ಐಪಿಎಲ್ಗೆ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ಇಲ್ಲ..?
13ನೇ ಆವೃತ್ತಿಯ ಐಪಿಎಲ್ ಟೂರ್ನಿ ಯುಎಇನಲ್ಲಿ ಬಹುತೇಕ ಫಿಕ್ಸ್ ಆಗಿದೆ. ಸೆಪ್ಟಂಬರ್ 19ರಿಂದ ನವೆಂಬರ್ 8ರವರೆಗೆ ಐಪಿಎಲ್ ಟೂರ್ನಿ ನಡೆಯಲಿದೆ. ಇನ್ನೊಂದು ಮೂಲಗಳ ಪ್ರಕಾರ ಐಪಿಎಲ್ ಫೈನಲ್ ಪಂದ್ಯ ನವೆಂಬರ್ 10 ಅಂತ ಹೇಳಲಾಗುತ್ತಿದೆ. ಯಾವುದಕ್ಕೂ ಮುಂದಿನ ವಾರ ನಡೆಯಲಿರುವ ಐಪಿಎಲ್ ಗವರ್ನಿಂಗ್ ಸಭೆಯಲ್ಲಿ ಅಂತಿಮ ವೇಳಾಪಟ್ಟಿ ಪ್ರಕಟಗೊಳ್ಳಲಿದೆ.
ಈ ನಡುವೆ ಬಿಸಿಸಿಐ ಡಿಸೆಂಬರ್ ನಲ್ಲಿ ನಡೆಯಲಿರುವ ಆಸ್ಟ್ರೇಲಿಯಾ ಸರಣಿಯನ್ನು ಎದುರು ನೋಡುತ್ತಿದೆ. ಹೀಗಾಗಿ ಐಪಿಎಲ್ಗೆ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವ ಪ್ಲಾನ್ ಮಾಡಿಕೊಂಡಿತ್ತು. ಆದ್ರೆ ಕೋವಿಡ್-19 ದಿನದಿಂದ ದಿನಕ್ಕೆ ಜಾಸ್ತಿಯಾಗಿರುವುದರಿಂದ ಬಿಸಿಸಿಐ ಈ ಬಗ್ಗೆ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ. ಆದ್ರಿಂದ ಐಪಿಎಲ್ಗೆ ಮುನ್ನ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವುದು ಅನುಮಾನವಾಗಿದೆ.
ಈ ಹಿಂದೆ ಗುಜರಾತ್ನ ಮೊಟೇರಾ ಕ್ರೀಡಾಂಗಣದಲ್ಲಿ ಟೀಮ್ ಇಂಡಿಯಾ ಆಟಗಾರರಿಗೆ ತರಬೇತಿ ಶಿಬಿರ ನಡೆಸುವ ಯೋಜನೆಯನ್ನು ಬಿಸಿಸಿಐ ಹಾಕಿಕೊಂಡಿತ್ತು. ಆದ್ರೆ ಗುಜರಾತ್ ಕ್ರಿಕೆಟ್ ಸಂಸ್ಥೆಗೆ ಬಿಸಿಸಿಐನಿಂದ ಇನ್ನೂ ಅಧಿಕೃತ ಮಾಹಿತಿ ಹೊರಬಂದಿಲ್ಲ. ಮತ್ತೊಂದೆಡೆ ಆಟಗಾರರು ಐಪಿಎಲ್ಗೆ ಸಿದ್ಧತೆ ನಡೆಸುತ್ತಿರುವುದರಿಂದ ಟೀಮ್ ಇಂಡಿಯಾ ತರಬೇತಿ ಶಿಬಿರ ನಡೆಸುವುದು ಅಸಾಧ್ಯವಾಗಿದೆ. ಹೀಗಾಗಿ ಚೇತೇಶ್ವರ ಪೂಜಾರ ಮತ್ತು ಹನುಮಾ ವಿಹಾರಿ ಮಾತ್ರ ಟೆಸ್ಟ್ ಸರಣಿಗೆ ಭಾರತದಲ್ಲಿ ಅಭ್ಯಾಸ ನಡೆಸಬೇಕಾಗುತ್ತದೆ. ಈಗಾಗಲೇ ಚೇತೇಶ್ವರ ಪೂಜಾರ ಮತ್ತು ಹನುಮಾ ವಿಹಾರಿ ತಮ್ಮ ತವರಿನಲ್ಲೇ ಲಘುವಾಗಿ ಅಭ್ಯಾಸ ನಡೆಸುತ್ತಿದ್ದಾರೆ.
ಈ ನಡುವೆ, ಐಪಿಎಲ್ ಫ್ರಾಂಚೈಸಿಗಳು ಪೂರ್ವ ತಯಾರಿ ನಡೆಸುತ್ತಿವೆ. ಆಗಸ್ಟ್ ನಲ್ಲಿ ಐಪಿಎಲ್ ತಂಡದ ಆಟಗಾರರು ದುಬೈಗೆ ಪ್ರಯಾಣ ಬೆಳೆಸಲಿದ್ದಾರೆ. ಅಲ್ಲಿ ಕೋವಿಡ್-19 ಮಾರ್ಗಸೂಚಿ ಮತ್ತು ಶಿಷ್ಟಚಾರದ ಪ್ರಕಾರ ತರಬೇತಿ ಶಿಬಿರ ನಡೆಯಲಿದೆ.
ಯುಎಇನಲ್ಲಿ ಐಪಿಎಲ್ ಮುಗಿದ ತಕ್ಷಣ ಟೀಮ್ ಇಂಡಿಯಾ ಆಟಗಾರರು ಆಸ್ಟ್ರೇಲಿಯಾ ಪ್ರಯಾಣ ಮಾಡಲಿದ್ದಾರೆ. ಆಸ್ಟ್ರೇಲಿಯಾದಲ್ಲಿ 14 ದಿನಗಳ ಕ್ವಾರಂಟೈನ್ ಜೊತೆಗೆ ಅಭ್ಯಾಸದಲ್ಲೂ ನಿರತರಾಗಬೇಕಾಗುತ್ತದೆ. ಅದೇ ರೀತಿ ಆಗಸ್ಟ್ ಅಥವಾ ಸೆಪ್ಟಂಬರ್ನಲ್ಲಿ ಆಸ್ಟ್ರೇಲಿಯಾ ಟೆಸ್ಟ್ ಸರಣಿಗೆ ಟೀಮ್ ಇಂಡಿಯಾವನ್ನು ಆಯ್ಕೆ ಮಾಡುವ ಸಾಧ್ಯತೆಯೂ ಇದೆ. ಡಿಸೆಂಬರ್ 3ರಿಂದ ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ ಮೊದಲ ಟೆಸ್ಟ್ ಪಂದ್ಯ ನಡೆಯಲಿದೆ.