ರಫೇಲ್ ಜೆಟ್‌ಗಳನ್ನು ದೇಶಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಭಾರತದ ಐಎಎಫ್ ಅಧಿಕಾರಿ
ಹೊಸದಿಲ್ಲಿ, ಜುಲೈ 30: ಜುಲೈ 27 ರಂದು ಫ್ರಾನ್ಸ್‌ನಿಂದ ಹೊರಟ ಬಹುನಿರೀಕ್ಷಿತ ಐದು ರಾಫೆಲ್ ಫೈಟರ್ ಜೆಟ್‌ಗಳ ಮೊದಲ ಬ್ಯಾಚ್ ಬುಧವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಭಾರತವನ್ನು ತಲುಪಿದೆ.
ವಿಶ್ವದ ಅತ್ಯುತ್ತಮ ಫೈಟರ್ ಜೆಟ್‌ಗಳ ಆಗಮನದ ಕುರಿತಾದ ಐತಿಹಾಸಿಕ ಕ್ಷಣದಲ್ಲಿ, ಭಾರತೀಯ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಹಿಲಾಲ್ ಅಹ್ಮದ್ ರಾಥರ್ ನಿರ್ವಹಿಸಿದ ಪ್ರಮುಖ ಪಾತ್ರದ ಬಗ್ಗೆ ಗಮನಸೆಳೆದಿದ್ದಾರೆ. ರಫೇಲ್ ಜೆಟ್‌ಗಳನ್ನು ತ್ವರಿತವಾಗಿ ತಲುಪಿಸಲು ಕಾರಣಕರ್ತರಾಗಿರುವ ವ್ಯಕ್ತಿ ಏರ್ ಕಮೋಡೋರ್ ಹಿಲಾಲ್ ಅಹ್ಮದ್ ರಾಥರ್, ಅವರು ಪ್ರಸ್ತುತ ಫ್ರಾನ್ಸ್‌ಗೆ ಏರ್ ಅಟ್ಯಾಚ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

59,000 ಕೋಟಿ ರೂ.ಗಳ ಮೌಲ್ಯದ 36 ರಾಫೆಲ್ ಜೆಟ್‌ಗಳಿಗೆ ಭಾರತ ಮತ್ತು ಫ್ರಾನ್ಸ್ 2016 ರ ಸೆಪ್ಟೆಂಬರ್‌ನಲ್ಲಿ ಅಂತರ್ ಸರ್ಕಾರಿ ಒಪ್ಪಂದಕ್ಕೆ ಸಹಿ ಹಾಕಿದ್ದವು. ಭಾರತ ಖರೀದಿಸಿದ ಮೊದಲ ಬ್ಯಾಚ್ ರಫೇಲ್ ಫೈಟರ್ ಜೆಟ್‌ಗಳ ಆರಂಭಿಕ ವಿತರಣೆಯನ್ನು ಪಡೆಯಲು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು 2019 ರ ಅಕ್ಟೋಬರ್ 9 ರಂದು ಮೆರಿಗ್ನಾಕ್ ವಾಯುನೆಲೆಗೆ ಹೋಗಿದ್ದರು.
ದಕ್ಷಿಣ ಕಾಶ್ಮೀರದ ಅನಂತ್‌ನಾಗ್ ಜಿಲ್ಲೆಯಲ್ಲಿ ಮಧ್ಯಮ ವರ್ಗದಲ್ಲಿ ಜನಿಸಿದ ಹಿಲಾಲ್ ಅವರ ತಂದೆ ದಿವಂಗತ ಮೊಹಮ್ಮದ್ ಅಬ್ದುಲ್ಲಾ ಅವರು ಜೆ & ಕೆ ಪೊಲೀಸ್ ಇಲಾಖೆಯಲ್ಲಿ ಉಪ ಪೊಲೀಸ್ ವರಿಷ್ಠಾಧಿಕಾರಿಯಾಗಿ (ಡಿವೈ ಎಸ್‌ಪಿ) ನಿವೃತ್ತರಾದರು. ಅವರಿಗೆ ಮೂವರು ಸಹೋದರಿಯರಿದ್ದು, ಅವರು ಹೆತ್ತವರ ಏಕೈಕ ಪುತ್ರನಾಗಿದ್ದಾರೆ.
ಹಿಲಾಲ್ ಅವರನ್ನು ಡಿಸೆಂಬರ್ 17, 1988 ರಂದು ಭಾರತೀಯ ವಾಯುಸೇನೆಯಲ್ಲಿ ಫೈಟರ್ ಪೈಲಟ್ ಆಗಿ ನಿಯೋಜಿಸಲಾಯಿತು. ಅವರು 1993 ರಲ್ಲಿ ಫ್ಲೈಟ್ ಲೆಫ್ಟಿನೆಂಟ್, 2004 ರಲ್ಲಿ ವಿಂಗ್ ಕಮಾಂಡರ್, 2016 ರಲ್ಲಿ ಗ್ರೂಪ್ ಕ್ಯಾಪ್ಟನ್ ಮತ್ತು 2019 ರಲ್ಲಿ ಏರ್ ಕಮೋಡೋರ್ ಆದರು. ಅವರು ರಕ್ಷಣಾ ಸೇವೆಗಳ ಸಿಬ್ಬಂದಿ ಕಾಲೇಜಿನಿಂದ (ಡಿಎಸ್ಎಸ್ಸಿ) ಪದವಿ ಪಡೆದರು ಮತ್ತು ಏರ್ ವಾರ್ ಕಾಲೇಜಿನಿಂದ (ಯುಎಸ್ಎ) ಪದವಿ ಪಡೆದರು. ವಾಯುಸೇನಾ ಪದಕ ಮತ್ತು ವಿಶೀಷ್ಠ ಸೇವಾ ಪದಕವನ್ನು ಪಡೆದ ಹಿಲಾಲ್ ವಿವಿಧ ವಿಮಾನಗಳಲ್ಲಿ 3,000 ಅಪಘಾತ-ಮುಕ್ತ ಹಾರಾಟ ನಡೆಸಿದ್ದಾರೆ.

ಕಾಶ್ಮೀರದ ಅನಂತ್‌ನಾಗ್ ಮೂಲದ ಭಾರತೀಯ ವಾಯುಪಡೆಯ ಅಧಿಕಾರಿ ರಫೇಲ್ ಜೆಟ್‌ಗಳನ್ನು ದೇಶಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ನಿವೃತ್ತ ಡಿಎಸ್ಪಿಯ ಮಗ ಕಳೆದ ಕೆಲವು ವರ್ಷಗಳಿಂದ ಭಾರತದ ಪರಿಸ್ಥಿತಿಗಳಿಗೆ ತಕ್ಕಂತೆ ಯುದ್ಧ ವಿಮಾನವನ್ನು ಶಸ್ತ್ರಸಜ್ಜಿತಗೊಳಿಸಿದ್ದಾರೆ. 13 ಭಾರತೀಯ ವಿಶೇಷಣಗಳ ಶಸ್ತ್ರಾಸ್ತ್ರಗಳೊಂದಿಗೆ ರಫೇಲ್ ವಿಮಾನವನ್ನು ಹೊಂದಿಸಲು ಯೋಜನಾ ನಿರ್ವಹಣಾ ತಂಡಕ್ಕೆ ಸಹಾಯ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ರಾಥರ್ ಜೊತೆಗೆ, ಫ್ರಾನ್ಸ್‌ನ ಭಾರತೀಯ ರಾಯಭಾರಿ ಜಾವೇದ್ ಅಶ್ರಫ್ ಕೂಡ ರಫೇಲ್ ಜೆಟ್‌ಗಳನ್ನು ಭಾರತಕ್ಕೆ ತಲುಪಿಸುವುದನ್ನು ಖಾತ್ರಿಪಡಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದಾರೆ. ಫ್ರಾನ್ಸ್‌ನಿಂದ ಹೊರಟ ಐದು ಯುದ್ಧ ಜೆಟ್ ಗಳು ಬುಧವಾರ ಅಂಬಾಲಾ ವಾಯುಪಡೆಯ ನಿಲ್ದಾಣಕ್ಕೆ ಬಂದಿಳಿದಿವೆ.








