋಜಿನ ವಿಚಾರ. ಗಾಯಗೊಂಡ ವ್ಯಾಘ್ರ ತನ್ನ ದೇಹದ ಗಾಯವನ್ನು ನೆಕ್ಕಿ ಗುಣಪಡಿಸಿಕೊಳ್ಳುತ್ತದೆ, ಅಂದರೆ ಹುಲಿಗಳ ಉಗುಳಿನಲ್ಲಿ ಆ್ಯಂಟಿ ಸೆಪ್ಟಿಕ್ ಗುಣವಿತ್ತದೆ. ಹುಲಿಗಳು ತಮ್ಮ ಜಾಗವನ್ನು ಅಥವಾ ಟೆರಟೆರಿಯನ್ನು ಗುರುತಿಸಿ ಅಲ್ಲಿ ತನ್ನ ಅಧಿಪತ್ಯ ಸಾರುತ್ತದೆ. ತನ್ನ ಟೆರಟೆರಿಯ ಸುತ್ತಮುತ್ತಲೂ ಅದು ಮೂತ್ರ ವಿಸರ್ಜನೆ ಮಾಡಿ ಜಾಗ ಗುರುತಿಸಿಕೊಳ್ಳುತ್ತದೆ. ತನ್ನ ಜಾಗಕ್ಕೆ ಬರುವ ಇತರೆ ಬಲಶಾಲಿ ಪ್ರಾಣಿಗಳಿಗೆ ಹೆದರಿಕೆ ಹುಟ್ಟಿಸಲು ಪಂಜಾದಿಂದ ಮರಕ್ಕೆ ಗೀರುತ್ತವೆ. ಬೇಟೆಯ ಸಂದರ್ಭದಲ್ಲಿ ತಣ್ಣಗೆ ಸಂಚು ಹೂಡುವ ಹುಲಿಗಳು, ತನ್ನ ಕುರಿತಾಗಿ ಕಾಡಿನಲ್ಲಿ ಭಯ ಹುಟ್ಟಿಸಲು ಮಾತ್ರ ಘರ್ಜಿಸುತ್ತವೆ. ಹುಲಿಗಳು ತನ್ನ ಹಾದಿಗೆ ಅಡ್ಡ ಬರುವ ಎಲ್ಲಾ ಜೀವಿಗಳನ್ನು ತಿನ್ನುತ್ತದೆ. ಜಿಂಕೆ, ಮೊಲ, ಕಾಡುಹಂದಿ, ಸಾರಂಗ, ಕಡವೆ, ಕರಡಿ, ಘೇಂಡಾಮೃಗ, ಕಾಡುಕೋಣ, ಹಕ್ಕಿಗಳು, ಕೋತಿ, ಮೊಸಳೆ, ಮೀನು ಕೊನೆಗೆ ಇನ್ನೊಂದು ವೈಲ್ಡ್ ಕ್ಯಾಟ್ ಆದ ಚಿರತೆಯೂ ಸಹ ಹುಲಿಗಳ ಸ್ವಾಭಾವಿಕ ಆಹಾರ. ಒಂದು ಬಾರಿ ಬೇಟೆಯಾಡಿದ ಪ್ರಾಣಿಯನ್ನು ಪಾಂಗಿತವಾಗಿ ತಿಂದು ಹೋಗುವ ಹುಲಿ ಮತ್ತೊಮ್ಮೆ ಅದೇ ಜಾಗಕ್ಕೆ ಬಂದು ಉಳಿದ ಆಹಾರವನ್ನು ಮುಗಿಸುತ್ತದೆ. ಎರಡನೆಯ ಬಾರಿ ತನ್ನ ಬೇಟೆಯ ಬಳಿ ಬರುವಾಗ ಹುಲಿ ತೆಗೆದುಕೊಳ್ಳುವ ಮೃಗ ಸಹಜ ಎಚ್ಚರಿಕೆ ಇದೆಯಲ್ಲ ಅದು ಅಪೂರ್ವ. ಹುಲಿಗಳನ್ನು ಅಷ್ಟು ಸುಲಭವಾಗಿ ಮೋಸ ಮಾಡಲು ಸಾಧ್ಯವಿಲ್ಲ. ಸಾಮಾನ್ಯವಾಗಿ ಮನುಷ್ಯ ಹುಲಿಯ ಸ್ವಾಭಾವಿಕ ಆಹಾರವಲ್ಲ. ಮಾನವ ಹುಲಿಯನ್ನು ಪಳಗಿಸಬಲ್ಲ. ಆದರೆ ಒಮ್ಮೆ ರಕ್ತದ ರುಚಿ ಕಂಡ ನರಭಕ್ಷಕ ಹುಲಿ ಮಾತ್ರ ತೀರಾ ಅಪಾಯಕಾರಿ.
ಹುಲಿಗಳ ಕುರಿತಾಗಿ ನಮ್ಮಲ್ಲಿ ಬಹುತೇಕರಿಗೆ ಗೊತ್ತಿಲ್ಲದ ಕೆಲವು ಕುತೂಹಲಕಾರಿ ಸಂಗತಿಗಳು:
ಪೋಲಾರ್ ಕರಡಿಗಳು ಮತ್ತು ಕಂದು ಕರಡಿಗಳನ್ನು ಹೊರತುಪಡಿಸಿದರೆ ಇಡೀ ಸೃಷ್ಟಿಯ ಮೂರನೆಯ ಅತಿ ದೈತ್ಯ ಮಾಂಸಾಹಾರಿ ಪ್ರಾಣಿ ದಿ ಬಿಗ್ಗೆಸ್ಟ್ ವೈಲ್ಡ್ ಕ್ಯಾಟ್ ಹುಲಿಗಳು
ಪ್ರಬುದ್ಧಮಾನಕ್ಕೆ ಬಂದ ಒಂದು ಸೈಬೀರಿಯನ್ ಹುಲಿ ಸುಮಾರು 660 ಪೌಂಡ್ ಗಳಷ್ಟು ತೂಕವಿರುತ್ತದೆ; ಹುಲಿಗಳಲ್ಲೇ ಅತ್ಯಂತ ಹಗುರವಾದ ಜೀವಿಗಳೆಂದರೆ ಸುಮಾತ್ರ ಹುಲಿಗಳು. ಇವು ಗರಿಷ್ಟ 310 ಪೌಂಡ್ ತೂಗುತ್ತವೆ.
ಬೆಕ್ಕಿನ ಜಾತಿಯ ಜೀವಿಗಳಲ್ಲಿ ಮೈಯ ಚರ್ಮದ ತುಂಬಾ ಪಟ್ಟೆ ಪಟ್ಟೆ ಇರುವ ಜೀವಿಗಳಾದ ಹುಲಿಗಳಲ್ಲಿ ಪ್ರತೀ ಹುಲಿಗಳ ಮೈಯ ಪಟ್ಟೆಗಳ ಆಧಾರದಲ್ಲಿ ವರ್ಗಿಕರಿಸಬಹುದು. ಮನುಷ್ಯನ ಬೆರಳಚ್ಚು ಹೇಗೆ ಒಬ್ಬರಿಗಿಂತ ಇನ್ನೊಬ್ಬರದ್ದು ಭಿನ್ನವಾಗಿರುತ್ತದೆ. ಸುಮಾತ್ರನ್ ಹುಲಿಗಳ ದೇಹದ ಪಟ್ಟಿಗಳು ಹತ್ತಿರ ಹತ್ತಿರದಲ್ಲಿರುತ್ತವೆ.
ಹುಲಿಗಳ ಬಾಲ ಗರಿಷ್ಟ 3 ಅಡಿಯಷ್ಟು ಉದ್ದವಿರುತ್ತದೆ. ಹುಲಿಗಳಿಗೆ ತಮ್ಮ ದೇಹದ ಸಮತೋಲನಕ್ಕಾಗಿ ಈ ಬಾಲಗಳೇ ಆಧಾರ. ಹುಲಿಗಳ ಬಾಲ ಅದರ ಬೆನ್ನುಮೂಳೆಯ ಮುಂದುವರಿಕೆ. ಬಾಲ ಕತ್ತರಿಸಿದ ಹುಲಿ ಹೆಚ್ಚು ಕಾಲ ಬದುಕುವುದಿಲ್ಲ.
ಒಂದು ವಯಸ್ಕ ಹುಲಿಗೆ ಒಂದು ಸಲದ ಭೋಜನಕ್ಕೆ 88 ಪೌಂಡ್ ನಷ್ಟು ಮಾಂಸ ಬೇಕು. ಒಮ್ಮೆ ಬೇಟೆಯಾಡಿದ ಹುಲಿ ಆನಂತರ 5 ರಿಂದ 6 ದಿನಗಳ ತನಕ ಬೇಟೆಯಾಡುವುದಿಲ್ಲ. ಹೊಟ್ಟೆ ತುಂಬಿದ ವ್ಯಾಘ್ರ ಮೋಜಿಗಾಗಿ ಬೇಟೆಯಾಡುವುದಿಲ್ಲ.
ಹುಲಿಗಳ ಘರ್ಜನೆ ಸುಮಾರು 2 ಕಿಲೋಮೀಟರ್ ವರೆಗೂ ಕೇಳಿಸುತ್ತದೆ. ರಾತ್ರಿಯಲ್ಲಿ ಹುಲಿಗಳು ದೃಷ್ಟಿ ಎಷ್ಟು ತೀಕ್ಷ್ಣವೆಂದರೆ ಕತ್ತಲಲ್ಲಿ ಮನುಷ್ಯನ ದೃಷ್ಟಿಗಿಂತ 6 ಪಟ್ಟು ಹೆಚ್ಚು ಪರಿಪೂರ್ಣವಾಗಿರುತ್ತವೆ ಹುಲಿಗಳ ದೃಷ್ಟಿಶಕ್ತಿ.
ಹುಲಿಗಳ ಹಿಂಗಾಲು ಮುಂಗಾಲಿಗಿಂತ ನೀಳವಾಗಿರುತ್ತವೆ, ಇದರಿಂದ ಅವುಗಳಿಗೆ ಆಗುವ ಅನುಕೂಲವೆಂದರೆ ಹುಲಿಗಳು ಬರೋಬ್ಬರಿ 20-30 ಅಡಿಗಳಷ್ಟು ಉದ್ದಕ್ಕೆ ಚಿಮ್ಮಿ ನೆಗೆಯುತ್ತವೆ.
ಹುಲಿಗಳು ಬೇಟೆಯಾಡಲು ಹೊರಟರೆ ಎದುರಿಗೆ ದೈತ್ಯಗಾತ್ರ ಆನೆಯೇ ಎದುರಾದರೂ ಬೇಟೆಯಾಡುತ್ತವೆ.
ಬಿಳಿ ಹುಲಿಗಳೆಂದರೆ ಅವು ಪ್ರತ್ಯೇಕ ಹುಲಿಯ ಪ್ರಭೇಧವಲ್ಲ. ಭಿನ್ನ ವಾತಾವರಣದ ಕಾರಣ ಚರ್ಮದ ವರ್ಣತಂತುಗಳ ಬದಲಾವಣೆಯಿಂದ ಬಿಳಿಯ ಬಣ್ಣದಲ್ಲಿರುತ್ತವೆಯಷ್ಟೇ. ಬಿಳಿ ಹುಲಿಗಳ ಕಣ್ಣು ಸಾಮಾನ್ಯವಾಗಿ ನೀಲಿಯಿರುತ್ತದೆ.
ಹುಲಿಗಳ ಒಂದು ಪ್ರಬೇಧವಾದ ಜಾವಾ ಹುಲಿಗಳು ಸೃಷ್ಟಿಯಿಂದ ಸಂಪೂರ್ಣ ನಾಶವಾಗಿದೆ ಎನ್ನುವ ಮಾಹಿತಿಯಿದೆ.
-ವಿಭಾ (ವಿಶ್ವಾಸ್ ಭಾರದ್ವಾಜ್)