ಇತ್ತೀಚೆಗೆ ರಾಜ್ಯದಲ್ಲಿ ಪಾಕಿಸ್ತಾನ ಪರ ಘೋಷಣೆ ಕೂಗುವ ಪ್ರಕರಣಗಳು ಹೆಚ್ಚಾಗುತ್ತಲೇ ಇವೆ. ಇತ್ತ, ಕಲಬುರಗಿಯಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂದು ಮನೆಯೊಂದರ ಗೋಡೆ ಮೇಲೆ ಕಿಡಿಗೇಡಿಗಳು ಬರೆದಿರುವ ಪ್ರಕರಣಗಳು ಬೆಳಕಿಗೆ ಬಂದಿದೆ.
ಕಲಬುರಗಿ ನಗರದ ಸಾತ್ ಗುಂಬಜ್ ನಗರದ ಕಿಶನ್ ರಾವ್ ಹಾಗರಗುಂಡಗಿ ಎಂಬುವರ ಮನೆಯ ಗೋಡೆಯ ಮೇಲೆ ಕಿಡಿಗೇಡಿಗಳು ಪಾಕಿಸ್ತಾನ್ ಪರ ಘೋಷಣೆಯ ವಾಕ್ಯ ಬರೆಯುವ ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಅವಹೇಳನಕಾರಿಯಾಗಿ ಬರೆದು ಅಪಮಾನ ಮಾಡಿದ್ದಾರೆ.
ಇನ್ನು, ಮನೆಯ ಪಕ್ಕದಲ್ಲೇ ನಿಂತಿದ್ದ ಅಬ್ದುಲ್ ಎಂಬುವರ ಕಾರಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಲು ಯತ್ನಿ, ಪರಾರಿಯಾಗಿದ್ದಾರೆ. ಈ ಘಟನೆ ಸಂಬಂಧ ಸ್ಥಳಕ್ಕೆ ಆಗಮಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಇಷ್ಟು ದಿವಸ ಪ್ರತಿಭಟನೆಯ ವೇದಿಕೆ ಮೇಲೆ, ಸಾಮಾಜಿಕ ಜಾಲತಾಣಗಳಲ್ಲಿ ಪಾಕ್ ಪರ ಘೋಷಣೆ ಕೂಗಿ ದೇಶದ್ರೋಹ ಕೃತ್ಯವೆಸಗುತ್ತಿದ್ದವರು ಇದೀಗ ಮನೆಮನೆಗಳ ಗೋಡೆ ಮೇಲೆ ಪಾಕ್ ಪರ ಘೋಷವಾಕ್ಯ ಬರೆಯಲು ಶುರು ಮಾಡಿಕೊಂಡಿರುವುದು ಪೊಲೀಸರ ನಿದ್ದೆಗೆಡಿಸಿದೆ.








