ಸಚಿನ್ ತೆಂಡುಲ್ಕರ್ ಯಾವತ್ತೂ ಕರುಣೆ ಇಲ್ಲದ ಆಟಗಾರನಲ್ಲ – ಕಪಿಲ್ ದೇವ್
ಸಚಿನ್ ತೆಂಡುಲ್ಕರ್ ವಿಶ್ವ ಕ್ರಿಕೆಟ್ ನಲ್ಲಿ ಮಾಡಿರದಂತಹ ದಾಖಲೆಗಳಿಲ್ಲ. ಸಾಧನೆಗಳಿಲ್ಲ. ಬಹುತೇಕ ದಾಖಲೆಗಳಲ್ಲಿ ಸಚಿನ್ ಹೆಸರು ಕಾಣಿಸಿಕೊಳ್ಳುತ್ತದೆ. ಈಗಲೂ ಶತಕಗಳ ಪಟ್ಟಿಯಲ್ಲಿ ಸಚಿನ್ ಹೆಸರು ಮೊದಲ ಸಾಲಿನಲ್ಲಿದೆ. ಆದ್ರೆ ದ್ವಿಶತಕ ಮತ್ತು ತ್ರಿಶತಕದ ದಾಖಲೆಗಳಲ್ಲಿ ಸಚಿನ್ ಹೆಸರು ಕಾಣಿಸುತ್ತಿಲ್ಲ. ಸಚಿನ್ ದಾಖಲಿಸಿರುವುದು ಆರು ದ್ವಿಶತಕಗಳನ್ನು. ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್ ಅವರು 12 ದ್ವಿಶತಕ ದಾಖಲಿಸಿದ್ದಾರೆ. ದ್ವಿಶತಕದ ದಾಖಲೆಯಲ್ಲಿ ಸಚಿನ್ 12ನೇ ಸ್ಥಾನದಲ್ಲಿದ್ದಾರೆ. ಅದೇ ರೀತಿ ಸಚಿನ್ಗೆ ತ್ರಿಶತಕ ದಾಖಲಿಸಲು ಕೂಡ ಸಾಧ್ಯವಾಗಿಲ್ಲ. 200 ಟೆಸ್ಟ್ ಪಂದ್ಯಗಳನ್ನು ಆಡಿರುವ ಸಚಿನ್ಗೆ ಗರಿಷ್ಠ ದ್ವಿಶತಕ ಮತ್ತು ತ್ರಿಶತಕ ದಾಖಲಿಸುವ ಪ್ರತಿಭೆಯೂ ಇತ್ತು. ಅವಕಾಶವೂ ಇತ್ತು. ಆದ್ರೂ ಕ್ರಿಕೆಟ್ ದೇವ್ರಿಗೆ ಅದ್ಯಾಕೋ ಸಾಧ್ಯವಾಗಲಿಲ್ಲ.
ಆದ್ರೆ ಸಚಿನ್ಗೆ ಯಾಕೆ ಸಾಧ್ಯವಾಗಿಲ್ಲ ಎಂದು ಮಾಜಿ ಭಾರತ ತಂಡದ ನಾಯಕ, 1983ರ ವಿಶ್ವಕಪ್ ಹೀರೋ ಕಪಿಲ್ ದೇವ್ ಹೇಳಿದ್ದಾರೆ. ಸಚಿನ್ ಅದ್ಭುತ ಪ್ರತಿಭಾವಂತ. ಅಂತಹ ಪ್ರತಿಭೆ ಇರುವಂತಹ ಕ್ರಿಕೆಟಿಗನನ್ನು ನಾನು ಇಲ್ಲಿಯವರೆಗೆ ನೋಡಿಲ್ಲ. ಸಚಿನ್ಗೆ ಶತಕ ಹೇಗೆ ದಾಖಲಿಸುವುದು ಅಂತ ಚೆನ್ನಾಗಿ ಗೊತ್ತು. ಹಾಗಂತ ಆತ ಯಾವತ್ತಿಗೂ ಕರುಣೆ ಇಲ್ಲದ ಆಟಗಾರನಲ್ಲ. ಶತಕದ ಬಳಿಕ ಅದನ್ನು ದ್ವಿಶತಕ ಮತ್ತು ತ್ರಿಶತಕಕ್ಕೆ ಹೇಗೆ ಪರಿವರ್ತನೆ ಮಾಡಬೇಕು ಎಂಬುದು ಸಚಿನ್ಗೆ ತಿಳಿದಿರಲಿಲ್ಲ ಎಂದು ಕಪಿಲ್ ದೇವ್ ಹೇಳಿದ್ದಾರೆ.
ನನ್ನ ಪ್ರಕಾರ ಸಚಿನ್ ಕನಿಷ್ಠ ಅಂದ್ರು ಐದು ತ್ರಿಶತಕ ಹಾಗೂ 10ಕ್ಕಿಂತಲೂ ಅಧಿಕ ದ್ವಿಶತಕ ದಾಖಲಿಸುವ ಅವಕಾಶಗಳಿದ್ದವು. ಯಾಕಂದ್ರೆ ಸಚಿನ್ಗೆ ವೇಗದ ಬೌಲರ್ಗಳಿಗೆ ಮತ್ತು ಸ್ಪಿನ್ನರ್ಗಳಿಗೆ ಬೌಂಡರಿ ಹೊಡೆಯುವಂತವ ಸಾಮಥ್ರ್ಯವಿತ್ತು ಎಂದು ಕಪಿಲ್ ಹೇಳಿದ್ದಾರೆ. ಟೆಸ್ಟ್ ಕ್ರಿಕೆಟ್ ನಲ್ಲಿ ಸಚಿನ್ 51 ಶತಕಗಳನ್ನು ದಾಖಲಿಸಿದ್ದಾರೆ. ಹಾಗೇ ಅವರು 10 ವರ್ಷಗಳ ಬಳಿಕ ಮೊದಲ ದ್ವಿಶತಕ ದಾಖಲಿಸಿದ್ದರು. 1999ರಲ್ಲಿ ಹೈದ್ರಬಾದ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ ಸಚಿನ್ ಚೊಚ್ಚಲ ದ್ವಿಶತಕ ದಾಖಲಿಸಿದ್ದರು. ಇನ್ನು 51 ಶತಕಗಳಲ್ಲಿ 20 ಬಾರಿ 150ಕ್ಕೂ ಅಧಿಕ ರನ್ ದಾಖಲಿಸಿದ್ದರು. ಸಚಿನ್ ಏಕದಿನ ಕ್ರಿಕೆಟ್ ನಲ್ಲಿ ದ್ವಿಶತಕ ದಾಖಲಿಸಿದ್ದ ಮೊದಲ ಆಟಗಾರ. ‘
ಸಚಿನ್ ತೆಂಡುಲ್ಕರ್ ಮತ್ತು ಕಪಿಲ್ ದೇವ್ ಜೊತೆಯಾಗಿಯೇ ಸುಮಾರು ಐದು ವರ್ಷಗಳ ಆಡಿದ್ದರು. ಹಾಗೇ ಕಪಿಲ್ ದೇವ್ ಭಾರತ ತಂಡದ ಕೋಚ್ ಆಗಿದ್ದಾಗಲೂ ಸಚಿನ್ ಆಡಿದ್ದರು. ಸಚಿನ್ ಮೈಂಡ್ ಸೆಟ್ ಬಗ್ಗೆ ಮಾತನಾಡಿದ್ದ ಕಪೀಲ್ ದೇವ್, ಶತಕ ದಾಖಲಿಸಿದ್ದ ನಂತರವೂ ಅವರು ಸೊನ್ನೆಯಿಂದಲೇ ಶುರು ಮಾಡುತ್ತಿದ್ದರು. ಇದಕ್ಕೆ ನಾನು ಹೇಳಿದ್ದು ಸಚಿನ್ ಕರುಣೆ ಇಲ್ಲದ ಆಟಗಾರನಲ್ಲ ಅಂತ. ಸಚಿನ್ ಅದ್ಭತ ಆಟಗಾರ. ಆದ್ರೆ ಶತಕದ ನಂತರವೂ ಅವರು ಸಿಂಗಲ್ಸ್ಗಾಗಿ ಆಡುತ್ತಿದ್ದರು. ಸಚಿನ್ ಕಠೋರನಲ್ಲ ಎಂದು ಕಪಿಲ್ ದೇವ್ ಅಭಿಪ್ರಾಯಪಟ್ಟಿದ್ದಾರೆ.